ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾವುದೇ ಪಕ್ಷವಾದರೂ ಕೊಟ್ಟ ಮಾತಿನಂತೆ ನಡೆದುಕೊಳ್ಳಬೇಕು: ಹೊರಟ್ಟಿ

Published 27 ಮೇ 2023, 14:05 IST
Last Updated 27 ಮೇ 2023, 14:05 IST
ಅಕ್ಷರ ಗಾತ್ರ

ಕೊಪ್ಪಳ: ಯಾವುದೇ ಪಕ್ಷದ ಸರ್ಕಾರ ಅಧಿಕಾರಕ್ಕೆ ಬಂದರೂ ಚುನಾವಣಾ ಪೂರ್ವದಲ್ಲಿ ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸಬೇಕು. ಜನ ಅವುಗಳನ್ನು ಎದುರು ನೋಡುತ್ತಿರುತ್ತಾರೆ ಎಂದು ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.

ಇಲ್ಲಿನ ಗವಿಸಿದ್ಧೇಶ್ವರ ಮಠಕ್ಕೆ ಶನಿವಾರ ಭೇಟಿ ನೀಡಿದ ಅವರನ್ನು ‘ಕಾಂಗ್ರೆಸ್‌ ಗ್ಯಾರಂಟಿಗಳನ್ನು ಈಡೇರಿಸುತ್ತದೆಯೇ’ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿ ‘ಸಭಾಪತಿಯಾಗಿ ರಾಜಕಾರಣದ ಬಗ್ಗೆ ಮಾತನಾಡುವುದಿಲ್ಲ. ಆದರೆ ಯಾವುದೇ ಪಕ್ಷವಾದರೂ ಕೊಟ್ಟ ಮಾತಿನಂತೆ ನಡೆದುಕೊಳ್ಳಬೇಕು. ಗ್ಯಾರಂಟಿಗಳ ಬಗ್ಗೆ ಜನರಲ್ಲಿ ಗೊಂದಲವಿದೆ. ಇದನ್ನು ಪರಿಹರಿಸುವ ನಿಟ್ಟಿನಲ್ಲಿ ಸರ್ಕಾರ ತಕ್ಷಣ ನಿಯಮ ರೂಪಿಸಬೇಕು’ ಎಂದರು.

‘ಜನರ ಕಣ್ಣಲ್ಲಿ ಈಗಿನ ರಾಜಕಾರಣ ಸಾಕಷ್ಟು ತುಚ್ಛವಾಗಿದೆ. ಆದ್ದರಿಂದ ಸದನಗಳನ್ನು ಚೆನ್ನಾಗಿ ನಡೆಸಬೇಕು. ಜನರಿಗೆ ಅನುಕೂಲವಾಗುವ ರೀತಿಯಲ್ಲಿ ಯೋಜನೆಗಳನ್ನು ರೂಪಿಸಬೇಕು. ಪ್ರಶ್ನೋತ್ತರ ಅವಧಿ ನಾಡಿಗೆ ದೊಡ್ಡ ಸಂದೇಶ ಕೊಡುತ್ತದೆ. ಸಮಸ್ಯೆಗಳಿಗೆ ಪರಿಹಾರ ಒದಗಿಸುತ್ತದೆ. ಭರವಸೆಗಳು ಭರವಸೆಗಳಷ್ಟೇ ಆಗಿ ಉಳಿಯಬಾರದು’ ಎಂದು ಅಭಿಪ್ರಾಯಪಟ್ಟರು.

ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಜೊತೆ ಚರ್ಚೆ ಮಾಡಿದ ವಿಷಯಗಳನ್ನು ಹಂಚಿಕೊಂಡ ಹೊರಟ್ಟಿ ಅವರು ‘ಸ್ವಾಮೀಜಿ ಜೊತೆಗೆ ಶಿಕ್ಷಣ, ಕಾಲೇಜುಗಳ ಬಗ್ಗೆ ಚರ್ಚೆ ಮಾಡಿದೆ. ಹಳ್ಳಿಗಳಿಂದ ನಗರ ಪ್ರದೇಶಕ್ಕೆ ಬರುವ ವಿದ್ಯಾರ್ಥಿಗಳಿಗೆ ಆಗುತ್ತಿರುವ ತೊಂದರೆಗಳ ಬಗ್ಗೆ ಸಮಾಲೋಚಿಸಿದೆವು. ನೀವು ಸಭಾಪತಿ ಇದ್ದೀರಿ. ಗ್ರಾಮೀಣ ಪ್ರದೇಶ ಮತ್ತು ಹಳ್ಳಿಮಕ್ಕಳ ಶಿಕ್ಷಣಕ್ಕೆ ಸೂಕ್ತ ಸೌಲಭ್ಯಗಳನ್ನು ಒದಗಿಸುವಂತೆ ಸ್ವಾಮೀಜಿ ಹೇಳಿದ್ದಾರೆ’ ಎಂದರು.

ಮುಂಬರುವ ದಿನಗಳಲ್ಲಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಇರಾದೆ ಇದೆಯೇ ಎನ್ನುವ ಪ್ರಶ್ನೆಗೆ ’ಎಂಟು ಬಾರಿ ವಿಧಾನಪರಿಷತ್‌ ಸದಸ್ಯನಾಗಿದ್ದೇನೆ. ರಾಜಕಾರಣ ಇಲ್ಲಿಗೆ ಸಾಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT