ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೋಲಿ, ಕಬ್ಬಲಿಗ ಸಮಾಜವನ್ನು ಎಸ್‌ಟಿಗೆ ಸೇರಿಸಲು ಸಂಪುಟ ನಿರ್ಣಯಿಸಲಿ: ಶರಣಪ್ಪ

Published : 16 ಸೆಪ್ಟೆಂಬರ್ 2024, 15:29 IST
Last Updated : 16 ಸೆಪ್ಟೆಂಬರ್ 2024, 15:29 IST
ಫಾಲೋ ಮಾಡಿ
Comments

ಕಾರಟಗಿ: ‘ಹಿಂದುಳಿದ ಕೋಲಿ, ಕಬ್ಬಲಿಗ ಸಮಾಜವನ್ನು ಪರಿಶಿಷ್ಟ ಪಂಗಡ (ಎಸ್‌ಟಿ)ಕ್ಕೆ ಸೇರ್ಪಡೆ ಮಾಡಲು ಸೆ. 17ರಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಂಡು, ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು’ ಎಂದು ಕೊಪ್ಪಳ ಜಿಲ್ಲಾ ಗಂಗಾಮತ ಸಮಾಜದ ಸಂಘಟನಾ ಕಾರ್ಯದರ್ಶಿ ಶರಣಪ್ಪ ಕಾಯಿಗಡ್ಡಿ ಒತ್ತಾಯಿಸಿದರು.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಈಗಾಗಲೇ ತಳವಾರ, ಪರಿವಾರ ಜಾತಿಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲಾಗಿದೆ. ಉಭಯ ಜಾತಿಯವರಿಗೆ ಎಸ್‌ಟಿ ಪ್ರಮಾಣ ಪತ್ರ ನೀಡಲು ಹಿಂದೇಟು ಹಾಕುತ್ತಿರುವುದು ಸರಿಯಲ್ಲ. ಎಸ್‌ಟಿ ಪ್ರಮಾಣ ಪತ್ರವನ್ನು ಒಂದೂವರೆ ವರ್ಷದಿಂದ ಸಮರ್ಪಕವಾಗಿ ವಿತರಿಸುತ್ತಿಲ್ಲ ಮತ್ತು ಸಿಂಧುತ್ವ ಪ್ರಮಾಣ ಪತ್ರ ನೀಡದೇ ಸತಾಯಿಸಲಾಗುತ್ತಿದೆ. ಸಮಸ್ಯೆಗೆ ಶಾಶ್ವತ ಪರಿಹಾರ ನೀಡಿ, ಎಲ್ಲರಿಗೂ ಕೂಡಲೇ ಸಿಂಧುತ್ವ ಪ್ರಮಾಣ ಪತ್ರ ಒದಗಿಸಬೇಕು’ ಎಂದರು.

‘ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ್ ಸಮಾಜದ ಬಗ್ಗೆ ಅಧಿವೇಶನದಲ್ಲಿ ನಿರಂತರವಾಗಿ ಧ್ವನಿ ಎತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಕೋಲಿ ಸಮಾಜಕ್ಕೆ ನ್ಯಾಯ ಸಿಗಬೇಕು ಎಂದು 2 ಬಾರಿ ಕೇಂದ್ರ ಸರ್ಕಾರದ ಗಮನ ಸೆಳೆದಿದ್ದಾರೆ. ಸಮಾಜವನ್ನು ಮತ ಬ್ಯಾಂಕ್‌ ಮಾಡಿಕೊಂಡು, ರಾಜಕೀಯ, ಸಾಮಾಜಿಕವಾಗಿ ಕಡೆಗಣಿಸಲಾಗುತ್ತಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಸುಮಾರು 9 ಲಕ್ಷ ಜನಸಂಖ್ಯೆ ಹೊಂದಿದ್ದರೂ, ಕೆಲವರಿಗೆ ಮಾತ್ರ ಕೆಲ ಸಮಯ ಅವಕಾಶ ನೀಡಲಾಗಿದ್ದು, ಉಳಿದಂತೆ ಸದಾ ಸಮಾಜವು ನಿರ್ಲಕ್ಷ್ಯಕ್ಕೊಳಗಾಗಿದೆ. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಸಮಾಜ ಸಹಿಸಲ್ಲ. ನಮ್ಮ ಬೇಡಿಕೆಯಂತೆ ಎಸ್‌ಟಿಗೆ ಸೇರಿಸುವವರೆಗೂ ಹೋರಾಟ ನಿರಂತರವಾಗಿರುತ್ತೆ’ ಎಂದು ಅವರು ಹೇಳಿದರು.

ಗಂಗಾಮತ ಸಮಾಜದ ಪ್ರಮುಖರಾದ ಸಿದ್ದಪ್ಪ ಬೇವಿನಾಳ, ಧನಂಜಯ ಕಬ್ಬೆರ್, ಯಮನಪ್ಪ ಮೂಲಿಮನಿ, ಶರಣಪ್ಪ ಸಂಗಟಿ, ಪರಶುರಾಮ್ ಹುನಗುಂದ, ಆನಂದ ಬಂದೂಕ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT