ಶನಿವಾರ, ನವೆಂಬರ್ 26, 2022
24 °C
ಭಾರತ ಐಕ್ಯತಾ ಯಾತ್ರೆಯ ಪೂರ್ವಭಾವಿ ಸಭೆ: ಸಂತೋಷ್‌ ಲಾಡ್ ಹೇಳಿಕೆ

ಕಾಂಗ್ರೆಸ್‌ನಿಂದ ಮಾತ್ರ ದೇಶದ ಉಳಿವು: ಸಂತೋಷ್‌ ಲಾಡ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊಪ್ಪಳ: ‘ಸುಳ್ಳು ಭರವಸೆ ನೀಡಿ ಜನರನ್ನು ಕಷ್ಟಕೆ ತಳ್ಳಿರುವ ಬಿಜೆಪಿಯಿಂದ ದೇಶ ಅವನತಿಯತ್ತ ಸಾಗುತ್ತಿದೆ. ಕಾಂಗ್ರೆಸ್‌ನಿಂದ ಮಾತ್ರ ದೇಶದ ಉಳಿವು ಸಾಧ್ಯವಿದ್ದು, ಭಾರತ್ ಜೊಡೊ ಯಾತ್ರೆಯಲ್ಲಿ ನೀವೆಲ್ಲರೂ ಪಾಲ್ಗೊಳ್ಳಬೇಕು. ದೇಶವನ್ನು ಒಂದುಗೂಡಿಸಬೇಕು’ ಎಂದು ಕಾಂಗ್ರೆಸ್‌ ಜಿಲ್ಲಾ ಉಸ್ತುವಾರಿ ಸಂತೋಷ್‌ ಲಾಡ್ ಹೇಳಿದರು.

ಅ. 19ರಂದು ಭಾರತ ಐಕ್ಯತಾ ಯಾತ್ರೆ ಬಳ್ಳಾರಿಗೆ ಬರಲಿರುವ ಹಿನ್ನೆಲೆಯಲ್ಲಿ ಜಿಲ್ಲಾ ಕಾಂಗ್ರೆಸ್‌ ಗ್ರಾಮೀಣ ಮತ್ತು ನಗರ ಘಟಕದ ವತಿಯಿಂದ ಶನಿವಾರ ನಗರದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು ‘ಬಿಜೆಪಿಯಿಂದ ದೇಶದ ಜನ ಎದುರಿಸುತ್ತಿರುವ ಆರ್ಥಿಕ ಸಂಕಷ್ಟಗಳನ್ನು ನಮ್ಮ ಕಾರ್ಯಕರ್ತರು ಮತದಾರರ ಮನೆ ಮನೆಗೆ ಹೇಳಬೇಕು. ಉಳ್ಳವರು ತಮ್ಮ ಸಂಪತ್ತು ಹೆಚ್ಚಿಸಿಕೊಳ್ಳುತ್ತಲೇ ಇದ್ದಾರೆ . ಬಿಜೆಪಿ ಹಿಂದೂ ಹಾಗೂ ಮುಸ್ಲಿಂ ನಡುವೆ ವೈಷಮ್ಯ ಬೆಳೆಸಿ ತನ್ನ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದೆ’ ಎಂದು ಹರಿಹಾಯ್ದರು.

ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಶಿವರಾಜ ತಂಗಡಗಿ ‘ಸಿದ್ದರಾಮಯ್ಯ ಅವರು ಹಿಂದೆ ಬಳ್ಳಾರಿ ತನಕ ಪಾದಯಾತ್ರೆ ಮಾಡಿ ಅಲ್ಲಿ ಸೇರಿದ್ದ ಸಮಾವೇಶ ಇತಿಹಾಸ ಬರೆದಿತ್ತು. ಅದೇ ರೀತಿ ಈಗಿನ ಕಾರ್ಯಕ್ರಮವನ್ನು ಯಶಸ್ವಿಯಾಗಿ ಸಂಘಟಿಸುತ್ತೇವೆ. ಕೊಪ್ಪಳ ಜಿಲ್ಲೆಯಿಂದ 50 ಸಾವಿರ ಜನರನ್ನು ಸೇರಿಸುವ ಗುರಿ ಹೊಂದಲಾಗಿದೆ’ ಎಂದರು.

‘ಸುಳ್ಳು ಭರವಸೆಗಳನ್ನು ನೀಡಿದ ಬಿಜೆಪಿಯ ತಪ್ಪುಗಳನ್ನು ಜನರಿಗೆ ತಲುಪಿಸಬೇಕು. ಸುಳ್ಳು ಹೇಳಿದವರಿಗೆ ಮುಂಬರುವ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಿ; ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ಐದು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ವಿಜಯ ಪತಾಕೆ ಹಾರಿಸಬೇಕು’ ಎಂದು ಮತದಾರರಿಗೆ ಕರೆ ನೀಡಿದರು.

ಮಾಜಿ ಶಾಸಕ ಕೆ. ಬಸವರಾಜ ಹಿಟ್ನಾಳ, ಮುಖಂಡರಾದ ಗೂಳಪ್ಪ ಹಲಗೇರಿ, ಕೆ.ಎಂ.ಸೈಯದ್, ಎಂ.ಕಾಟನ್ ಪಾಷಾ, ಶಾಂತಣ್ಣ ಮುದಗಲ್, ಇಮಾಮ್ ರಿಯಾಜ್, ಅಮ್ಜದ್ ಪಟೇಲ್, ಇಂದಿರಾ ಬಾವಿಕಟ್ಟಿ, ಎಸ್.ಬಿ.ನಾಗರಳ್ಳಿ, ಶಿವರಡ್ಡಿ ಭೂಮಕ್ಕನವರ್, ಶೈಲಜಾ ಹಿರೇಮಠ, ಪ್ರಸನ್ನ ಗಡಾದ್, ಜನಾರ್ದನ ಹುಲಗಿ, ಮಹಿಳಾ ಘಟಕದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜ್ಯೋತಿ ಗೊಂಡಬಾಳ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ಅಭಿವೃದ್ಧಿ ಕೆಲಸ ಶೂನ್ಯ: ಹಿಟ್ನಾಳ

ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಭಿವೃದ್ಧಿ ಕೆಲಸಗಳು ಏನೂ ಅಗಿಲ್ಲ ಎಂದು ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಆರೋಪಿಸಿದರು.

‘ರಾಜ್ಯದಲ್ಲಿ ಅಭಿವೃದ್ದಿ ಮರೀಚಿಕೆಯಾಗಿದೆ. ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದು, ಅವರ ಕುಟುಂಬದವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದರಿಂದ ಬೇಸತ್ತು ಹೋಗಿರುವ ಜನ ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆಲ್ಲಿಸಲು ಸಿದ್ಧರಾಗಿದ್ದಾರೆ. ಭಾರತ ಜೊಡೊ ಯಾತ್ರೆಗೆ ಎಲ್ಲರೂ ಬೆಂಬಲ ನೀಡಬೇಕು’ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು