ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ತಾಲ್ಲೂಕು ಕಚೇರಿಗಳ ಸ್ಥಾಪನೆಗೆ ಸ್ಥಳ ಪರಿಶೀಲನೆ

ಚುನಾವಣೆಯಲ್ಲಿ ನೀಡಿದಂತೆ ಭರವಸೆ ಈಡೇರಿಕೆ: ತಂಗಡಗಿ
Published 17 ಜೂನ್ 2024, 15:43 IST
Last Updated 17 ಜೂನ್ 2024, 15:43 IST
ಅಕ್ಷರ ಗಾತ್ರ

ಕನಕಗಿರಿ: ಪಟ್ಟಣದ ಕಲಕೇರಿ ರಸ್ತೆ ಅಥವಾ ತಬ್ರೇಜ್ ಬಳ್ಳಾರಿ ಅವರು ದಾನವಾಗಿ ಭೂಮಿ ನೀಡಿದರೆ ಗಂಗಾವತಿಯ ಮೌಲಾನ್ ಆಜಾದ ಆಂಗ್ಲ ಮಾಧ್ಯಮದ ಶಾಲೆಯ ಪರಿಸರದಲ್ಲಿ ಮಿನಿ‌ ವಿಧಾನಸೌಧ ನಿರ್ಮಾಣ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ತಿಳಿಸಿದರು.

ತಾಲ್ಲೂಕು ಕಚೇರಿ, ತಾಲ್ಲೂಕು ಕ್ರೀಡಾಂಗಣ ಹಾಗೂ 100 ಬೆಡ್‌ಗಳ ಆಸ್ಪತ್ರೆ ಇತರೆ ಕಚೇರಿಗಳ ನಿರ್ಮಾಣದ ನಿಯೋಜಿತ ಸ್ಥಳ ಪರಿಶೀಲಿಸಿ ಅವರು ಮಾತನಾಡಿದರು.

ಕಲ್ಟಾಣ ಕರ್ನಾಟಕ ಪ್ರದೇಶಾಭಿವೃದ್ಧಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ₹5 ಸಾವಿರ ಕೋಟಿ ರೂಪಾಯಿ ಅನುದಾನ ಬಿಡುಗಡೆಗೊಳಿಸಿದ್ದಾರೆ. ಚುನಾವಣೆಯಲ್ಲಿ ಕೊಟ್ಟ ಭರವಸೆಯಂತೆ ಬೇಡಿಕೆಗಳನ್ನು ಈಡೇರಿಸಲಾಗುತ್ತಿದೆ, ಅಧಿಕಾರಿಗಳು ಕಚೇರಿ ಸ್ಥಾಪನೆಗೆ ಸಿದ್ದತೆ ಕೈಗೊಳ್ಳಬೇಕು ಎಂದು ಸೂಚಿಸಿದರು.

‘ಪಟ್ಟಣದಲ್ಲಿ ಸಾಂಸ್ಕೃತಿಕ ಭವನಕ್ಕೆ ₹2.50 ಕೋಟಿ ಹಾಗೂ ಸರ್ಕೀಟ್ ಹೌಸ್ ನಿರ್ಮಾಣಕ್ಕೆ ₹4.25 ಕೋಟಿ ಮಂಜೂರಾಗಿದ್ದು ಹದಿನೈದು ದಿನದೊಳಗೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲಾಗುವುದು’ ಎಂದು ತಿಳಿಸಿದರು.

ಪ್ರತಿಯೊಂದು ಪ್ರೌಢಶಾಲೆಗೆ ಸ್ಮಾರ್ಟ್ ಕ್ಲಾಸ್ , ಕಂಪ್ಯೂಟರ್ ಇತರೆ ಸೌಲಭ್ಯ ಕಲ್ಪಿಸಲಾಗುತ್ತಿದೆ. ಶಾಲಾ ಕೊಠಡಿಗಳ ದುರಸ್ತಿ, ಹೊಸ ಕಟ್ಟಡ ನಿರ್ಮಾಣಕ್ಕೆ ₹25 ಕೋಟಿ ಮಂಜೂರು ಮಾಡಲಾಗಿದೆ ಎಂದರು.

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ವಿಭಜನೆಯಾಗಿದ್ದು ನಾಮಕರಣಗೊಂಡ ಹೊಸ ಆಡಳಿತ ಮಂಡಳಿ ಅಸ್ತಿತ್ವಕ್ಕೆ ಬರಲಿದೆ ಎಂದು ಅವರು ತಿಳಿಸಿದರು.

ಪಟ್ಟಣದಲ್ಲಿ ಜೆಸ್ಕಾಂ ಉಪ ವಿಭಾಗಾಧಿಕಾರಿ ಕಚೇರಿ ಸ್ಥಾಪನೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಬಸ್ ಡಿಪೊಕ್ಕೆ ಜಾಗ ಗುರುತಿಸಲಾಗಿದೆ, ಅಗ್ನಿಶಾಮಕ ದಳದ ಕಚೇರಿ ಮಂಜೂರಿಯಾಗಿದೆ ಎಂದರು.

ಈಗಾಗಲೇ ಉಪನೋಂದಣಿ‌ ಕಚೇರಿ ಮಂಜೂರಾಗಿದ್ದು ಯಾತ್ರಿ ನಿವಾಸದಲ್ಲಿ ಆರಂಭಿಸಲಾಗುವುದು ಎಂದು ತಿಳಿಸಿದರು.

ರಾಜಬೀದಿಯಲ್ಲಿರುವ ತೇರಿನ ‌ಮನೆ ಸ್ಥಳಾಂತರಿಸಿ ಹೊಸ ಕಟ್ಟಡ ನಿರ್ಮಾಣಕ್ಕೆ ಕ್ರಮ ತೆಗೆದುಕೊಳ್ಳಬೇಕು ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ತೊಂಡೆತೇವರಪ್ಪ ದೇಗುಲದ ಪರಿಸರದಲ್ಲಿ ಹೊಸ ಪಟ್ಟಣ ಪಂಚಾಯಿತಿ ಕಚೇರಿ ಜಾಗ ಗುರುತಿಸಲಾಗಿದೆ. ನೀರ್ಲೂಟಿ, ಸುಳೇಕಲ್, ವೀರಭದ್ರೇಶ್ವರ ದೇಗುಲದ ಜಾಗದಲ್ಲಿ ವಿವಿಧ ಕಚೇರಿ, ನ್ಯಾಯಾಲಯ ಹಾಗೂ ಕ್ರೀಡಾಂಗಣ ನಿರ್ಮಾಣದ ಕುರಿತು ಅಧಿಕಾರಿಗಳು ಹಾಗೂ ಮುಖಂಡರ ಜತೆಗೆ ಚರ್ಚಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಸಾವಿತ್ರಿ ಕಡಿ, ಉಪ ವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ, ತಹಶೀಲ್ದಾರ್ ವಿಶ್ವನಾಥ ಮುರುಡಿ, ತಾಲ್ಲೂಕು ಪಂಚಾಯಿತಿ ಇಒ ರಾಜಶೇಖರ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ದತ್ತಾತ್ರೇಯ ಹೆಗಡೆ, ಯುವ ಸಬಲೀಕರಣ ಅಧಿಕಾರಿ ವಿಠ್ಠಲ ಜಾಬಗೌಡ್ರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗಂಗಾಧರ ಸ್ವಾಮಿ, ಪ್ರಚಾರ ಸಮಿತಿ ಅಧ್ಯಕ್ಷ ರಮೇಶ ನಾಯಕ, ಜಿಪಂ ಮಾಜಿ ಸದಸ್ಯ ವೀರೇಶ ಸಮಗಂಡಿ, ವಕ್ತಾರ ಶರಣಬಸಪ್ಪ ಭತ್ತದ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ವಿರುಪಣ್ಣ ಕಲ್ಲೂರು, ಸಿದ್ದಪ್ಪ ನೀರ್ಲೂಟಿ, ನಾಗಪ್ಪ ಹುಗ್ಗಿ, ಸಿದ್ದನಗೌಡ, ರವಿ ಪಾಟೀಲ, ತಾ.ಪಂ. ಮಾಜಿ ಅಧ್ಯಕ್ಷ ಬಸವಂತಗೌಡ, ಪ.ಪಂ ಸದಸ್ಯರಾದ ಸಂಗಪ್ಪ ಸಜ್ಜನ, ಅನಿಲಕುಮಾರ, ಶರಣೇಗೌಡ, ಸಿದ್ದೇಶ ಕಲ್ಲಬಾಗಿಲಮಠ, ರಾಕೇಶ ಕಂಪ್ಲಿ, ಇತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT