ಶನಿವಾರ, 2 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋರ್ಟ್‌ ಕಟ್ಟಡದಲ್ಲಿ ಸ್ವಾಮಿ ನೆನಪುಗಳು...

ರೈತ ಕುಟುಂಬದಲ್ಲಿ ಬೆಳೆದು ಅನನ್ಯ ಸಾಧನೆ ಮಾಡಿದ್ದ ನಿವೃತ್ತ ನ್ಯಾಯಮೂರ್ತಿ
Last Updated 14 ಫೆಬ್ರುವರಿ 2023, 19:30 IST
ಅಕ್ಷರ ಗಾತ್ರ

ಕೊಪ್ಪಳ: ಗ್ರಾಮೀಣ ಪ್ರದೇಶದಲ್ಲಿ ರೈತ ಕುಟುಂಬದಲ್ಲಿ ಜನಿಸಿ ನ್ಯಾಯಮೂರ್ತಿಯಾಗುವ ತನಕ ಬೆಳೆದು ಅನನ್ಯ ಸಾಧನೆ ಮಾಡಿರುವ ಕೆ.ಎ. ಸ್ವಾಮಿ ಅವರಿನ್ನು ನೆನಪು ಮಾತ್ರ. ಆದರೆ, ಅವರು ಜಿಲ್ಲೆಯಲ್ಲಿ ನ್ಯಾಯಾಂಗ ಬೆಳವಣಿಗೆಯಲ್ಲಿ ಮಾಡಿದ ಕೆಲಸಗಳು ಈಗಲೂ ಕೋರ್ಟ್‌ ಕಟ್ಟಡದಲ್ಲಿ ನೆನಪುಗಳ ಗುಚ್ಛ ಹಸಿರಾಗಿವೆ.

ಯಲಬುರ್ಗಾ ತಾಲ್ಲೂಕಿನ ಕುದುರೆಕೋಟಿ ಗ್ರಾಮದಲ್ಲಿ ಜನಿಸಿದ್ದ ಅವರು ಕರ್ನಾಟಕ ಹೈಕೋರ್ಟ್‌ನ ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿ ಮತ್ತು ಮದ್ರಾಸ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ನಿವೃತ್ತರಾಗಿದ್ದರು. ಅವರು ಮಂಗಳವಾರ ಬೆಂಗಳೂರಿನಲ್ಲಿ ಮೃತಪಟ್ಟರು.

1935ರ ಮಾರ್ಚ್‌ 20ರಂದು ಜನಿಸಿದ್ದ ಅವರು 1960ರ ಜೂನ್‌ನಲ್ಲಿ ವಕೀಲರಾಗಿ ರಾಜ್ಯ ವಕೀಲರ ಪರಿಷತ್‌ನಿಂದ ಸನ್ನದು ಪಡೆದರು. ಸ್ವತಂತ್ರವಾಗಿ ವೃತ್ತಿ ಆರಂಭಿಸಿದ ದಿನಗಳಲ್ಲಿ ಅವರು ಉತ್ತರ ಕರ್ನಾಟಕ ಮತ್ತು ಹೈದರಾಬಾದ್‌ ಕರ್ನಾಟಕ (ಈಗಿನ ಕಲ್ಯಾಣ ಕರ್ನಾಟಕ) ದಿಂದ ಹೈಕೋರ್ಟ್‌ ಮೆಟ್ಟಿಲೇರುತ್ತಿದ್ದ ಬಹುತೇಕ ವ್ಯಾಜ್ಯಗಳಲ್ಲಿ ಯಾವುದಾದರೂ ಒಂದು ಪಕ್ಷದ ಪರವಾಗಿ ಪ್ರತಿನಿಧಿಸಲೇಬೇಕು ಎಂಬಷ್ಟು ಖ್ಯಾತಿ ಗಳಿಸಿದ್ದರು ಎಂದು ಜಿಲ್ಲೆಯ ಹಿರಿಯ ವಕೀಲರು ನೆನಪಿಸಿಕೊಳ್ಳುತ್ತಾರೆ.

‘ಕೊಪ್ಪಳದ ನ್ಯಾಯಾಲಯದ ಹಳೇ ಕಟ್ಟಡ ಶಿಥಿಲಗೊಂಡಾಗ ಈಗಿನ ನ್ಯಾಯಾಲಯದ ಕಟ್ಟಡದ ಜಮೀನು ಮತ್ತು ನ್ಯಾಯಾಲಯದ ಸಂಕೀರ್ಣ ಸ್ಥಾಪಿಸುವಲ್ಲಿ ನಿವೃತ್ತ ನ್ಯಾಯಮೂರ್ತಿ ಕೆ.ಎ. ಸ್ವಾಮಿ ಅವರ ಕೊಡುಗೆ ಅಪಾರ. ನಾನು ಆಗಿನ ವಕೀಲರ ಸಂಘದ ಅಧ್ಯಕ್ಷನಾಗಿದ್ದೆ’ ಎಂದು ಹಿರಿಯ ವಕೀಲ ಪಿ.ಆರ್‌. ಹೊಸಳ್ಳಿ ಸ್ಮರಿಸಿದರು.

‘ಕೊಪ್ಪಳ ಜಿಲ್ಲೆಯ ನ್ಯಾಯಾಲಯದ ಕಟ್ಟಡಕ್ಕೆ ಜಮೀನು ಕೊಡಿಸುವಲ್ಲಿ ಹಾಗೂ ಈಗಿರುವ ಕಟ್ಟಡವನ್ನು ಸ್ಥಾಪಿಸಲು ಸಹಕರಿಸಿದ ಕೀರ್ತಿ ಸ್ವಾಮಿ ಅವರಿಗೇ ಸಲ್ಲಬೇಕು. ಜಿಲ್ಲಾ ನ್ಯಾಯಾಲಯದ ಸಂಕೀರ್ಣದ ಕಟ್ಟಡದ ಪ್ರತಿಯೊಂದು ಕಲ್ಲುಗಳು ಕೂಡ ಸ್ವಾಮಿ ಅವರ ಹೆಸರನ್ನು ಕೂಗಿ ಕೂಗಿ ಕರೆಯುತ್ತವೆ. ಯುವ ವಕೀಲರ ಓದಿಗೆ ಅನುಕೂಲವಾಗಲಿ ಎಂದು ಜಿಲ್ಲಾ ವಕೀಲರ ಸಂಘಕ್ಕೆ ತಮ್ಮ ಸಂಪೂರ್ಣ ಗ್ರಂಥಾಲಯವನ್ನೇ ಕೊಟ್ಟು ಜ್ಞಾನಧಾರೆಯನ್ನೂ ಎರೆದಿದ್ದಾರೆ. ಅವರು ಭೂಮಿ ಬಿಟ್ಟು ಹೋದರೂ ಅವರೊಂದಿಗೆ ಜಿಲ್ಲೆಯ ವಕೀಲರ ನೆನಪುಗಳು ಸದಾ ಹಸಿರಿಯಾಗಿಯೇ ಇರುತ್ತವೆ’ ಎಂದು ಹೊಸಳ್ಳಿ ವಕೀಲರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT