ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಕನೂರು | ಗುದ್ನೇಶ್ವರ ಸ್ವಾಮಿ ರಥೋತ್ಸವ ಇಂದು

ತಾಲ್ಲೂಕಿನ ಗುದ್ನೇಪ್ಪನ ಮಠದ ಪಂಚಕಳಸ ರಥೋತ್ಸವ ಡಿ. 26ರಂದು
Published 26 ಡಿಸೆಂಬರ್ 2023, 8:22 IST
Last Updated 26 ಡಿಸೆಂಬರ್ 2023, 8:22 IST
ಅಕ್ಷರ ಗಾತ್ರ

ಕುಕನೂರು: ತಾಲ್ಲೂಕಿನ ಗುದ್ನೆಪ್ಪನ ಮಠದ ಗುದ್ನೇಶ್ವರ ಸ್ವಾಮಿ ಪಂಚಕಳಸ ರಥೋತ್ಸವವು ಡಿ.26ರಂದು ಅದ್ಧೂರಿಯಾಗಿ ನೆರವೇರಲಿದೆ. ಹೊಸ್ತಿಲ ಹುಣ್ಣಿಮೆ ನಿಮಿತ್ತ ಬಿನ್ನಾಳ ಬಸವೇಶ್ವರ ದೇವರ ನಂದಿಕೋಲ ಆಗಮಿಸಿದ ಬಳಿಕ ಮಧ್ಯಾಹ್ನ 4 ಗಂಟೆಗೆ ರಥೋತ್ಸವವು ನೆರವೇರಲಿದೆ.

ಗುದ್ನೇಶ್ವರ ದೇವಸ್ಥಾನವು ಪುರಾತನವಾದದ್ದು, ಐತಿಹಾಸಿಕ ಹಿನ್ನೆಲೆ ಹೊಂದಿದೆ. ನಗರದ ಗುದ್ನೇಶ್ವರಮಠದ ಅಧಿ ದೈವ ರುದ್ರಮುನೀಶ್ವರ ದೇವರು. ಪವಾಡ ಪುರುಷ ರುದ್ರಮುನೀಶ್ವರರು, ಭಕ್ತರಿಗಾಗಿ ಅನೇಕ ಲೀಲೆಗಳನ್ನು ಮಾಡಿದ್ದಾರೆ. ಕೊನೆಗೆ ಹಾವಿನ ರೂಪದಲ್ಲಿ ಹುತ್ತನ್ನು ಸೇರಿದ್ದರಿಂದ ಗುದ್ನೇಶ್ವರ ಎಂಬ ಹೆಸರು ಬಂದಿದೆ ಎಂಬ ಪ್ರತೀತಿಯಿದೆ.

ರುದ್ರಮುನಿಶ್ವರರ ತಂದೆ ರೇವಣಸಿದ್ದರು ಹಾಗೂ ತಾಯಿ ಸುಂದರನಾಚಿ. ಸುಂದರನಾಚಿ ಮೂರು ತಿಂಗಳ ಗರ್ಭಿಣಿಯಾಗಿದ್ದಾಗ, ರೇವಣಸಿದ್ದರು ಪಿಂಡವನ್ನು ಯೋಗ ಶಕ್ತಿಯಿಂದ ಹೊರ ತೆಗೆದು ಭೂದೇವಿಯ ಮಡಿಲಲ್ಲಿ ಹೂಳಿಸಿ, 9 ತಿಂಗಳಿಗೆ ಹೊರತೆಗೆಸುತ್ತಾರೆ. ಆ ಶಿಶುವೇ ರುದ್ರಮುನಿಶ್ವರು ಎಂದು ಪುರಾಣದಲ್ಲಿದೆ. ಆದರೆ ಈ ಪ್ರಯೋಗ ಈಗ ಪ್ರಣಾಳ ಶಿಶುವಿನ ರೂಪದಲ್ಲಿದೆ ಎಂದು ಸೇವಾ ಸಮಿತಿ ಅಧ್ಯಕ್ಷ ರುದ್ರಯ್ಯ ಶಿವಯ್ಯ ಹೇಳಿದರು.

ರುದ್ರಮುನೀಶ್ವರರು, ರಂಭಾಪುರಿ ಮಠದಲ್ಲಿ ವಿದ್ಯಾಭ್ಯಾಸ ಮಾಡುತ್ತಾರೆ. ಬಳಿಕ ಗುರುವಿನ ಅಪ್ಪಣೆ ಪಡೆದು, ದೇಶ ಸಂಚಾರ ಕೈಗೊಂಡು ಮಂಗಳವಾಡಿ, ಕಲ್ಯಾಣ, ಶರಣರ ಸಂದೋಹದಲ್ಲಿ ಶಿವಾನುಭವ ಮಂಟಪದಲ್ಲಿ ಭಾಗಿಯಾಗುತ್ತಾರೆ. ಕಲ್ಯಾಣಕ್ರಾಂತಿ ನಂತರ ವಚನ ಸಾಹಿತ್ಯ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಗುದ್ನೇಶ್ವರ ಸ್ವಾಮಿ ರಥೋತ್ಸವವು ಜಿಲ್ಲೆಯಲ್ಲೇ ಎರಡನೇ ಅತಿ ದೊಡ್ಡ ಉತ್ಸವವಾಗಿದೆ. ಸುಮಾರು 50 ಸಾವಿರಕ್ಕೂ ಹೆಚ್ಚ ಭಕ್ತರು ಸೇರುವ ನಿರೀಕ್ಷೆಯಿದೆ.
–ಎಚ್.ಪ್ರಾಣೇಶ, ತಹಶೀಲ್ದಾರ್‌

ಚನ್ನಬಸವಣ್ಣನವರ ಹಿರಿತನದಲ್ಲಿ ರುದ್ರಮುನಿಶ್ವರರು, ಶರಣರ ರಕ್ಷಣೆ ಭಾರ ಹೊತ್ತು ಉಳವಿ, ಯಲಬುರ್ಗಾ ತಾಲ್ಲೂಕಿನ ಚಿಕ್ಕಮ್ಯಾಗೇರಿ, ಕಲ್ಲೂರ, ಸಿದ್ನೇಕೊಪ್ಪ, ಅಂಕಲಗಿ ನಂತರ ಕುಕನೂರಿಗೆ ಆಗಮಿಸಿ ಕುಕನೂರಿನಲ್ಲಿರುವ ಕಲ್ಲಿನ ಗವಿಯಲ್ಲಿ ವಾಸಿಸಿ ದನಗಾಹಿಗಳ ನೆರವಿನಿಂದ ಭಕ್ತರಿಗೆ ಸಂದರ್ಶನ ಹಾಗೂ ಲೀಲೆಗಳು ಮಾಡುತ್ತಾ ಜನತೆಗೆ ಆಶಿರ್ವದಿಸುತ್ತ ಸಂಕಷ್ಟಗಳನ್ನು ಪರಿಸಹರಿಸುತ್ತಾರೆ ಎಂಬ ಮಾತಿದೆ ಎಂದು ಭಕ್ತರು ಹೇಳುತ್ತಾರೆ.

ಅರಸನು ದಾನ ಕೊಟ್ಟ ಭೂಮಿಯಲ್ಲಿ ಒಂದು ಘಳಿಗೆಯಲ್ಲಿ 500 ಎಕರೆ ಉತ್ತಿದ್ದರು. ಈ ವಿಷಯ ತಿಳಿದ ಅರಸ, ಅದನ್ನು ನಿಲ್ಲಿಸಲು ಹೇಳಿದ್ದಕ್ಕೆ ಕುಪಿತರಾದ ಮುನಿಗಳು ಸರ್ಪವಾಗಿ ಗುದ್ದಿನೊಳಗೆ ಸೇರುತ್ತಾರೆ. ಅಂದಿನಿಂದ ಅವರಿಗೆ ಗುದ್ದಿನೀಶ್ವರ (ಗುದ್ನೆಶ್ವರ) ಎಂಬ ಹೆಸರು ಬಂದಿತೆಂದು ಹೇಳಲಾಗುತ್ತದೆ. ಅವರು ಗುದ್ದಿನೊಳಗೆ ತಕ್ಷಣವೇ ಉತ್ತುವುದಕ್ಕಾಗಿ ಬಳಸಿದ್ದ ಬಸವಣ್ಣ(ನಂದಿ) ಹಾಗೂ ಒಟ್ಟಿದ ಬಣವೆಯು ಕಲ್ಲಾಯಿತೆಂದು ಹೇಳಲಾಗುತ್ತದೆ. ಅವರ ನಡೆದಾಡಿದ ಪಾದದ ಗುರುತುಗಳು ಕಲ್ಲು ಬಂಡೆಗಳ ಮೇಲೆ ಇರುವುದು ಇಂದಿಗೂ ಪ್ರಸ್ತುತವಾಗಿವೆ.

ಭಕ್ತರ ಕಾಮದೇನುವಾಗಿ ಇಂದಿಗೂ ನಂಬಿ ಬಂದ ಭಕ್ತರನ್ನು ಹರಸಿ ಅವರ ಇಷ್ಟಾರ್ಥಗಳನ್ನು ಪೂರೈಸಿ ಹರಕೆ ತೀರಿಸಲು ಜನರು ಆಗಮಿಸುತ್ತಾರೆ. ಮದುವೆಯಾದ ನವ ದಂಪತಿ ಪಂಚಕಳಸ ರಥೋತ್ಸವನ್ನು ನೋಡಬೇಕು ಎಂಬ ವಾಡಿಕೆಯಿದೆ ಎಂದು ಕಂದಾಯ ನಿರೀಕ್ಷಕ ರಂಗನಾಥ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT