ಗಂಗಾವತಿ: ತಾಲ್ಲೂಕಿನ ಚಿಕ್ಕಜಂತಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಹೊಸ ಅಯೋಧ್ಯೆ ಗ್ರಾಮದಲ್ಲಿ ಕೆಸರು ಗದ್ದೆಯಾಗಿ ಮಾರ್ಪಡುತ್ತಿದ್ದ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣವು ನರೇಗಾ ಸ್ಪರ್ಶದಿಂದ ಇದೀಗ ಸುಂದರ ಕ್ರೀಡಾಂಗಣವಾಗಿ ರೂಪುಗೊಂಡಿದೆ.
ನರೇಗಾ ಯೋಜನೆಯಡಿ ಶೌಚಾಲಯ, ಇಂಗುಗುಂಡಿ, ಸಿ.ಸಿ ರಸ್ತೆ, ಚರಂಡಿ, ಬದು ನಿರ್ಮಾಣ, ಕೃಷಿ ಹೊಂಡ ನಿರ್ಮಾಣ, ಕೊಟ್ಟಿಗೆ ಗೊಬ್ಬರ ತೊಟ್ಟಿಗಳು ನಿರ್ಮಿಸಿ ಜನರಿಗೆ ಅನುಕೂಲ ಮಾಡಿಕೊಡುವುದು ಈ ಯೋಜನೆಯ ಉದ್ದೇಶವಾಗಿದೆ.
ಜಿ.ಪಂ, ತಾ.ಪಂ,ಗ್ರಾ.ಪಂ ಸೇರಿ ಒಂದೆಜ್ಜೆ ಮುಂದೆ ಇಟ್ಟು ತಾಲ್ಲೂಕಿನ ಎಲ್ಲ ಸರ್ಕಾರಿ ಶಾಲೆಗಳ ಸಬಲೀಕರಣದ ಜೊತೆಗೆ ಅಂಗನವಾಡಿ ಕೇಂದ್ರಗಳನ್ನು ಬಲಪಡಿಸಲು ಪಣತೊಟ್ಟಿವೆ. ಅದರಂತೆ ಇದೀಗ ತಾಲ್ಲೂಕಿನ ಪ್ರತಿ ಗ್ರಾ.ಪಂನಲ್ಲಿ ಒಂದು ಶಾಲೆ ಆಯ್ಕೆ ಮಾಡಿ, ಮಾದರಿ ಶಾಲೆಗಳಾಗಿ ಪರಿವರ್ತಿಸಲು ಕ್ರಮಕಕೈಗೊಳ್ಳಲಾಗಿದೆ.
ಈಗಾಗಲೇ ತಾಲ್ಲೂಕಿನ ಕೆಲ ಸರ್ಕಾರಿ ಶಾಲೆ, ಕಾಲೇಜುಗಳಿಗೆ ಮೂಲ ಸೌಕರ್ಯ ಕಲ್ಪಿಸುವ ಕಾಯಕಕ್ಕೆ ಕೈ ಹಾಕಿ, ಶೌಚಾಲಯ, ಆಟದ ಮೈದಾನ, ಅಡುಗೆ ಕೋಣೆ, ಕಾಂಪೌಂಡ್, ಕುಡಿಯುವ ನೀರಿನ ಘಟಕ, ಮಳೆನೀರು ಸಂಗ್ರಹ ಸೌಲಭ್ಯ ಕಲ್ಪಿಸಲಾಗಿದೆ.
ಇದೀಗ, ಚಿಕ್ಕಜಂತಕಲ್ ಪಂಚಾಯಿತಿ ವ್ಯಾಪ್ತಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಶಾಲಾ ಆವರಣ ಅಭಿವೃದ್ದಿ ಪಡಿಸಲಾಗಿದೆ.
ಈ ಹಿಂದೆ ಶಾಲೆಯ ಆವರಣ ಕೆಸರು ಗದ್ದೆಯಂತಾಗಿ, ಮುಳ್ಳು ಕಂಟಿಗಳಿಂದ ಕೂಡಿತ್ತು. ಕೆಸರಿನಿಂದಾಗಿ ಆವರಣದ ತುಂಬೆಲ್ಲ ಸೊಳ್ಳೆಗಳ ಹಾವಳಿ ಇತ್ತು. ಸರಿಯಾದ ಶೌಚಾಲಯ ವ್ಯವಸ್ಥೆ ಇರದೆ, ಆಟಕ್ಕೆ ಮೈದಾನವಿಲ್ಲದೆ ಮಕ್ಕಳು ತುಂಬ ತೊಂದರೆ ಅನುಭವಿಸಿದ್ದರು.
ಇದನ್ನು ಮನಗಂಡ ತಾ.ಪಂ ಅಧಿಕಾರಿಗಳು ನರೇಗಾ ಯೋಜನೆ ಬಳಸಿ, ಹೊಸ ಅಯೋಧ್ಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣವನ್ನು ಸುಸಜ್ಜಿತ ಮೈದಾನವನ್ನಾಗಿ ಅಭಿವೃದ್ದಿಪಡಿಸಿದ್ದಾರೆ.
ಇದರಲ್ಲಿ ಖೋಖೋ, ಕಬಡ್ಡಿ, ವಾಲಿಬಾಲ್, ಬ್ಯಾಡ್ಮಿಂಟನ್ ಅಂಕಣ, ಆಕರ್ಷಕ ಕಮಾನು, ವಾಕಿಂಗ್ ಟ್ರ್ಯಾಕ್ (ಶಾಲಾ ಕೊಠಡಿಗಳಿಗೆ), ಶಾಲಾ ಕಾಂಪೌಂಡ್, ಶೌಚಾಲಯ, ಅಡುಗೆ ಕೋಣೆ, ಮಳೆ ನೀರು ಸಂಗ್ರಹ ಕಾಮಗಾರಿಗಳನ್ನು ಮಾಡಲಾ ಗಿದೆ. ‘ನರೇಗಾದಡಿ ಈ ವರ್ಷ ಅತಿ ಹೆಚ್ಚು ಸರ್ಕಾರಿ ಶಾಲಾ ಮತ್ತು ಕಾಲೇಜುಗಳನ್ನು ಆಯ್ಕೆ ಮಾಡಿಕೊಂಡು, ಸರ್ಕಾರಿ ಶಾಲೆಗಳು ಯಾವುದೇ ಖಾಸಗಿ ಶಾಲೆಗೂ ಕಡಿಮೆ ಆಗಬಾರದು ಎಂದು ವಿಶೇಷವಾಗಿ ಆಸಕ್ತಿ ವಹಿಸಿ ಶಾಲೆಗಳ ಅಭಿವೃದ್ದಿಗೆ ಶ್ರಮಿಸಲಾಗುತ್ತದೆ’ ಎನ್ನುತ್ತಾರೆ ತಾ.ಪಂ.ಇಒ ಡಾ.ಡಿ.ಮೋಹನ್.
ಈ ಮೈದಾನ ನಿರ್ಮಾಣಕ್ಕೆ ₹10 ಲಕ್ಷ ವೆಚ್ಚ ತಗುಲಿದ್ದು, 87 ಮಂದಿ ಕಾರ್ಮಿಕರು 14 ದಿನಗಳ ಕಾಲ ಕೆಲಸ ಮಾಡಿದ್ದಾರೆ. ನರೇಗಾದಡಿ 574 ಮಾನವ ದಿನಗಳನ್ನು ಸೃಜಿಸಿ, ಎರಡು ತಿಂಗಳಲ್ಲಿ ಕಾಮಗಾರಿ ಪೂರ್ಣ ಮಾಡಲಾಗಿದೆ. ಇಲ್ಲಿ ಮಾತ್ರವಲ್ಲದೆ ಗಂಗಾವತಿ ತಾಲ್ಲೂಕಿನ ಕೆಸರಹಟ್ಟಿ, ಚಿಕ್ಕಬೆಣಕಲ್, ಮಲ್ಲಾಪುರ, ಉಡಮಕಲ್ ಗ್ರಾಮದ ಶಾಲೆಗಳಲ್ಲಿ ಸುಸಜ್ಜಿತ ಬೃಹತ್ ಮೈದಾನ ನಿರ್ಮಾಣ ಕಾಮಗಾರಿ ಪ್ರಗತಿ ಹಂತದಲ್ಲಿದ್ದು, ಮುಂದಿನ ದಿನಗಳಲ್ಲಿ ಉದ್ಘಾಟನೆ ಮಾಡಲಾಗುತ್ತದೆ. ಹೊಸ ಅಯೋಧ್ಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 154 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದು, ಈ ಶಾಲೆಗೆ ಹೊಸ ಅಯೋಧ್ಯ, ಹಳೆ ಅಯೋಧ್ಯ, ಕೆ.ಡಿ ನಗರದಿಂದ ವಿದ್ಯಾರ್ಥಿಗಳು ಬರುತ್ತಾರೆ. ಗ್ರಾಮೀಣ ಭಾಗದಲ್ಲಿ ಸಾಕಷ್ಡು ಕ್ರೀಡಾ ಪ್ರತಿಭೆಗಳಿದ್ದು, ಅವರ ಉನ್ನತ ಸಾಧನೆಗೆ ಈ ಮೈದಾನಗಳು ನೆರವಾಗಲಿವೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.