ಮಂಗಳವಾರ, ಜೂನ್ 28, 2022
21 °C
ಶೇ 87.71 ಸಾಧನೆ

ಎಸ್ಸೆಸ್ಸೆಲ್ಸಿ ಫಲಿತಾಂಶ: ಕೊಪ್ಪಳ ಜಿಲ್ಲೆಗೆ ‘ಎ’ ಗ್ರೇಡ್ ಖುಷಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊಪ್ಪಳ: ಕಲ್ಯಾಣ ಕರ್ನಾಟಕ ಭಾಗದ ಹಿಂದುಳಿದ ಜಿಲ್ಲೆ ಎಂದೇ ಗುರುತಿಸಿಕೊಂಡಿದ್ದ ಕೊಪ್ಪಳ ಜಿಲ್ಲೆ ಫಲಿತಾಂಶದಲ್ಲಿ ಕೂಡಾ ಹಿಂದುಳಿದಿತ್ತು. ಈಗ ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗೊಂಡಿದ್ದು, ಶೇ 87.71 ಸಾಧನೆ ಮಾಡಿದ್ದಲ್ಲದೆ, ಎ ಗ್ರೇಡ್ ಪಡೆದಿಕೊಂಡಿರುವುದು ಸಂತಸ ಮೂಡಿಸಿದೆ.

ಎಂದಿನಂತೆ ಬಾಲಕಿಯರು ಮೇಲುಗೈ ಸಾಧಿಸಿದರೆ ಗ್ರಾಮೀಣ ಭಾಗದ ಮಕ್ಕಳ ಫಲಿತಾಂಶ ಸುಧಾರಣೆ ಯಾಗಿದ್ದು, ಈ ವಾರ್ಷಿಕ ಪರೀಕ್ಷೆಯ ವಿಶೇಷವಾಗಿದೆ. ಶಿಕ್ಷಣ ಇಲಾಖೆ ಫಲಿತಾಂಶ ಸುಧಾರಣೆಗೆ ಚಿಗುರು ಸೇರಿದಂತೆ ವಿವಿಧ ಕ್ರಮಗಳನ್ನು ಕೈಗೊಂಡಿತ್ತು. ಇಲಾಖೆಯ ಶ್ರಮಕ್ಕೆ ತಕ್ಕಮಟ್ಟಿಗೆ ಸುಧಾರಣೆ ಕಂಡು ಬಂದಿದೆ.

ಜಿಲ್ಲೆಯಲ್ಲಿ 2020-21ರಲ್ಲಿ ಕೋವಿಡ್‌ ಕಾರಣದಿಂದ ಎಲ್ಲ ಮಕ್ಕಳನ್ನು ಸಾಮೂಹಿಕವಾಗಿ ಉತ್ತೀರ್ಣ ಮಾಡಲಾಗಿತ್ತು. 2019-20ರಲ್ಲಿ ಶೇ 66.99 ಅಂಕ ಪಡೆದು ರಾಜ್ಯಕ್ಕೆ 23ನೇ ಸ್ಥಾನದಲ್ಲಿತ್ತು. 2018-19ರಲ್ಲಿ ಶೇ 81.35 ಅಂಕಪಡೆದು 16 ಸ್ಥಾನದಲ್ಲಿತ್ತು. 2017-18ರಲ್ಲಿ ಶೇ 80.83 ಅಂಕ ಗಳಿಸಿ ರಾಜ್ಯಕ್ಕೆ 19ನೇ ಸ್ಥಾನ ಬಂದಿತ್ತು. ಈ ಸಾರಿ ಶೇ 87.91 ಸಾಧನೆ ಮಾಡಿ, ಮುಂದುವರಿದ ಜಿಲ್ಲೆಗಳ ಜೊತೆ ಎ ಗ್ರೇಡ್‌ ಪಡೆದಿದೆ.

ಸರ್ಕಾರಿ ಶಾಲೆಯ 14,546 ಮಕ್ಕಳು ಉತ್ತೀರ್ಣರಾಗಿ ದಾಖಲೆ ಮಾಡಿದ್ದರೆ, ಅನುದಾನಿತ ಶಾಲೆಯ 2100, ಅನುದಾನ ರಹಿತ ಶಾಲೆಯ 3596 ಮಕ್ಕಳು ಉತ್ತೀರ್ಣರಾಗಿದ್ದಾರೆ. ಫಲಿತಾಂಶದಲ್ಲಿ ಕುಷ್ಟಗಿ ಶೇ 93.81 ಸಾಧನೆ ಮಾಡುವ ಮೂಲಕ ಮೊದಲ ಸ್ಥಾನದಲ್ಲಿ ಇದ್ದರೆ, ಕೊಪ್ಪಳ ಕೊನೆಯ ಸ್ಥಾನ ಪಡೆದಿದೆ.

ಕುಷ್ಟಗಿ ತಾಲ್ಲೂಕಿನ ಕಾಟಾಪುರದ ಮೊರಾರ್ಜಿ ವಸತಿ ಶಾಲೆಯ ವಿದ್ಯಾರ್ಥಿ ಅಭಿಷೇಕ ಮರಿಯಪ್ಪ ಗ್ವಾತಗಿ 525 ಅಂಕಕ್ಕೆ 524 ಅಂಕ ಪಡೆದಿದ್ದಾನೆ. ಅದೇ ರೀತಿ ತಾವರಗೇರಾದ ವಿಶ್ವಚೇತನ ಪ್ರೌಢಶಾಲೆ ವಿದ್ಯಾರ್ಥಿನಿ ಐಶ್ವರ್ಯ ವಿರೇಶ ನಾಗಲೀಕರ 524 ಅಂಕ ಪಡೆದು ಜಿಲ್ಲೆಗೆ ಮೊದಲ ಸ್ಥಾನ ಪಡೆದಿದ್ದಾರೆ.

ನ್ಯೂ ಆಕ್ಸಫರ್ಡ್ ಶಾಲೆ ಸಾಧನೆ: ಪ್ರಸ್ತುತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ನಗರದ ನ್ಯೂಆಕ್ಸ್‌ಫರ್ಡ್ ಇಂಗ್ಲಿಷ್‌ ಮಾಧ್ಯಮ ಶಾಲೆಯ ವಿಜಯಶ್ರೀ ಅಂಬೋರೆ 625ಕ್ಕೆ 623 ಅಂಕ ಪಡೆದು ಶಾಲೆಗೆ ಪ್ರಥಮ, ಅನುಷಾ.ಡಿ.ಕೆ ಹಾಗೂ ಸಂಜನಾ ಐಲಿ 625ಕ್ಕೆ 620 ಅಂಕ ಪಡೆದು ಶಾಲೆಗೆ ದ್ವಿತೀಯ ಸ್ಥಾನ, ಮಧುಸೂಧನ 625ಕ್ಕೆ 617 ಅಂಕ ಪಡೆದು ತೃತೀಯ ಸ್ಥಾನ ಪಡೆದಿದ್ದಾರೆ.

ಪರೀಕ್ಷೆಗೆ ಹಾಜರಾಗಿದ್ದ 66 ವಿದ್ಯಾರ್ಥಿಗಳಲ್ಲಿ 23 ವಿದ್ಯಾರ್ಥಿಗಳು ಅತ್ಯುತ್ತಮ ದರ್ಜೆ, 32 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ, 7 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿ ಅತ್ಯುತ್ತಮ ಫಲಿತಾಂಶ ದಾಖಲಾಗಿದೆ.

ಲಯನ್ಸ್ ಎಸ್.ವಿ.ಇ.ಎಂ. ಶಾಲೆ: ನಗರದ ಲಯನ್ಸ್ ಕ್ಲಬ್ ಸ್ವಾಮಿ ವಿವೇಕಾನಂದ ಇಂಗ್ಲಿಷ್ ಮಾಧ್ಯಮ ಪ್ರೌಢಶಾಲೆಯು ಈ 2021-22 ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ. 99 ಸಾಧನೆ ಮಾಡಿ ಉತ್ತಮ ಫಲಿತಾಂಶ ದಾಖಲಿಸಿದೆ.

ಶ್ರೀಕರ ದೇಸಾಯಿ ಶೇ 98.88 ಪ್ರಥಮ, ಅನಘಾ ಪಾಟೀಲ್ ಶೇ 98.56 ದ್ವಿತೀಯ, ಸಂಜನಾ ಜಾಧವ್ ಹಾಗೂ ಅಮೀನಾ ಸಿದ್ದಿಕಿ ಶೇ 97.92 ಅಂಕಗಳನ್ನು ಪಡೆದು ಶಾಲೆಗೆ ತೃತೀಯ ಸ್ಥಾನ ಪಡೆದಿದ್ದಾರೆ.

ಒಟ್ಟು 120 ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಹಾಜರಾಗಿದ್ದು, 66 ಅತ್ಯುತ್ತಮ ದರ್ಜೆ, 52 ಪ್ರಥಮ ದರ್ಜೆಯಲ್ಲಿ ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶಾಲೆಗೆ ಕೀರ್ತಿ ತಂದಿರುತ್ತಾರೆ ಎಂದು ಶಾಲೆಯ ಪ್ರಾಚಾರ್ಯೆ ವೈ.ಪದ್ಮಜಾ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು