ಭಾನುವಾರ, 21 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಳವಂಡಿ: ನೀರಿಗಾಗಿ ಗ್ರಾಮಸ್ಥರ ಉಪವಾಸ ಸತ್ಯಾಗ್ರಹ

ಗ್ರಾಮ ಪಂಚಾಯಿತಿ ಆವರಣದಲ್ಲಿ ಖಾಲಿ ಕೊಡಗಳನ್ನು ಇಟ್ಟು ಧರಣಿ
Published 29 ಮಾರ್ಚ್ 2024, 6:39 IST
Last Updated 29 ಮಾರ್ಚ್ 2024, 6:39 IST
ಅಕ್ಷರ ಗಾತ್ರ

ಅಳವಂಡಿ: ಬರದಿಂದ ಬೇಸಿಗೆ ಆರಂಭದಲ್ಲಿಯೇ ಕುಡಿಯುವ ನೀರಿನ ತತ್ವಾರ ಉಂಟಾಗಿದ್ದು. ನಿತ್ಯ ನೀರಿಗಾಗಿ ಪರದಾಟ ತಪ್ಪಿಲ್ಲದಂತಾಗಿದೆ. ಜನ, ಜಾನುವಾರುಗಳಿಗೆ ನೀರಿನ ಸಮಸ್ಯೆಯ ಬಿಸಿ ತಟ್ಟಿದೆ.

ಅಳವಂಡಿ ಸಮೀಪದ ಬಿಸರಹಳ್ಳಿ ಗ್ರಾಮದಲ್ಲಿ ಅಲ್ಲಿನ ವೃದ್ಧರು ಹಾಗೂ ಗ್ರಾಮಸ್ಥರು ಸ್ಥಳೀಯ ಗ್ರಾಮ ಪಂಚಾಯಿತಿ ಆವರಣದಲ್ಲಿ ಖಾಲಿ ಕೊಡಗಳೊಂದಿಗೆ ನೀರು ಪೂರೈಕೆ ಮಾಡುವಂತೆ ಉಪವಾಸ ಸತ್ಯಾಗ್ರಹ ಕೈಗೊಳ್ಳುವ ಮೂಲಕ ಗುರುವಾರ ಪ್ರತಿಭಟನೆ ಮಾಡಿದರು.

‘ಬಿಸರಹಳ್ಳಿಯ ಸಾರ್ವಜನಿಕರು ಹನಿ ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಗ್ರಾಮದ ಜನರಿಗೆ ಕುಡಿಯುವ ನೀರು ಹಾಗೂ ಬಳಕೆ ನೀರನ್ನು ಸರಿಯಾದ ರೀತಿ ಒದಗಿಸುವಂತೆ ಈ ಬಗ್ಗೆ ಹಲವಾರು ಬಾರಿ ಸಂಬಂಧ ಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ತಿಳಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಪ್ರತಿಭಟನಾನಿರತರು ದೂರಿದರು.

‘ಗ್ರಾಮದಲ್ಲಿ ಸುಮಾರು 6 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದ್ದು, ತುಂಗಾಭದ್ರಾ ಜಲಾಶಯದಿಂದ ಬಿಸರಹಳ್ಳಿ ಗ್ರಾಮಕ್ಕೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಸಮರ್ಪಕವಾಗಿ ನೀರು ಪೂರೈಕೆ ಮಾಡುತ್ತಿಲ್ಲ’ ಎಂದರು.

ಈ ಹಿಂದೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕುಡಿಯುವ ನೀರಿಗಾಗಿ ಹೋರಾಟ ಮಾಡಿ, ಕುಡಿಯಲು ನೀರು ಕೊಡಿ ಇಲ್ಲದಿದ್ದರೇ ಮತದಾನ ಬಹಿಷ್ಕಾರ ಮಾಡುತ್ತೇವೆ‌ ಎಂದು ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದ್ದರು. ಸಮ‌ಸ್ಯೆ ಮನಗಂಡ ಇಲ್ಲಿನ ಅಧಿಕಾರಿಗಳು ತುಂಗಾಭದ್ರಾ ಜಲಾಶಯದಿಂದ ಪೈಪ್‌ಲೈನ್‌ ಮಾಡಿ ಗ್ರಾಮದ ಜನರಿಗೆ ನೀರು ಒದಗಿಸಿದ್ದರು. ತದನಂತರ ನೀರಿನ ಸಮಸ್ಯೆ ಇಲ್ಲದಂತಾಗಿತ್ತು. ಆದರೆ ಮೂರು ತಿಂಗಳಿನಿಂದ ನೀರಿನ ಸಮಸ್ಯೆ ಗ್ರಾಮಸ್ಥರಿಗೆ ಕಾಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸದ್ಯ ಗ್ರಾಮಕ್ಕೆ ಮೂರ್ನಾಲ್ಕು ದಿನಗಳಿಗೊಮ್ಮೆ ನೀರು ಪೂರೈಸಲಾಗುತ್ತದೆ. ಆದರೆ ಅದು ಉಪ್ಪು ಹಾಗೂ ಫ್ಲೋರೈಡ್‌ಯುಕ್ತ ನೀರು ಆಗಿರುವುದರಿಂದ ಬಳಸಲು ಯೋಗ್ಯ ಇಲ್ಲದಂತಾಗಿದೆ. ಸ್ನಾನ ಮಾಡಿದರೇ ಮೈ ತುಂಬ ಗುಳ್ಳೆಗಳು ಹಾಗೂ ಮೈತುರಿಕೆ ಉಂಟಾಗುತ್ತವೆ. ದನಕರುಗಳಿಗೆ ಕೂಡ ನೀರಿಗಾಗಿ ಪರಿ ತಪ್ಪಿಸುವಂತಾಗಿದೆ ಎನ್ನುತ್ತಾರೆ ಗ್ರಾಮದ ಅಂದಯ್ಯ ಹಿರೇಮಠ.

ಸರ್ಕಾರ ಕುಡಿಯುವ ನೀರಿನ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಿದ್ದಾರೆ. ಸ್ಥಾಪಿಸಿರುವ ಶುದ್ಧೀಕರಣ ಘಟಕಗಳು ಕೆಟ್ಟು ನಿಂತಿರುವುದರಿಂದ, ಖಾಸಗಿ ಶುದ್ಧೀಕರಣ ಘಟಕಗಳ ಅವಲಂಬನೆ ಅನಿವಾರ್ಯವಾಗಿದೆ ಎಂದು ಗೋವಿಂದಪ್ಪ ಮೂಲಿಮನಿ ‘ಪ್ರಜಾವಾಣಿ’ಗೆ ತಿಳಿಸಿದರು.

ಗ್ರಾಮಸ್ಥರಾದ ಗೋವಿಂದಪ್ಪ ಮೂಲಿಮನಿ, ಲೋಕನಗೌಡ, ಬಸವನಗೌಡ, ಬಸವರಾಜ, ನಾಗಲಿಂಗಪ್ಪ ಅರ್ಕಸಾಲಿ, ಮುದುಕಪ್ಪ ಕುರಿ, ಬಸಣ್ಣ ಅಳವಂಡಿ, ಕಂಠಪ್ಪ ಬಳಿಗಾರ, ಸಿದ್ದಪ್ಪ ಗಾಣಿಗೇರ, ಕುರುಬನಾಸಾಬ, ಗವಿಯಪ್ಪ ವಾಲ್ಮೀಕಿ, ರೇವಯ್ಯ ಗುರುವಿನ, ಯಂಕರಡ್ಡಿ ಅಂತೂರ, ಮಹಿಳೆಯರು ಹಾಗೂ ಯುವಕರು ಉಪಸ್ಥಿತರಿದ್ದರು.

ಪ್ರತಿಭಟನಾ ಸ್ಥಳಕ್ಕೆ ಎಇಇ ಭೇಟಿ
ಬಿಸರಹಳ್ಳಿಯಲ್ಲಿ ನಡೆಯುತ್ತಿರುವ ಪ್ರತಿಭಟನೆ ಸ್ಥಳಕ್ಕೆ ಎಇಇ ವಿಲಾಸ್ ಬೋಸ್ಲೆ ಭೇಟಿ ನೀಡಿ ಗ್ರಾಮಸ್ಥರ ಸಮಸ್ಯೆ ಆಲಿಸಿದರು. ಬಳಿಕ ಮಾತನಾಡಿದ ಅವರು ಜೆಜೆಎಂ ಕಾಮಗಾರಿ ಸರಿಪಡಿಸಿ ಪೈಪ್‌ಲೈನ್ ದುರಸ್ತಿ ಮಾಡಿ ಯಾವುದೇ ರೀತಿ ಜನರಿಗೆ ನೀರಿನ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು. ಶುದ್ಧ ಕುಡಿಯುವ ನೀರಿನ ಘಟಕವನ್ನು ದುರಸ್ತಿಗೊಳಿಸಲಾಗುವುದು ಎಂದು ಗ್ರಾಮಸ್ಥರಿಗೆ ಭರವಸೆ ನೀಡಿದರು. ಆಗ ಗ್ರಾಮಸ್ಥರು ಧರಣಿ ಸತ್ಯಾಗ್ರಹ ಹಿಂಪಡೆದರು. ಈ ವೇಳೆ ಕಂದಾಯ ನೀರೀಕ್ಷಕ ಸುರೇಶ ಪಿಎಸ್ಐ ಅಬ್ಬಾಸ್ ಪಿಡಿಒ ಬಸವರಾಜ ಕೀರ್ದಿ ಗ್ರಾಮ ಆಡಳಿತ ಅಧಿಕಾರಿ ಸುಪ್ರೀತಾ ಶ್ವೇತಾ ಪೊಲೀಸ್‌ ಇಲಾಖೆಯ ಜಂದಿಪೀರ ಮಲ್ಲೇಶ್ ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷ ರವೀಂದ್ರಗೌಡ ಸೇರಿದಂತೆ ಗ್ರಾಮ ಪಂಚಾಯಿತಿ ಸದಸ್ಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT