ಕೊಪ್ಪಳ: ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್‌ಗೇಟ್ ಮರು ಅಳವಡಿಕೆ ಕಾರ್ಯದ ಮೊದಲ ಎಲಿಮೆಂಟ್ ಶುಕ್ರವಾರ ಯಶಸ್ಸು ಕಂಡಿದ್ದರಿಂದ ಜನಪ್ರತಿನಿಧಿಗಳು ಪರಸ್ಪರ ಸಿಹಿ ಹಂಚಿ ಸಂಭ್ರಮಿಸಿದರು.
ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ, ಸಂಸದ ರಾಜಶೇಖರ ಹಿಟ್ನಾಳ, ಕಾಡಾ ಅಧ್ಯಕ್ಷ ಹಸನಸಾಬ್ ದೋಟಿಹಾಳ, ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್ ಸೇರಿದಂತೆ ಅನೇಕರು ಸಿಹಿ ಹಂಚಿಕೊಂಡು ಖುಷಿಪಟ್ಟರು. ಎಲ್ಲರೂ ಸೇರಿ ಜಲಾಶಯಗಳ ಗೇಟ್ ಮತ್ತು ಸುರಕ್ಷತಾ ತಜ್ಞ ಕನ್ನಯ್ಯನಾಯ್ಡು ಅವರಿಗೆ ಕೈ ಕುಲಕಿ ಅಭಿನಂದನೆ ಸಲ್ಲಿಸಿದರು.
‘ತಾಂತ್ರಿಕ ತಂಡದ ನಿರಂತರ ಪರಿಶ್ರಮದಿಂದ ಗೇಟ್ ಅಳವಡಿಕೆ ಯಶಸ್ಸು ಕಂಡಿದ್ದು, ತಂಡದ ಸಂಘಟಿತ ಕಾರ್ಯ ಮಾದರಿಯಾಗಿದೆ. ಉಳಿದ ಇನ್ನು ನಾಲ್ಕು ಎಲಿಮೆಂಟ್‌ಗಳನ್ನು ಶನಿವಾರದ ಹೊತ್ತಿಗೆ ಅಳವಡಿಸಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ತಿಳಿಸಿದ್ದಾರೆ.