ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂಗಾರು: ಬಿತ್ತನೆ ಬೀಜ, ಗೊಬ್ಬರಕ್ಕೆ ಬೇಡಿಕೆ

ಕೃಷಿ ಚಟುವಟಿಕೆಗೆ ಕಳೆ ತಂದ ಮಳೆ: ಶೇ 90 ಪ್ರದೇಶದಲ್ಲಿ ಬಿತ್ತನೆ; ರೈತ ಸಂಪರ್ಕ ಕೇಂದ್ರಗಳಲ್ಲಿ ಮೂಲಸೌಲಭ್ಯಗಳ ಕೊರತೆ
Last Updated 11 ಅಕ್ಟೋಬರ್ 2021, 2:53 IST
ಅಕ್ಷರ ಗಾತ್ರ

ಕೊಪ್ಪಳ: ಜಿಲ್ಲೆಯಲ್ಲಿ ಮುಂಗಾರು ಮತ್ತು ಹಿಂಗಾರು ಮಳೆ ಉತ್ತಮವಾಗಿ ಸುರಿದಿದ್ದು, ಹಲವು ವರ್ಷಗಳಿಂದ ಬರ ಅನುಭವಿಸಿದ್ದ ರೈತರು ಈಗ ತುಸು ನಿರಾಳವಾಗಿದ್ದಾರೆ.

ಶೇ 48ರಷ್ಟು ಮಾತ್ರ ಬಿತ್ತನೆ ಕಂಡು ಬರುತ್ತಿದ್ದ ಪ್ರದೇಶ ಈ ವರ್ಷ ಶೇ 90ರಷ್ಟು ಬಿತ್ತನೆಗೆ ಯೋಗ್ಯವಾಗಿದ್ದು, ಕೃಷಿ ಚಟುವಟಿಕೆಗಳು ಗರಿಗೆದರಿವೆ. ಹಿಂಗಾರು ಹಂಗಾಮಿನಲ್ಲಿ ಮುಖ್ಯವಾಗಿ ಜೋಳ, ಕಡಲೆ ಬೆಳೆಯುತ್ತಾರೆ. ಶೇಂಗಾ, ಹತ್ತಿ, ಗೋಧಿ, ಸೂರ್ಯಕಾಂತಿ, ಕುಸುಬೆ ಸೇರಿ ಇತರೆ ಬೀಜ ಬಿತ್ತನೆಗೆ ರೈತರು ಮುಂದಾಗಿದ್ದಾರೆ.

ಜಿಲ್ಲೆಯ ಕುಷ್ಟಗಿ, ಹನಮಸಾಗರ, ತಾವರಗೇರಾ, ಯಲಬುರ್ಗಾ, ಕುಕನೂರು, ಕೊಪ್ಪಳ, ಅಳವಂಡಿ, ಇರಕಲ್ಲಗಡಾ ಮತ್ತು ಕನಕಗಿರಿ ಭಾಗದಲ್ಲಿ ಬಹುತೇಕ ಕಡೆ ಮಳೆಯಾಗಿದ್ದು, ಕೃಷಿ ಕಾರ್ಯ ಎಡೆಬಿಡದೆ ಸಾಗುತ್ತಿದೆ. ಇದರಿಂದ ಬಿತ್ತನೆ ಬೀಜ ಮತ್ತು ಗೊಬ್ಬರಕ್ಕೆ ಹೆಚ್ಚಿನ ಬೇಡಿಕೆ ಇದ್ದು, ರೈತ ಸಂಪರ್ಕ ಕೇಂದ್ರಗಳು, ಖಾಸಗಿ ಅಗ್ರೋ ಫರ್ಟಿಲೈಸರ್ ಅಂಗಡಿಗಳ ಮುಂದೆ ಜನಜಂಗುಳಿಯೇ ಕಂಡು ಬರುತ್ತದೆ.

ಕಾರಟಗಿ ಮತ್ತು ಗಂಗಾವತಿಯಲ್ಲಿ ನೀರಾವರಿ ಪ್ರದೇಶದಲ್ಲಿ ವಾರ್ಷಿಕ ಎರಡನೇ ಬಾರಿ ಭತ್ತ ನಾಟಿ ಮಾಡಿದ್ದು, ಒಣಬೇಸಾಯದಲ್ಲಿ ಬಿತ್ತನೆ ಕಾರ್ಯ ಮುಗಿದ ನಂತರ ಇಲ್ಲಿ ಗೊಬ್ಬರಕ್ಕೆ ಹೆಚ್ಚಿನ ಬೇಡಿಕೆ ಬರುತ್ತದೆ. ಜಿಲ್ಲೆಗೆ ಬರುವ ಗೊಬ್ಬರ ಈ ಎರಡೇ ತಾಲ್ಲೂಕಿಗೆ ಶೇ 55ರಷ್ಟು ಪೂರೈಕೆಯಾಗುತ್ತದೆ. ಹೀಗಾಗಿ ಇಲ್ಲಿ ಬೀಜ, ಗೊಬ್ಬರ ಅಂಗಡಿಗಳಿಗೆ
ವ್ಯಾಪಕ ಬೇಡಿಕೆ ಇದೆ.

ರೈತ ಸಂಪರ್ಕ ಕೇಂದ್ರಗಳ ದುಃಸ್ಥಿತಿ: ಜಿಲ್ಲೆಯಲ್ಲಿರುವ ಬಹುತೇಕ ರೈತ ಸಂಪರ್ಕ ಕೇಂದ್ರಗಳಲ್ಲಿ ಮೂಲಸೌಲಭ್ಯಗಳ ಕೊರತೆ ಇದೆ. ಇಲ್ಲಿಗೆ ಬರುವ ರೈತರಿಗೆ ನೀರು, ನೆರಳು, ಕುಳಿತುಕೊಳ್ಳಲು ಆಸನವಿಲ್ಲದೆ. ಬಿತ್ತನೆ ಹಂಗಾಮಿನಲ್ಲಿ ನೂರಾರು ಸಂಖ್ಯೆಯಲ್ಲಿ ಬರುವ ರೈತರು ಬಿಸಿಲಿನಲ್ಲಿಯೇ ದಿನಗಟ್ಟಲೆ ಆಧಾರ್ ಕಾರ್ಡ್, ಪಹಣಿ ಪತ್ರ ಹಿಡಿದು ಕೊಂಡು ನಿಲ್ಲುವುದು ಕಂಡು ಬರುತ್ತದೆ. ಅಲ್ಲದೆ ಕೆಲವು ಕಟ್ಟಡಗಳು ಬಾಡಿಗೆ ಕಟ್ಟಡಗಳಲ್ಲಿ ಇವೆ.

ಈ ಕೇಂದ್ರಗಳನ್ನು ಸುಸಜ್ಜಿಗೊಳಿಸಬೇಕಾದ ಇಚ್ಛಾಶಕ್ತಿ ಆಳುವ ವರ್ಗಕ್ಕೆ ಬರಬೇಕಿದೆ. ಒಣಬೇಸಾಯದ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಈ ಕೇಂದ್ರಗಳ ಮೇಲೆ ಅವಲಂಬಿತರಾಗಿದ್ದಾರೆ. ಇಲ್ಲಿರುವ ಕಂಪ್ಯೂಟರ್, ನೆಟ್‌ವರ್ಕ್ ಮತ್ತು ಸಿಬ್ಬಂದಿ ಸಮಸ್ಯೆಯಿಂದ ನರಳುತ್ತಿವೆ.

ಬಿತ್ತನೆ ಪ್ರದೇಶ: ಜಿಲ್ಲೆಯಲ್ಲಿ 5 ಲಕ್ಷ ಹೆಕ್ಟೇರ್ ಜಮೀನು ಇದ್ದು, 4 ಲಕ್ಷ ಹೆಕ್ಟೇರ್‌ ಬಿತ್ತನೆಗೆ ಯೋಗ್ಯವಾಗಿದೆ. 3 ಲಕ್ಷ ಹೆಕ್ಟೇರ್ ಮಳೆಯಾಶ್ರಿತ ಜಮೀನು ಇದ್ದು, ಉತ್ತಮ ಮಳೆಯಾದರೆ ಮಾತ್ರ ಬಿತ್ತನೆ ಸಾಧ್ಯ. ಪ್ರತಿವರ್ಷ ಶೇ 50ರಷ್ಟು ದಾಟದ ಬಿತ್ತನೆ ವ್ಯಾಪ್ತಿ ಈ ವರ್ಷ 300 ಮಿ.ಮೀ ಮಳೆಯಾಗಿ ಶೇ 24ರಷ್ಟು ಹೆಚ್ಚಿನ ಮಳೆಯಾಗಿದೆ.

ಮೆಕ್ಕೆಜೋಳ, ಹುರುಳಿ, ಅಗಸೆಯನ್ನು ಕುಕನೂರು, ಯಲಬುರ್ಗಾ ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಿತ್ತನೆ ಮಾಡುತ್ತಾರೆ. ಕುಷ್ಟಗಿ, ಕನಕಗಿರಿ ಪ್ರದೇಶದಲ್ಲಿ ಶೇಂಗಾ, ಸೂರ್ಯಕಾಂತಿಗೆ ಹೆಚ್ಚಿನ ಬಿತ್ತನೆ ಮಾಡಲಾಗಿದೆ. ಒಂದು ವಾರದ ಹಿಂದೆ ಆರಂಭವಾದ ಬಿತ್ತನೆ ಕಾರ್ಯ ಸತತವಾಗಿ ನಡೆಯುತ್ತಿದೆ.

ಕಡಲೆ, ಶೇಂಗಾ, ಬಿಳಿಜೋಳ ಬೀಜ ಕೊರತೆ

ಈ ಸಾರಿ ಹೆಚ್ಚಿನ ಮಳೆಯಾಗಿದ್ದರಿಂದ ಬಿತ್ತನೆ ಬೀಜಕ್ಕೆ ವ್ಯಾಪಕ ಬೇಡಿಕೆ ಇದೆ. ವಿಶೇಷವಾಗಿ ಕಡಲೆ, ಶೇಂಗಾ, ಬಿಳಿ ಜೋಳ ಬೀಜಕ್ಕೆ ಪರದಾಟವಿದೆ. ಈ ಕುರಿರತ ಕೃಷಿ ಇಲಾಖೆ ಆದ್ಯತೆ ಮೇಲೆ ಬೀಜ ವಿತರಣೆ ಕಾರ್ಯ ನಡೆಯುತ್ತದೆ ಎಂದು ಹೇಳಿದರೆ, ಹೆಚ್ಚಿನ ಬೆಲೆಗೆ ನಾವು ಬೇರೆಡೆಯಿಂದ ತರಬೇಕಾಗಿದೆಎನ್ನುತ್ತಾರೆ ರೈತರು.

ಡಿಎಪಿ ಮತ್ತು ಯೂರಿಯಾ ಗೊಬ್ಬರಕ್ಕೆ ಹೆಚ್ಚಿನ ಬೇಡಿಕೆ ಇದೆ. 1 ಲಕ್ಷಕ್ಕೂ ಅಧಿಕ ರಾಸಾಯನಿಕ ಗೊಬ್ಬರ ಜಿಲ್ಲೆಗೆ ಬಂದಿದ್ದರೂ ಕೆಲವೇ ದಿನಗಳಲ್ಲಿ ಖಾಲಿಯಾಗಿದೆ. ನೀರಾವರಿ ಭಾಗದ ರೈತರು ಹೆಚ್ಚಿನ ಪ್ರಮಾಣದಲ್ಲಿ ಗೊಬ್ಬರವನ್ನು ಸಂಗ್ರಹಿಸಿಟ್ಟುಕೊಳ್ಳುತ್ತಾರೆ. ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ ಈಚೆಗೆ ಕೃಷಿ ಇಲಾಖೆ ಅಧಿಕಾರಿಗಳ ಸಭೆ ನಡೆಸಿದ್ದು, ಯಾವುದೇ ಬೀಜ, ಗೊಬ್ಬರಗಳ ಕೊರತೆ ಆಗದಂತೆ ಸೂಚನೆ ನೀಡಿದ್ದಾರೆ. ಅವಶ್ಯಕತೆಗೆ ಅನುಗುಣವಾಗಿ ಪ್ರಸ್ತಾವ ಸಲ್ಲಿಸಲು ಸೂಚಿಸಿದ್ದಾರೆ.

10 ಸಾವಿರ ಕ್ವಿಂಟಲ್‌ ಕಡಲೆ, 7 ಸಾವಿರ ಕ್ವಿಂಟಲ್ ಶೇಂಗಾ ಬೀಜಕ್ಕೆ ಬೇಡಿಕೆ ಇದೆ. ಶೇಂಗಾ ಬೀಜಗಳ ಬೆಲೆ ಮಾರುಕಟ್ಟೆಯಲ್ಲಿ ಹೆಚ್ಚು ಇರುವುದರಿಂದ ರೈತ ಸಂಪರ್ಕ ಕೇಂದ್ರಗಳ ಮೂಲಕ ರಿಯಾಯಿತಿ ದರದಲ್ಲಿ ನೀಡಲಾಗುತ್ತಿದೆ. ಇಲ್ಲಿಯೂ ಜನದಟ್ಟಣೆ ನಿಧಾನವಾಗಿ ಹೆಚ್ಚಾಗುತ್ತಿದೆ. ದಿನ ಬಿಟ್ಟು ದಿನ ಮಳೆ ಬರುತ್ತಿರುವುದರಿಂದ ಬಿತ್ತನೆ ಕಾರ್ಯ ನಿಧಾನವಾಗಿ ಸಾಗುತ್ತಿದೆ.

*ಬಿತ್ತನೆ ಬೀಜ, ಗೊಬ್ಬರಕ್ಕೆ ಯಾವುದೇ ಕೊರತೆ ಇಲ್ಲ. ಎಲ್ಲ ರೈತರು ಡಿಎಪಿನೇ ಬೇಕು ಎಂದರೆ ಹೇಗೆ, ಪರ್ಯಾಯ ಗೊಬ್ಬರಗಳನ್ನು ಆವಿಷ್ಕಾರ ಮಾಡಲಾಗಿದೆ. ಮಾತ್ರೆ, ರಾಸಾಯನಿಕ ರೂಪದಲ್ಲಿ ಇಲಾಖೆ ಪರಿಚಯಿಸಿದೆ. ಇದು ಅನೇಕ ಕಡೆ ಯಶಸ್ವಿಯಾಗಿದೆ. ರೈತರು ಒಂದೇ ಬ್ರ್ಯಾಂಡ್‌ಗೆ ಜೋತು ಬೀಳಬಾರದು. ತಜ್ಞರ ಸಲಹೆ ಮೇರೆಗೆ ಪರ್ಯಾಯದ ಬಳಕೆ ಮಾಡಿಕೊಳ್ಳುವ ಮೂಲಕ ಬಿತ್ತನೆ ಕಾರ್ಯ ಮಾಡುವಂತೆ ಸಲಹೆ ನೀಡಲಾಗಿದೆ

- ಹಾಲಪ್ಪ ಆಚಾರ, ಜಿಲ್ಲಾ ಉಸ್ತುವಾರಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT