ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆಯಲ್ಲಿ ಪ್ರತಿಭಟನೆ: ಬಸ್‌ ಸೌಲಭ್ಯಕ್ಕಾಗಿ ವಿದ್ಯಾರ್ಥಿಗಳ ಆಗ್ರಹ

ಪ್ರಯಾಣಿಕರ ಪರದಾಟ
Last Updated 9 ನವೆಂಬರ್ 2021, 11:38 IST
ಅಕ್ಷರ ಗಾತ್ರ

ಕುಷ್ಟಗಿ: ಸಾರಿಗೆ ಬಸ್‌ ಸೇವೆ ಕಲ್ಪಿಸುವಲ್ಲಿ ಇಲ್ಲಿಯ ಘಟಕದ ಅಧಿಕಾರಿಗಳು ನಿರ್ಲಕ್ಷ್ಯವಹಿಸುತ್ತಿದ್ದಾರೆ ಎಂದು ಆರೋಪಿಸಿ ತಾಲ್ಲೂಕಿನ ಚಳಗೇರಾ ಕ್ರಾಸ್‌ ಬಳಿ ರಸ್ತೆ ತಡೆ ನಡೆಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.

ಬೆಳಿಗ್ಗೆಯಿಂದ ಸುಮಾರು ಮೂರು ತಾಸುಗಳವರೆಗೂ ನಡೆದ ಪ್ರತಿಭಟನೆಯಿಂದಾಗಿ ಹನುಮಸಾಗರ ಕುಷ್ಟಗಿ ಮಧ್ಯೆ ಸಂಚರಿಸುವ ಸಾರಿಗೆ ಬಸ್‌ ಸಂಚಾರ ಸ್ಥಗಿತಗೊಂಡು ಇತರೆ ಪ್ರಯಾಣಿಕರು ಪರದಾಡುವಂತಾಯಿತು. ವಿವಿಧ ಸ್ಥಳಗಳಿಗೆ ತೆರಳಬೇಕಿದ್ದ ಪ್ರಯಾಣಿಕರನ್ನು ಬಸ್‌ ನಿರ್ವಾಹಕರು ಖಾಸಗಿ ವಾಹನಗಳ ಮೂಲಕ ಕಳಿಸಿಕೊಟ್ಟರು.

ತಾಲ್ಲೂಕಿನ ಅಡವಿಭಾವಿ, ಹುಲ್ಸಗೇರಿ ಗ್ರಾಮಗಳಿಗೆ ಸೇರಿದ ಬಹಳಷ್ಟು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಪಟ್ಟಣದ ವಿವಿಧ ಕಾಲೇಜುಗಳಲ್ಲಿ ಪ್ರವೇಶ ಪಡೆದಿದ್ದಾರೆ. ಈ ಎರಡೂ ಗ್ರಾಮಗಳಿಗೆ ಸಾರಿಗೆ ಸಂಪರ್ಕ ಇಲ್ಲದ ಕಾರಣ ಪಟ್ಟಣಕ್ಕೆ ಬರಬೇಕಾದರೆ ಗ್ರಾಮಗಳಿಂದ ಕಾಲ್ನಡಿಗೆಯಲ್ಲಿ 5 ಕಿಮೀ ವರೆಗೆ ಹನುಮಸಾಗರ ರಸ್ತೆಯಲ್ಲಿನ ಅಡವಿಭಾವಿ ಕ್ರಾಸ್‌ವರೆಗೆ ಬಂದು ಬಸ್‌ಗಾಗಿ ಕಾಯಬೇಕು. ಆದರೆ ನಿಲುಗಡೆ ಇದ್ದರೂ ಇಲ್ಲದ ನೆಪ ಹೇಳಿ ಬಸ್‌ಗಳನ್ನು ನಿಲ್ಲಿಸದೆ ಹಾಗೇ ಹೋಗುವುದು ಸಾಮಾನ್ಯ ಸಂಗತಿಯಾಗಿದೆ. ಅದೇ ರೀತಿ ಕೆಲವೇ ಬಸ್‌ಗಳ ಸಂಚಾರ ಇರುವುದರಿಂದ ಕೆಲ ಬಸ್‌ಗಳು ನಿಲ್ಲಿಸದಿದ್ದರೆ ಆ ದಿನ ಕಾಲೇಜಿಗೆ ಹೋಗುವುದಕ್ಕೆ ಸಾಧ್ಯವೇ ಆಗುವುದಿಲ್ಲ. ಇದು ನಿತ್ಯದ ಗೋಳಿನ ಸಂಗತಿಯಾಗಿದೆ ಎಂಬುದು ವಿದ್ಯಾರ್ಥಿಗಳ ಅಳಲು.

ಈ ಸಮಸ್ಯೆ ನಿವಾರಿಸುವಂತೆ ಮೂರು ಬಾರಿ ಘಟಕ ವ್ಯವಸ್ಥಾಪಕರಿಗೆ ಮತ್ತು ಶಾಸಕ ಅಮರೇಗೌಡ ಬಯ್ಯಾಪುರ ಅವರಿಗೆ ಖುದ್ದಾಗಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯ ಮುಂದುವರೆದಿರುವುದರಿಂದ ಅನಿವಾರ್ಯವಾಗಿ ರಸ್ತೆಗಿಳಿದು ಪ್ರತಿಭಟನೆ ನಡೆಸಬೇಕಾಯಿತು ಎಂದು ವಿದ್ಯಾರ್ಥಿಗಳು 'ಪ್ರಜಾವಾಣಿ'ಗೆ ತಿಳಿಸಿದರು.

ವಿದ್ಯಾರ್ಥಿಗಳ ಪ್ರತಿಭಟನೆ ನಡೆಸುತ್ತಿರುವುದು ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಬಸ್‌ ಸಂಚಾರಕ್ಕೆ ಅವಕಾಶ ನೀಡುವಂತೆ ಒತ್ತಾಯಿಸಿದರು.

ಆದರೆ ಘಟಕ ವ್ಯವಸ್ಥಾಪಕರು ಸ್ಥಳಕ್ಕೆ ಬರುವವರೆಗೂ ಪ್ರತಿಭಟನೆ ಮುಂದುವರೆಸುತ್ತೇವೆ ಎಂದೆ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ಪಟ್ಟು ಹಿಡಿದಿದ್ದರು.

ಈ ಸಂದರ್ಭದಲ್ಲಿ ಪೊಲೀಸರು ಮತ್ತು ಪ್ರತಿಭಟನಾಕಾರರ ಮಧ್ಯೆ ವಾಗ್ವಾದ ನಡೆಯಿತು. ನಂತರ ಸ್ಥಳಕ್ಕೆ ಬಂದ ಸಬ್‌ ಇನ್‌ಸ್ಪೆಕ್ಟರ್ ತಿಮ್ಮಣ್ಣ ನಾಯಕ, ವಿದ್ಯಾರ್ಥಿಗಳನ್ನು ಸಮಾಧಾನಪಡಿಸಿದರು.

ಅನಾರೋಗ್ಯ ಕಾರಣದಿಂದ ವ್ಯವಸ್ಥಾಪಕರಿಗೆ ಸ್ಥಳಕ್ಕೆ ಬರಲು ಸಾಧ್ಯವಾಗಿಲ್ಲ, ಮಂಗಳವಾರ ಪಟ್ಟಣದ ಸಾರಿಗೆ ಘಟಕಕ್ಕೆ ಬನ್ನಿ ಅಲ್ಲಿ ಚರ್ಚಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳೊಣ ಎಂದು ಹೇಳಿದ್ದಕ್ಕೆ ಒಪ್ಪಿದ ವಿದ್ಯಾರ್ಥಿಗಳು ಪ್ರತಿಭಟನೆ ಹಿಂಪಡೆದರು. ಅಲ್ಲದೆ ಸಮಸ್ಯೆ ಕುರಿತು ನ.9 ರಂದು ವ್ಯವಸ್ಥಾಪಕರಿಗೆ ಮನವಿ ಸಲ್ಲಿಸುತ್ತೇವೆ. ಪುನಃ ಬಸ್‌ ನಿಲುಗಡೆಯಾಗದಿದ್ದರೆ ಮತ್ತೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.

ಗ್ರಾಮ ಪಂಚಾಯಿತಿ ಸದಸ್ಯ ಸುರೇಶಗೌಡ ಮಾಲಿಪಾಟೀಲ, ವಾಸಪ್ಪ ಘಟನೂರು ಮತ್ತು ವಿದ್ಯಾರ್ಥಿ ವಿದ್ಯಾರ್ಥಿನಿಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT