ಭಾನುವಾರ, ಜೂನ್ 26, 2022
29 °C
ಅಳವಂಡಿ: ರೈತನ ಮಾದರಿ ಕೃಷಿಗೆ ಗ್ರಾಮಸ್ಥರ ಮೆಚ್ಚುಗೆ

ಚರಂಡಿ ನೀರಿನಲ್ಲೇ ವಿವಿಧ ಬೆಳೆ: ರೈತನ ಮಾದರಿ ಕೃಷಿ

ಜುನಾಸಾಬ್ ವಡ್ಡಟ್ಟಿ Updated:

ಅಕ್ಷರ ಗಾತ್ರ : | |

Prajavani

ಅಳವಂಡಿ: ಇದ್ದ ಎರಡು ಎಕರೆ ಬರಡು ಭೂಮಿಯಲ್ಲಿ ಚರಂಡಿ ನೀರು ಬಳಸಿ ವಿವಿಧ ಬೆಳೆಗಳನ್ನು ಬೆಳೆದ ರೈತರೊಬ್ಬರ ಮಾದರಿ ಕೃಷಿ ಮತ್ತು ಶ್ರಮ ಉಳಿದ ಕೃಷಿಕರಿಗೆ ಪ್ರೇರಣೆಯಾಗಿದೆ.

ಜಿಲ್ಲೆಯ ಕೊನೆಯ ಭಾಗದ ಮುಂಡರಗಿ ಸಮೀಪದ ಸದಾ ಬಿಸಿಲು, ಬರಗಾಲವನ್ನೇ ಹಾಸಿಹೊದ್ದುಕೊಂಡು ಮಲಗಿದ ಬೆಳಗಟ್ಟಿ ಗ್ರಾಮದ ರೈತ ಬಸಪ್ಪ ಪೂಜಾರ ಊರ ಹೊರವಲಯದಲ್ಲಿ 2 ಎಕರೆ ಜಮೀನು ಹೊಂದಿದ್ದಾರೆ. ಕೊಳವೆಬಾವಿಯಿಲ್ಲದೆ ಚರಂಡಿ ನೀರಿನ ಮೂಲಕ ನೀರಾವರಿ ಮಾಡಿ ಬಿಟಿ ಹತ್ತಿ, ಸೂರ್ಯಕಾಂತಿಯನ್ನು ಸಮೃದ್ಧವಾಗಿ ಬೆಳೆದಿದ್ದಾರೆ.

ಗ್ರಾಮದ ಕೊಳಚೆ ನೀರು, ಚರಂಡಿ ಮೂಲಕ ತಮ್ಮ ಜಮೀನಿನ ಸಮೀಪ ಹರಿದು ಹೋಗುತ್ತಿದ್ದ ನೀರನ್ನು ಬದುವಿನಲ್ಲಿ 10 ಅಡಿ ಅಗಲ, ಆಳದ ಗುಂಡಿಯಲ್ಲಿ ಸಂಗ್ರಹಿಸಿ ಮೋಟಾರ್‌ ಎಂಜಿನ್‌ ಮೂಲಕ ನೀರನ್ನು ಎತ್ತಿ ಬೆಳೆಗಳಿಗೆ ಹರಿಸುತ್ತಿದ್ದಾರೆ. ಸಹಜವಾಗಿ ಕೊಳಚೆ ಮಣ್ಣಿನಲ್ಲಿ ಸೇರಿ ಉತ್ತಮ ಗೊಬ್ಬರ ಕೂಡಾ ಆಗುತ್ತಿದ್ದು, ನಿಂತ ನೀರನ್ನು ಬೆಳೆಗಳಿಗೆ ಹಾಯಿಸುತ್ತಿರುವುದರಿಂದ ಬೆಳೆಗಳು ಸಮೃದ್ಧವಾಗಿ ಕಾಣುತ್ತಿವೆ.

ಪೈಪ್‌ ಮತ್ತು ಮೋಟಾರನ್ನು ₹20 ಸಾವಿರ ವೆಚ್ಚದಲ್ಲಿ ಅಳವಡಿಸಿದ್ದು, ₹8 ಸಾವಿರ ವೆಚ್ಚದಲ್ಲಿ ಭೂಮಿ ಉಳುಮೆ, ಬೀಜ, ಗೊಬ್ಬರ ಕೂಲಿಗಾಗಿ ಖರ್ಚು ಮಾಡಿದ್ದಾರೆ. ಎಕರೆಗೆ 4 ಕ್ವಿಂಟಲ್‌ ಹತ್ತಿ, 9 ಕ್ವಿಂಟಲ್‌ ಸೂರ್ಯಕಾಂತಿ ಫಸಲು ತೆಗೆಯುವ ನಿರೀಕ್ಷೆ ಇದ್ದು, ಮಾಡಿದ ಖರ್ಚು ತೆಗೆದು ₹50 ಸಾವಿರ ಲಾಭ ಆಗುವ ಭರವಸೆಯನ್ನು ರೈತ ಬಸಪ್ಪ ಹೊಂದಿದ್ದಾರೆ.

ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿದ ಬಸಪ್ಪ ಪೂಜಾರ ‘ಕಳೆದ ಲಾಕ್‌ಡೌನ್‌ ಅವಧಿಯಲ್ಲಿ ಜಮೀನಿನಲ್ಲಿ ನೀರಾವರಿ ಮಾಡುವ ಯೋಚನೆ ಇತ್ತು. ಆದರೆ ಕೊಳವೆಬಾವಿ ಕೊರೆಸಿದರೂ ನೀರು ಬರುವುದಿಲ್ಲ ಎಂಬ ಆತಂಕ ಕೂಡಾ ಇತ್ತು. ಈ ಭಾಗದಲ್ಲಿ ಅಂತರ್ಜಲ ತೀರಾ ಕೆಳಮಟ್ಟಿಗೆ ಹೋಗಿದ್ದು, ಲಕ್ಷಾಂತರ ಖರ್ಚು ಮಾಡಿದರೂ ನೀರು ಬರದೇ ಹೋದರೆ ಹೇಗೆ ಎಂಬ ಭಯದಿಂದ ಹಾಗೆ ಬಿಟ್ಟಿದ್ದೆವು. ಕೆಲವು ಮಹಾನಗರಗಳಲ್ಲಿ ಚರಂಡಿ ನೀರನ್ನೇ ಬಳಸಿ ಸೊಪ್ಪು, ತರಕಾರಿ ಬೆಳೆದು ಲಾಭ ಮಾಡಿಕೊಳ್ಳುತ್ತಿರುವ ರೈತರ ಸುದ್ದಿಯನ್ನು ಕೇಳಿದ್ದೆ. ಕೃಷಿ ಮೇಲಿನ ಪ್ರೀತಿ ಮತ್ತು ನಂಬಿಕೆಯಿಂದ ಈ ಮಾದರಿಯಲ್ಲಿ ಬೆಳೆಯಬೇಕು ಎಂದು ನಿರ್ಧಾರ ಮಾಡಿದ್ದೆ’ ಎನ್ನುತ್ತಾರೆ.

‘ಗ್ರಾಮದ ಚರಂಡಿ ನೀರು ನಮ್ಮ ಜಮೀನಿನ ಪಕ್ಕದಲ್ಲಿಯೇ ಹರಿದು ಹೋಗುತ್ತಿರುವುದರಿಂದ ಅದನ್ನು ಸಂಗ್ರಹಿಸಿ ಜಮೀನಿಗೆ ಹರಿಸಿದ್ದೇನೆ. ಬಿಟಿ ಹತ್ತಿಗೆ ಸ್ವಲ್ಪ ನೀರು ಹರಿಸಿದರೆ ಸಾಕು ಸಮೃದ್ಧ ಬೆಳೆ ಬರುತ್ತದೆ. ಅಲ್ಪ ನೀರನ್ನೇ ಬೇಡುವ ಬೆಳೆಗಳನ್ನು ಹಾಕಿದ್ದು, ಉತ್ತಮ ಫಸಲು ಬರುವ ನಿರೀಕ್ಷೆ ಇದೆ’ ಎಂದು ಆತ್ಮವಿಶ್ವಾಸದಿಂದ ಹೇಳುತ್ತಾರೆ.

ಮಳೆಗಾಗಿ ಕಾಯದೆ ಪರ್ಯಾಯ ಕೃಷಿ ವಿಧಾನದ ಮೂಲಕ ಬದುಕು ಕಟ್ಟಿಕೊಳ್ಳುತ್ತಿರುವ ಈ ರೈತರ ಪರಿಶ್ರಮ ಉಳಿದ ರೈತರಿಗೆ ಪ್ರೇರಣೆಯಾಗಿದೆ ಎಂದು ಗ್ರಾಮಸ್ಥರು ಖುಷಿಯಿಂದ ಹೇಳುತ್ತಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು