ಗುರುವಾರ , ಡಿಸೆಂಬರ್ 12, 2019
20 °C
ತಾಲ್ಲೂಕು ಆರೋಗ್ಯಾಧಿಕಾರಿ ಡಾ.ರಾಮಾಂಜನೇಯ ಸೂಚನೆ

ಶಾಲಾ ಮಕ್ಕಳಿಗೆ ಲಸಿಕೆ ಕಡ್ಡಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊಪ್ಪಳ: ಶಾಲಾ ಮಕ್ಕಳಿಗೆ ಲಸಿಕೆಯನ್ನು ಕಡ್ಡಾಯವಾಗಿ ಹಾಕಬೇಕು ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ರಾಮಾಂಜನೇಯ ಹೇಳಿದರು.

ನಗರದ ತಹಶೀಲ್ದಾರ್‌ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಡಿಪಿಟಿ ಮತ್ತು ಟಿ.ಡಿ ಲಸಿಕೆಗಳು ಡಿ.11ರಿಂದ 31ರ ವರೆಗೆ ನಡೆಯುವ ಶಾಲಾ ಲಸಿಕಾ ಅಭಿಯಾನದ ಜಾಗೃತಿ ಸಭೆಯಲ್ಲಿ ಅವರು ಮಾತನಾಡಿದರು.

ಗಂಟಲು ಮಾರಿ, ನಾಯಿ ಕೆಮ್ಮು ಮತ್ತು ಧನುರ್ವಾಯು ರೋಗಗಳಿಂದ ಮಕ್ಕಳನ್ನು ರಕ್ಷಿಸಲು ಈ ಲಸಿಕೆ ಹಾಕಬೇಕು. ಸಾಧಾರಣ ಜ್ವರ, ಗಂಟಲು ನೋವು ಮತ್ತು ನುಂಗಲು ತೊಂದರೆ ಆಗುವುದು, ಗಂಟಲಿನಲ್ಲಿ ಬೂದು ಬಣ್ಣದ ದಪ್ಪ ಪೊರೆ, ಕತ್ತಿನ ದುಗ್ದರಸ ಗ್ರಂಥಿಗಳ ಮತ್ತು ಸುತ್ತಮುತ್ತಲಿನ ಮೃದು ಅಂಗಾಂಶಗಳ ಉರಿತ ಇವು ಗಂಟಲು ಮಾರಿಯ ಲಕ್ಷಣಗಳಾಗಿವೆ ಎಂದು ವಿವರಿಸಿದರು.

ಎರಡು–ಮೂರು ವಾರಗಳ ವಿಪರೀತ ಕೆಮ್ಮು, ಆಗಾಗ ವಾಂತಿ, ಒಂದೇ ಸಮನೆ ಕೆಮ್ಮಿ, ಕೊನೆಗೆ ಬರುವ ‘ವೂಫ್‌’ ಎಂಬ ಶಬ್ಧ ನಾಯಿ ಕೆಮ್ಮಿನ ವೈಶಿಷ್ಟ್ಯ. ದೇಹದ ಇತರ ಭಾಗಗಳು ಸೆಟೆಯುವುದು, ಉಸಿರಾಟ ತೊಂದರೆ ಮತ್ತು ಸಾವು ಸಹ ಸಂಭವಿಸಬಹುದು ಇವು ಧನುರ್ವಾಯು ರೋಗದ ಲಕ್ಷಣಗಳಾಗಿದ್ದು, ಈ ಲಕ್ಷಣಗಳು ಕಂಡುಬಂದ ತಕ್ಷಣ ವೈದ್ಯರ ಬಳಿ ತೆರಳಿ, ಸೂಕ್ತ ಚಿಕಿತ್ಸೆ ಪಡೆಯುವಂತೆ ಅಧಿಕಾರಿಗಳು ಪ್ರೇರೇಪಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ತಹಶೀಲ್ದಾರ್ ಜಿ.ಬಿ.ಮಜ್ಜಗಿ ಮಾತನಾಡಿ, 5 ರಿಂದ 6 ವರ್ಷದ ಒಳಗಿನ (1ನೇ ತರಗತಿ) ಮಕ್ಕಳಿಗೆ ಡಿಪಿಟಿ (ಡಿಫ್ತೀರಿಯ, ಪರ್ಟುಸಿಸ್‌ ಮತ್ತು ಟೆಟನಸ್‌) ಲಸಿಕೆ, 10ರಿಂದ 16 ವರ್ಷ ವರ್ಷದ ಮಕ್ಕಳಿಗೆ ಟಿಡಿ (ಟೆಟನಸ್‌, ಡಿಫ್ತೀರಿಯಾ) ಲಸಿಕೆ, ಈ ರೀತಿಯಾಗಿ ಪ್ರತಿಯೊಬ್ಬರಿಗೂ ಲಸಿಕೆ ಹಾಕಿಸಬೇಕು ಎಂದು ಹೇಳಿದರು.

ಕೊಪ್ಪಳದಲ್ಲಿ 51 ಶಂಕಿತ ಡಿಫ್ತೀರಿಯಾ ಪ್ರಕರಣ ದಾಖಲಾಗಿದ್ದು, ಇದರಲ್ಲಿ ಒಬ್ಬರು ಸಾವನ್ನಿಪ್ಪಿದ್ದಾರೆ. ಕಲಬುರ್ಗಿ, ರಾಯಚೂರು, ಯಾದಗಿರಿ, ಬೀದರ್‌, ವಿಜಯಪುರ, ಬಾಗಲಕೋಟೆ, ಬಳ್ಳಾರಿ,  ಚಿತ್ರದುರ್ಗ ಮತ್ತು ಕೊಪ್ಪಳ ಹೀಗೆ 9 ಹೆಚ್ಚಿನ ಅಪಾಯದ ಅಂಚಿನಲ್ಲಿರುವ ಜಿಲ್ಲೆಗಳು ಎಂದು ಗುರುತಿಸಲಾಗಿದ್ದು, ಜಿಲ್ಲೆಯೂ ಈ ಪಟ್ಟಿಯಲ್ಲಿ ಸೇರಿದ್ದರಿಂದ ಹೆಚ್ಚಿನ ಜಾಗೃತಿ ವಹಿಸಬೇಕಾದ ಅನಿವಾರ್ಯತೆ ಇದೆ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಸರ್ಕಾರಿ ಶಾಲೆಗಳು, ಖಾಸಗಿ ಶಾಲೆಗಳು, ಸರ್ಕಾರಿ ಅನುದಾನಿತ ಶಾಲೆಗಳು, ಸಮಾಜ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಬುಡಕಟ್ಟು ಕಲ್ಯಾಣ ಇಲಾಖೆಯ ಅಡಿಯಲ್ಲಿ ಬರುವ ಶಾಲೆಗಳು, ಮದರಸಾ ಮತ್ತು ಧಾರ್ಮಿಕ ಶಾಲೆಗಳು, ಇತರ ಇಲಾಖೆಗಳ ಅಡಿ ಬರುವ ವಸತಿ ಶಾಲೆಗಳು, ರಕ್ಷಣಾ ಇಲಾಖೆಯ ಅಡಿ ಬರುವ ಶಾಲೆಗಳು, ಸೈನಿಕ ಶಾಲೆಗಳು, ನೌಕಾಪಡೆ, ವಾಯುಪಡೆಯ ಶಾಲೆಗಳು, ಕೇಂದ್ರೀಯ ವಿದ್ಯಾಲಯ, ನವೋದಯ ವಿದ್ಯಾಲಯ, ಐಸಿಎಸ್‌ಸಿ ಮತ್ತು ಸಿಬಿಎಸ್ಸಿ ಮಂಡಳಿಯ ಅಡಿಯಲ್ಲಿ ಬರುವ ಎಲ್ಲ ಶಾಲೆಗಳು ಮತ್ತು ಅನಾಥಾಶ್ರಮಗಳನ್ನು ಅಭಿಯಾನದ ಅಡಿಯಲ್ಲಿ ಸೇರಿಸಬೇಕು ಎಂದರು.

ಸಭೆಯಲ್ಲಿ ಶಿಕ್ಷಣ ಇಲಾಖೆ ಅಧಿಕಾರಿಗಳು, ತಾಲ್ಲೂಕು ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.

ಪ್ರತಿಕ್ರಿಯಿಸಿ (+)