ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪಳ: ಶಿಕ್ಷಕರ ಬಡ್ತಿ ಪ್ರಕ್ರಿಯೆ ಆರಂಭಿಸಿ

ಕರ್ನಾಟಕ ರಾಜ್ಯ ಪದವೀಧರ ಪ್ರಾಥಮಿಕ ಶಿಕ್ಷಕರ ಸಂಘದಿಂದ ಮನವಿ
Last Updated 23 ಜೂನ್ 2021, 6:16 IST
ಅಕ್ಷರ ಗಾತ್ರ

ಕೊಪ್ಪಳ: ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಪ್ರೌಢಶಾಲೆಗೆ ಬಡ್ತಿ ನೀಡಲು ನ್ಯಾಯಾಲಯದ ಆದೇಶದ ಅನ್ವಯ ಪ್ರಕ್ರಿಯೆ ಆರಂಭಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಪದವೀಧರ ಪ್ರಾಥಮಿಕ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಮಾರುತಿ ಮ್ಯಾಗಳಮನಿ ವಿಧಾನ ಪರಿಷತ್‌ ಸದಸ್ಯ ಶಶೀಲ್‌ ನಮೋಶಿ ಅವರಿಗೆ ಮನವಿ ಸಲ್ಲಿಸಿದರು.

ರಾಜ್ಯದಲ್ಲಿ ಗುಣಾತ್ಮಕ ಶಿಕ್ಷಣ ನೀಡುವ ಉದ್ದೇಶದಿಂದ ಆರ್.ಟಿ.ಇ ಕಾಯ್ದೆ 2009ರ ಪರಿಚ್ಛೇದ 23 ಉಪ ಪರಿಚ್ಛೇದ (1) ಎನ್.ಸಿ.ಟಿ.ಇ ಅಧಿನಿಯಮಗಳ ಅನ್ವಯ ಪ್ರಾಥಮಿಕ ವಿಭಾಗದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರು (1-5) ಮತ್ತು ಪದವೀಧರ ಪ್ರಾಥಮಿಕ ಶಿಕ್ಷಕರು (ಜಿಪಿಟಿ) ಎಂಬ ಎರಡು ವೃಂದಗಳನ್ನು ಸೃಜಿಸಲಾಗಿದೆ. ಪ್ರಾಥಮಿಕದಿಂದ ಪ್ರೌಢಶಾಲೆಗೆ ಗ್ರೇಡ್ 2 ಹುದ್ದೆಗಳಿಗೆ ಪದೋನ್ನತಿ ನೀಡುವ ಸಂದರ್ಭದಲ್ಲಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಸಕ್ಷಮ ಪ್ರಾಧಿಕಾರ 6 ರಿಂದ 8ನೇ ತರಗತಿಯ ಪದವೀಧರ ಪ್ರಾಥಮಿಕ (6-8) ವೃಂದವನ್ನು ಕಡೆಗಣಿಸಿ, ಪ್ರಾಥಮಿಕ ಶಾಲಾ ಶಿಕ್ಷಕರಿಗೆ (ಪಿಎಸ್‌ಟಿ) (1-5) ಬಡ್ತಿ ನೀಡಿತ್ತು ಎಂದು ತಿಳಿಸಲಾಗಿದೆ.

ಈ ವಿಚಾರದಲ್ಲಿ ಬಾಧಿತರಾದ ಶಿಕ್ಷಕರು ನ್ಯಾಯಾಲಯದಲ್ಲಿ (ಕೆ.ಎ.ಟಿ) ನಮ್ಮನ್ನು ಬಡ್ತಿಗೆ ಪರಿಗಣಿಸುವಂತೆ ಅರ್ಜಿ ಸಲ್ಲಿಸಿದ್ದರು. ಸದರಿ ವಿಚಾರವನ್ನು ಆಲಿಸಿದನ್ಯಾಯಾಲಯ ಪ್ರಾಥಮಿಕ ಶಿಕ್ಷಕರಿಗೆ ಪ್ರೌಢಶಾಲೆಯ ಗ್ರೇಡ್ 2 ಹುದ್ದೆಗೆ ಬಡ್ತಿ ನೀಡಬೇಕು ಎಂದು ಮಹತ್ವದ ಆದೇಶ ನೀಡಿದೆ. ಕಾರಣ ಶೀಘ್ರದಲ್ಲಿಯೇ ಪ್ರಕ್ರಿಯೆ ಆರಂಭಿಸಬೇಕು ಎಂದು ಮನವಿ ಮಾಡಿದರು.

ಮನವಿ ಸ್ವೀಕರಿಸಿ ಮಾತನಾಡಿದ ನಮೋಶಿ,‘ನಿಯಮಾವಳಿ ಪ್ರಕಾರ ಪದವೀಧರ ಪ್ರಾಥಮಿಕ ಶಿಕ್ಷಕರಿಗೆ ಪ್ರೌಢ ಶಾಲೆಗೆ ಬಡ್ತಿ ನೀಡಬೇಕು. ಈ ಕುರಿತು ಇಲಾಖೆಯಲ್ಲಿ ಹಾಗೂ ಸರ್ಕಾರದ ಹಂತದಲ್ಲಿ ನಾನು ಹಲವಾರು ಬಾರಿ ಚರ್ಚಿಸಿದ್ದೇನೆ. ಸಕಾರಾತ್ಮಕ ಸ್ಪಂದನೆ ಇದೆ. ಆದ್ದರಿಂದಜಿಪಿಟಿ ಶಿಕ್ಷಕರು ಯಾವುದೇ ಕಾರಣಕ್ಕೂ ಆತಂಕಕ್ಕೆ ಒಳಗಾಗಬೇಕಾದ ಅವಶ್ಯಕತೆ ಇಲ್ಲ. ಖಂಡಿತ ಬಡ್ತಿ ಸಿಗುತ್ತದೆ’ ಎಂದು ಭರವಸೆ ನೀಡಿದರು.

ಡಿ.ಡಿ.ಪಿ.ಐ ದೊಡ್ಡಬಸಪ್ಪ ನೀರಲಕೇರಿ,ಹನಮಂತಪ್ಪ ಚಲವಾದಿ, ಹೇಮಣ್ಣ ಕವಲೂರು, ಎಸ್.ಬಿ.ಕುರಿ, ಪ್ರಹ್ಲಾದ್ ಹೂಗಾರ ಹಾಗೂ ಸಂತೋಷ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT