ಕೊಪ್ಪಳ: ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್‌ಗೇಟ್ ಎರಡು ದಿನಗಳ ಹಿಂದೆ ನೀರಿನಲ್ಲಿ ಕೊಚ್ಚಿಹೋಗಿದ್ದರಿಂದ ಹೊಸ ಗೇಟ್ ಅಳವಡಿಸಲು ಎರಡು ಕಂಪನಿಗಳ 60ಕ್ಕೂ ಹೆಚ್ಚು ಕಾರ್ಮಿಕರು ಪ್ರತ್ಯೇಕ ಸ್ಥಳಗಳಲ್ಲಿ ಹಗಲಿರುಳು ಕೆಲಸ ಮಾಡುತ್ತಿದ್ದಾರೆ.
ಕೊಚ್ಚಿ ಹೋಗಿರುವ ಗೇಟ್ 20 ಅಡಿ ಎತ್ತರ, 60 ಅಡಿ ಅಗಲವಿತ್ತು. ಈಗ ಇದನ್ನು ಹೊಸಪೇಟೆಯ ನಾರಾಯಣ ಎಂಜಿನಿಯರಿಂಗ್ ಕಂಪನಿ ಹೊಸಪೇಟೆಯಲ್ಲಿ, ಹಿಂದೂಸ್ತಾನ್ ಎಂಜಿನಿಯರಿಂಗ್ ಕಂಪನಿ ಕೊಪ್ಪಳ ತಾಲ್ಲೂಕಿನ ಹೊಸಳ್ಳಿಯ ಶೆಡ್‌ನಲ್ಲಿ ತಯಾರಿ ಮಾಡುತ್ತಿವೆ.
ಗೇಟ್‌ಗೆ ಒಟ್ಟು ಐದು ಬಾಕ್ಸ್‌ಗಳನ್ನು ಅಳವಡಿಸಲಾಗುತ್ತಿದ್ದು, ಪ್ರತಿ ಬಾಕ್ಸ್ ನಾಲ್ಕು ಅಡಿ ಎತ್ತರ ಇರಲಿದೆ. ನೀರು ರಭಸದಿಂದ ಹರಿದು ಹೋಗುವುದಕ್ಕೆ ತ್ವರಿತವಾಗಿ ಕಡಿವಾಣ ಹಾಕಲು ಶಾಶ್ವತ ಗೇಟ್ ಬದಲಿಗೆ ತಾತ್ಕಾಲಿಕವಾಗಿ ‘ಸ್ಟಾಪ್ ಲಾಗ್ ಗೇಟ್’ ಮಾತ್ರ ಅಳವಡಿಸುವ ಸಾಧ್ಯತೆಯಿದೆ ಎಂದು ತುಂಗಭದ್ರಾ ಮಂಡಳಿಯ ಮೂಲಗಳಿಂದ ಮಾಹಿತಿ ಲಭಿಸಿದೆ. ಶಾಶ್ವತ ಗೇಟ್ ಅಳವಡಿಕೆಗೆ ಸಾಕಷ್ಟು ಸಮಯ ಬೇಕಾಗುತ್ತದೆ. ಜಲಾಶಯದ ನೀರಿನ ಮಟ್ಟ 50 ಟಿಎಂಸಿ ಅಡಿಗೆ ಕುಸಿದಂತೆ ಗೇಟ್ ಸಹ ಸಿದ್ಧವಾಗಲಿದೆ.
ತುಂಗಭದ್ರಾ ಜಲಾಶಯ ನಿರ್ಮಾಣವಾಗಿ ಏಳು ದಶಕಗಳು ಉರುಳಿದ್ದು, ಮೊದಲ ಬಾರಿಗೆ ಗೇಟ್ ಬದಲಾವಣೆ ಮಾಡಲಾಗುತ್ತಿದೆ. ಪ್ರತಿ ನಿತ್ಯ ಭಾರಿ ಪ್ರಮಾಣದಲ್ಲಿ ಹರಿದು ಹೋಗುತ್ತಿರುವ ನೀರು ನಿಲ್ಲಿಸಲು ಬೃಹತ್ ಗಾತ್ರದ ಐದು ಕಬ್ಬಿಣದ ಹಲಗೆ ತಯಾರಿಸಲಾಗುತ್ತಿದೆ. ಒಂದೊಂದು ಹಲಗೆ ತಯಾರಾದ ಬಳಿಕ ಒಂದೊಂದಾಗಿ 19ನೇ ಗೇಟ್‌ನಲ್ಲಿ ಇಳಿಸಿ ನೀರು ನಿಲುಗಡೆ ಮಾಡುವ ಪ್ರಯತ್ನ ನಡೆಯುತ್ತಿದೆ. ಕೊಚ್ಚಿ ಹೋಗಿರುವ ಗೇಟ್ 42 ಟನ್ ತೂಕ ಇತ್ತು. ಹೊಸ ಗೇಟ್ ಇದಕ್ಕಿಂತಲೂ ಸ್ವಲ್ಪ ಹೆಚ್ಚು ತೂಕ ಹೊಂದಿರಲಿದೆ ಎಂದು ಹೊಸಳ್ಳಿ ಕೇಂದ್ರದ ತಯಾರಿಕಾ ಸಿಬ್ಬಂದಿ ತಿಳಿಸಿದರು.
ಹಿಂದೂಸ್ತಾನ್ ಕಂಪನಿ ಈ ಮೊದಲು ಇರಕಲ್ ಬ್ಯಾರೇಜ್, ಕೋಲ್ಕತ್ತ, ಚೆನ್ನೈ ಸೇರಿದಂತೆ ಹಲವು ಕಡೆ ಗೇಟ್‌ಗಳನ್ನು ನಿರ್ಮಿಸಿಕೊಟ್ಟಿದೆ. ತ್ವರಿತವಾಗಿ ಗೇಟ್ ತಯಾರಿಸಬೇಕಾಗಿರುವ ಕಾರಣ ಅವುಗಳಿಗೆ ಪೇಂಟ್ ಹಚ್ಚದೇ ನೇರವಾಗಿ ಜಲಾಶಯಕ್ಕೆ ಇಳಿಸಲಾಗುತ್ತದೆ. ಗೇಟ್‌ಗೆ ಒಂದು ಬಾರಿ ಪೇಂಟ್ ಹಚ್ಚಿದರೆ ಅದು ಒಣಗಲು ಕನಿಷ್ಠ ಮೂರು ದಿನಗಳು ಬೇಕು. ಪ್ರತಿ ಗೇಟ್‌ಗೆ ಒಟ್ಟು ಮೂರರಿಂದ ನಾಲ್ಕು ಬಾರಿ ಪೇಂಟ್ ಹಚ್ಚಬೇಕಾಗಿರುವ ಕಾರಣ ಹೆಚ್ಚು ಸಮಯ ವ್ಯರ್ಥವಾಗುತ್ತದೆ. ಆದ್ದರಿಂದ ಸದ್ಯಕ್ಕೆ ಗೇಟ್ ಅಳವಡಿಸಿ ಮುಂದೆ ನೀರು ಕಡಿಮೆಯಾದಾಗ ಪೇಂಟ್ ಹಚ್ಚಲು ನಿರ್ಧರಿಸಲಾಗಿದೆ. ಗೇಟ್ ನಿರ್ಮಾಣ ವೇಗವಾಗಿ ನಡೆಯಲು ಟಿ.ಬಿ. ಡ್ಯಾಂ ಮಂಡಳಿಯು ಜೂನಿಯರ್ ಎಂಜಿನಿಯರ್ ಸುಧಾಕರ್ ರೆಡ್ಡಿ ಅವರನ್ನು ಹೊಸಳ್ಳಿ ಶೆಡ್‌ನಲ್ಲಿ ನಿಯೋಜಿಸಿದ್ದು ಅವರು ಅಲ್ಲಿಯೇ ಮೊಕ್ಕಾಂ ಹೂಡಿದ್ದಾರೆ.
ಘಟನೆ ನಡೆದ ಮರುದಿನದಿಂದಲೇ ಶರವೇಗದಲ್ಲಿ ಗೇಟ್ ತಯಾರಿಸಲು ನಮ್ಮ ಕಾರ್ಮಿಕರು ಹಗಲಿರುಳು ಕೆಲಸ ಮಾಡುತ್ತಿದ್ದಾರೆ. ಮೂರ್ನಾಲ್ಕು ದಿನಗಳಲ್ಲಿ ಕೆಲಸ ಮುಗಿಯುವ ವಿಶ್ವಾಸವಿದೆ.ಆಶ್ರಫ್ ಖಲೀಮ್ ಹಿಂದೂಸ್ತಾನ್ ಕಂಪನಿ ವ್ಯವಸ್ಥಾಪಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.