ಶನಿವಾರ, ಆಗಸ್ಟ್ 13, 2022
27 °C
ವಿದ್ಯಾರ್ಥಿಗಳನ್ನು ಆಕರ್ಷಿಸುತ್ತಿರುವ ಹೊಸ ಮಾದರಿಯ ವಿನ್ಯಾಸ

ಕೊಪ್ಪಳ | ಚುಕುಬುಕು ರೈಲಲ್ಲಿ ನಿತ್ಯ ಪಾಠ

ಕೆ.ಶರಣಬಸವ ನವಲಹಳ್ಳಿ Updated:

ಅಕ್ಷರ ಗಾತ್ರ : | |

Prajavani

ತಾವರಗೇರಾ: ನಮ್ಮ ಶಾಲ್ಯಾಗ್ ರೈಲು, ಬಸ್ ಬಂದೈತಿ. ಬೇಗ ರೆಡಿ ಆಗ್ರಿ ಶಾಲೆಗೆ ಹೋಗೊಣ ಎಂದು ತಮ್ಮೊಂದಿಗೆ ಶಾಲೆ ಬಿಟ್ಟ ಮಕ್ಕಳನ್ನು ವಾಪಸ್ ಶಾಲೆಗೆ ಕರೆದುಕೊಂಡು ಹೋಗುತ್ತಿರುವುದನ್ನು ಕಂಡು ಜನರಲ್ಲಿ ಅಚ್ಚರಿ ಮೂಡುತ್ತಿದೆ.

ಇದಕ್ಕೆ ಕಾರಣ ಚುಕು ಬುಕು ರೈಲು. ಹೌದು; ಶಾಲೆಯಲ್ಲಿ ರೈಲು ಬಂದಿದೆಯೇ ಎಂದು ಅಚ್ಚರಿಯಾಗಬೇಡಿ.

ಮಕ್ಕಳಲ್ಲಿ ಸೃಜನಾತ್ಮಕ ಕಲೆ ಮೂಡಿಸುವುದು ಮತ್ತು ಅವರನ್ನು ಆಕರ್ಷಿಸುವ ಸಲುವಾಗಿ ತಾಲ್ಲೂಕಿನ ಮುದೇನೂರು ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಕೊಠಡಿಗಳನ್ನು ರೈಲು ಹಾಗೂ ಕಲ್ಯಾಣ ಕರ್ನಾಟಕ ಮಾದರಿಯ ಬಸ್‌ನ ಬಣ್ಣಗಳ ಮಾದರಿಯಲ್ಲಿ ಅಲಂಕರಿಸಲಾಗಿದೆ.

ಈ ಶಾಲೆ ಕಳೆದ ಐದಾರು ವರ್ಷಗಳಿಂದ ಅಂದ ಚಂದ ಜತೆಗೆ ಶಿಕ್ಷಕರನ್ನು ಕಳೆದುಕೊಂಡು ಆಟಕ್ಕುಂಟು ಲೆಕ್ಕಕಿಲ್ಲ ಎನ್ನುವಂತೆ ಇತ್ತು. ಈಗ ಎಸ್‌ಡಿಎಂಸಿ ಸಮಿತಿಯ ಬಲದಿಂದ ಶಾಲಾ ಕೊಠಡಿಗಳು ಕಂಗೊಳಿಸುತ್ತಿವೆ. ಇದಕ್ಕ ಎಲ್ಲರ ಸಹಕಾರ ಕಾರಣ ಎನ್ನುತ್ತಾರೆ ಎಸ್‌ಡಿಎಂಸಿ ಅಧ್ಯಕ್ಷ  ಗೋವಿಂದಪ್ಪ ಉಳಾಗಡ್ಡಿ. ಸಮಿತಿ ಉಪಾಧ್ಯಕ್ಷೆ ಸುವರ್ಣಾ, ಶರಣಪ್ಪ ಕಳ್ಳಿ, ಪಾರ್ವತಿ ಹಾಗೂ ಮಲ್ಲಪ್ಪ ಇತರರ ಶ್ರಮಿಸಿದ್ದಾರೆ.

ಶಿಕ್ಷಣಕ್ಕೆ ಪೂರಕವಾಗಿ ಮಕ್ಕಳ ಮನಸ್ಸನ್ನು ಶಾಲೆಗಳತ್ತ ಸೆಳೆಯಲು ಇಲ್ಲಿನವರು ತಮ್ಮದೇ ಆದ ಪ್ರಯತ್ನ ನಡೆಸುತ್ತಿದ್ದಾರೆ.  ಶಾಲೆಯಲ್ಲಿ 155ಕ್ಕಿತ ಹೆಚ್ಚು ವಿದ್ಯಾರ್ಥಿಗಳು ಇದ್ದಾರೆ.

10 ಕೊಠಡಿಗಳನ್ನು ಇತ್ತೀಚೆಗೆ ದುರಸ್ತಿ ಮಾಡಿ ಬಣ್ಣ ಹಚ್ಚಲಾಗಿದೆ. ಎಸ್‌ಡಿಎಂಸಿ ಅನುದಾನದಲ್ಲಿ ಹುಸೇನಪ್ಪ ಹಿರೇಮನಿ ಅವರ ವೈಯಕ್ತಿಕ ಕಾಳಜಿಯಿಂದ ಶಾಲೆ ಅಲಂಕಾರಗೊಂಡಿದೆ.

‘ಶಾಲೆ ನಾನಾ ಕಾರಣಗಳಿಂದ ಶೈಕ್ಷಣಿಕವಾಗಿ ಸಾಕಷ್ಟು ಹಿಂದುಳಿದಿತ್ತು. ಈ ಶಾಲೆ ಅಂದಗೊಳ್ಳಬೇಕು ಎಂದು ಹಲವರು ಇಂಗಿತ ವ್ಯಕ್ತಪಡಿಸಿದ್ಧರು. ಬಣ್ಣಗಳ ಹೊಸ ವಿನ್ಯಾಸ ಮಕ್ಕಳ ಶೈಕ್ಷಣಿಕ ಮನೋವಿಕಾಸಕ್ಕೆ ಕಾರಣವಾಗುತ್ತಿದೆ’ ಎನ್ನುತ್ತಾರೆ ಪ್ರಭಾರಿ ಮುಖ್ಯ ಶಿಕ್ಷಕಿ ರೇಣುಕಾ.

ಮಾದರಿ ಕೊಠಡಿ: ಪೋಷಕರು ಸರ್ಕಾರಿ ಶಾಲೆಗಳೆಂದರೆ ಮೂಗು ಮುರಿಯುತ್ತಾರೆ. ಅಂಥವರಿಗೆ ಈ ಶಾಲೆ ಪ್ರೇರಣೆಯಾಗುತ್ತದೆ. ಒಂದು ಕಡೆ 4 ಕೊಠಡಿಗಳ ರೈಲ್ವೆ, ಮತೊಂದು 6 ಕಡೆ ಬಸ್‌ ಬಣ್ಣದ ಮಾದರಿಯಲ್ಲಿ ಸುಂದರಗೊಳಿಸಲಾಗಿದೆ.

ಕಲಿಕೆಗೆ ಪೂರಕವಾಗಿ ತರಗತಿಗಳ ಒಳಗೋಡೆಗಳ ಮೇಲೆ ಕಲಿಕೆಗೆ ಪೂರಕವಾಗಿ ಸೂಕ್ತಿಗಳು, ವೈಜ್ಞಾನಿಕ ಚಿತ್ರಗಳು, ನಕಾಶೆಗಳು, ರೇಖಾಗಣಿತದ ಆಕೃತಿಗಳು, ಚುಕ್ಕಿ ಚಿತ್ರ, ಪರಿಸರ ಚಿತ್ರ ಹೀಗೆ ಅನೇಕ ಪ್ರಯೋಗಗಳನ್ನು ಮಾಡಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು