ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಿಜೆಪಿ ಕಚೇರಿ ಗಾಜು ಒಡೆದು ದಾಂದಲೆ

ಸಂಸದ ಸಂಗಣ್ಣಗೆ ಟಿಕೆಟ್‌ ತಪ್ಪಿದ್ದಕ್ಕೆ ಮುಂದುವರಿದ ಬೆಂಬಲಿಗರ ಆಕ್ರೋಶ
Published 14 ಮಾರ್ಚ್ 2024, 15:43 IST
Last Updated 14 ಮಾರ್ಚ್ 2024, 15:43 IST
ಅಕ್ಷರ ಗಾತ್ರ

ಕೊಪ್ಪಳ: ಹಾಲಿ ಸಂಸದ ಸಂಗಣ್ಣ ಕರಡಿ ಅವರಿಗೆ ಕೊಪ್ಪಳ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ನಿರಾಕರಿಸಿದ್ದರಿಂದ ಅವರ ಬೆಂಬಲಿಗರ ಆಕ್ರೋಶ ಭುಗಿಲೆದ್ದಿದೆ. ಇಲ್ಲಿನ ಬಿಜೆಪಿ ‌ಕಚೇರಿಯಲ್ಲಿ ಬೆಂಬಲಿಗರು ದಾಂದಲೆ ನಡೆಸಿದ್ದಾರೆ.

ಗುರುವಾರ ಬೆಳಿಗ್ಗೆ ಪಕ್ಷದ ಕಚೇರಿಗೆ ನುಗ್ಗಿದ ಬೆಂಬಲಿಗರು, ಡಾ.ಬಸವರಾಜ ಕ್ಯಾವಟರ್‌ ಅವರಿಗೆ ಟಿಕೆಟ್‌ ಘೋಷಿಸಿರುವುದಕ್ಕೆ ವಿರೋಧ ವ್ಯಕ್ತಪಡಿಸಿ ಕಿಟಕಿ ಹಾಗೂ ಮೇಜಿನ ಗಾಜು ಒಡೆದು ಆಕ್ರೋಶ ಹೊರಹಾಕಿದರು. ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ನವೀನ್ ಗುಳಗಣ್ಣನವರ್ ಅವರನ್ನು ಸುತ್ತುವರಿದು ‘ರಾಜೀನಾಮೆ ನೀಡಿ ಸಂಸದರಿಗೆ ಆದ ಅನ್ಯಾಯ ಸರಿಪಡಿಸಬೇಕು’ ಎಂದು ಆಗ್ರಹಿಸಿದರು.

ನವೀನ್‌, ಬಸವರಾಜ ಮತ್ತು ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ ಅವರು ಪಕ್ಷದ ಕಚೇರಿಯಲ್ಲಿ ಮಾಧ್ಯಮ ಕೊಠಡಿಯ ಬಾಗಿಲು ಹಾಕಿ ಪತ್ರಿಕಾ ಹೇಳಿಕೆ ನೀಡುತ್ತಿದ್ದಾಗ, ಸಂಗಣ್ಣ ಬೆಂಬಲಿಗರು ಕೊಠಡಿಯ ಬಾಗಿಲು ಜೋರಾಗಿ ಬಡಿದು ಪಕ್ಷದ ವರಿಷ್ಠರ ವಿರುದ್ಧ ಹರಿಹಾಯ್ದರು.

ಮಾತಿಗಿಲ್ಲ ಅವಕಾಶ: ಇದಕ್ಕೂ ಮೊದಲು ಅಭ್ಯರ್ಥಿ ಬಸವರಾಜ ಮತ್ತು ದೊಡ್ಡನಗೌಡ ಪಾಟೀಲ ಅವರು ಪಕ್ಷದ ಕಚೇರಿ ಸಮೀಪದಲ್ಲಿಯೇ ಇರುವ ಸಂಸದರ ಮನೆಗೆ ಬಂದಾಗಲೂ ಅವರು ನಿಂದನೆ ಎದುರಿಸಬೇಕಾಯಿತು. ಈ ವೇಳೆ ಮನೆಯೊಳಗಿದ್ದ ಸಂಸದರನ್ನು ಭೇಟಿಯಾಗಲು ಪ್ರಯತ್ನಿಸಿದಾಗ ಬೆಂಬಲಿಗರು ಆರಂಭದಲ್ಲಿ ಅಡ್ಡಿಪಡಿಸಿದರು. ಅವರನ್ನು ತಳ್ಳಿಕೊಂಡೇ ಮನೆಯ ಒಳಗೆ ಹೋದರೂ ಮಾತನಾಡಲು ಬೆಂಬಲಿಗರು ಅವಕಾಶ ಕೊಡಲಿಲ್ಲ.

ಸಂಸದ ಸಂಗಣ್ಣ ಕರಡಿ ಅವರ ಭೇಟಿಗೆ ಬಂದ ಕೊಪ್ಪಳ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಕ್ಯಾವಟರ್‌ ಹಾಗೂ ಶಾಸಕ ದೊಡ್ಡನಗೌಡ ಪಾಟೀಲ ಅವರಿಗೆ ಅಡ್ಡಿಪಡಿಸಿದ ಕಾರ್ಯಕರ್ತರು
ಸಂಸದ ಸಂಗಣ್ಣ ಕರಡಿ ಅವರ ಭೇಟಿಗೆ ಬಂದ ಕೊಪ್ಪಳ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಕ್ಯಾವಟರ್‌ ಹಾಗೂ ಶಾಸಕ ದೊಡ್ಡನಗೌಡ ಪಾಟೀಲ ಅವರಿಗೆ ಅಡ್ಡಿಪಡಿಸಿದ ಕಾರ್ಯಕರ್ತರು

ಕಾರ್ಯಕರ್ತನಿಗೆ ತರಾಟೆ

ಕೊಪ್ಪಳ: ಸಂಗಣ್ಣ ಕರಡಿ ತಮ್ಮ ನಿವಾಸದಲ್ಲಿ ಮಾಧ್ಯಮದವರ ಜೊತೆ ಮಾತನಾಡುವಾಗ ಅವರ ಪಕ್ಕದಲ್ಲಿದ್ದ ವಿಧಾನಪರಿಷತ್‌ ಸದಸ್ಯೆ ಹೇಮಲತಾ ನಾಯಕ ಅವರನ್ನು ಕಾರ್ಯಕರ್ತನೊಬ್ಬ ಏಕವಚನದಲ್ಲಿ ‘ನೀ ಯಾಕೆ ಇಲ್ಲಿಗೆ ಬಂದಿದ್ದೀಯಾ' ಎಂದು ತರಾಟೆಗೆ ತೆಗೆದುಕೊಂಡನು. ಆಗ ಆಕ್ರೋಶಗೊಂಡ ಹೇಮಲತಾ ಅವಾಚ್ಯ ಪದಗಳಿಂದ ನಿಂದಿಸಿದರು. ಬಳಿಕ ‘ಪಕ್ಷ ತೆಗೆದುಕೊಂಡ ನಿರ್ಧಾರಕ್ಕೆ ಬದ್ಧಳಿದ್ದೇನೆ. ಆದರೆ ಸಂಗಣ್ಣ ಅವರಿಗೆ ಟಿಕೆಟ್‌ ಕೈ ತಪ್ಪಿದ್ದಕ್ಕೆ ಬೇಸರವಾಗಿದೆ’ ಎಂದರು. ಪಕ್ಷ ಬಸವರಾಜ ಅವರನ್ನು ಅಭ್ಯರ್ಥಿಯೆಂದು ಘೋಷಿಸಿದಾಗ ಹೇಮಲತಾ ಅದನ್ನು ಸ್ಟೇಟಸ್‌ಗೆ ಹಾಕಿಕೊಂಡಿದ್ದರು. ಅಲ್ಲಿ ಅವರಿಗೆ ಬೆಂಬಲಿಸಿ ಇಲ್ಲಿ ಸಂಗಣ್ಣ ಜೊತೆಗೂ ಇದ್ದಿದ್ದರಿಂದ ಆ ಕಾರ್ಯಕರ್ತ ಆಕ್ರೋಶಗೊಂಡಿದ್ದ ಎಂದು ಗೊತ್ತಾಗಿದೆ.

ಕಾಂಗ್ರೆಸ್‌ ನಾಯಕರಿಂದ ಕರೆ

‘ಬಿಜೆಪಿಯ ಕೆಲ ಸಂಸದರು ನನ್ನ ಸಂಪರ್ಕದಲ್ಲಿದ್ದಾರೆ’ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿಕೆ ಬೆನ್ನಲ್ಲೇ ಟಿಕೆಟ್ ವಂಚಿತ ಸಂಗಣ್ಣ ಕರಡಿ ಅವರಿಗೆ ಕಾಂಗ್ರೆಸ್‌ನ ಕೆಲ ನಾಯಕರು ಫೋನ್‌ ಕರೆ ಮಾಡಿದ್ದು ಕುತೂಹಲ ಮೂಡಿಸಿದೆ. ಈ ಕುರಿತು ಪ್ರತಿಕ್ರಿಯಿಸಿದ ಸಂಗಣ್ಣ ‘ಸೌಜನ್ಯಕ್ಕಾಗಿ ಕಾಂಗ್ರೆಸ್‌ ನಾಯಕರು ಫೋನ್‌ ಮಾಡಿದ್ದರು. ಸಿಂಧನೂರಿನಲ್ಲಿ ರೈಲ್ವೆ ಸಂಬಂಧಿತ ಕಾರ್ಯಕ್ರಮ ಶುಕ್ರವಾರ ನಿಗದಿಯಾಗಿದ್ದು ಆ ಕಾರ್ಯಕ್ರಮ ಮುಗಿಯುವ ತನಕ ಯಾವ ವಿಷಯದ ಬಗ್ಗೆಯೂ ಮಾತನಾಡುವುದಿಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT