ಶುಕ್ರವಾರ, ಜೂನ್ 25, 2021
30 °C
ಸಿಹಿ ನೀರಿಗೆ ಮುಗಿಬೀಳುವ ಜನ

ಕಲಾಲಬಂಡಿ: ಬಗೆಹರಿಯದ ನೀರಿನ ಸಮಸ್ಯೆ; ಶಾಶ್ವತ ಪರಿಹಾರಕ್ಕೆ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಾಲಬಂಡಿ (ಕುಷ್ಟಗಿ): ತಾಲ್ಲೂಕಿನ ಕಲಾಲಬಂಡಿ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಮುಂದುವರಿದಿದ್ದು ತೊಂದರೆ ಅನುಭವಿಸುತ್ತಿರುವುದಾಗಿ ಗ್ರಾಮಸ್ಥರು ತಿಳಿಸಿದ್ದಾರೆ.

ಗ್ರಾಮದಲ್ಲಿ ಮನೆಗಳಿಗೆ ನಲ್ಲಿ ಸಂಪರ್ಕ ಇಲ್ಲದ ಕಾರಣ ಕನಕೊಪ್ಪ ರಸ್ತೆಯಲ್ಲಿರುವ ನೀರಿನ ತೊಟ್ಟಿಗಳಿಗೆ ನೀರು ಪೂರೈಸಲಾಗುತ್ತಿದೆ. ಅಲ್ಲಿಂದಲೇ ಎಲ್ಲರೂ ನೀರು ತೆಗೆದುಕೊಂಡು ಹೋಗಬೇಕಾಗಿದೆ. ಅನೇಕ ವರ್ಷಗಳಿಂದಲೂ ಈ ಸಮಸ್ಯೆ ಹಾಗೇ ಮುಂದುವರೆದಿದೆ. ಶಾಶ್ವತ ಪರಿಹಾರ ಕನಸಿನಂತಾಗಿದೆ ಎಂದು ಗ್ರಾಮಸ್ಥರು ಸಮಸ್ಯೆ ವಿವರಿಸಿದರು.

ಜನಜಂಗುಳಿ: ಮಸೀದಿ ಬಳಿ ಇರುವ ಕೊಳಾಯಿಯಲ್ಲಿ ಕುಡಿಯುವ ನೀರು ದೊರೆಯುವುದರಿಂದ ಗ್ರಾಮದ ಎಲ್ಲ ಮನೆಗಳ ಜನರು ಅಲ್ಲಿಗೇ ಬರುವುದರಿಂದ ಜನಜಂಗುಳಿ ನೆರೆದಿರುತ್ತದೆ. ಕೋವಿಡ್ ಸೋಂಕು ಹರಡುವುದನ್ನು ತಡೆಯುವುದಕ್ಕೆ ಜನರು ಅಂತರ ಕಾಯ್ದುಕೊಳ್ಳಬೇಕಿದ್ದರೂ ಇಲ್ಲಿ ನೀರಿನ ಸಲುವಾಗಿ ಅದಕ್ಕೆ ಅವಕಾಶವೇ ಇಲ್ಲ, ಮಹಿಳೆಯರು, ಪುರುಷರು, ಮಕ್ಕಳು ಒಂದೇ ಕಡೆ ನೆರೆದಿರುತ್ತಾರೆ ಎಂದು ತಿಳಿಸಲಾಗಿದೆ.

ಸಂಸದ ಅಸಮಾಧಾನ: ಈ ಮಧ್ಯೆ ಗುರುವಾರ ಗ್ರಾಮಕ್ಕೆ ಭೇಟಿ ನೀಡಿದ್ದ ಸಂಸದ ಸಂಗಣ್ಣ ಕರಡಿ ಅವರು ಜನರು ನೀರಿಗಾಗಿ ಒಂದೇ ಕಡೆ ಗುಂಪುಗೂಡಿದ್ದನ್ನು ಕಂಡು ಅಸಮಾಧಾನ ವ್ಯಕ್ತಪಡಿಸಿದರು. ತಕ್ಷಣ ದೂರವಾಣಿ ಮೂಲಕ ಚಳಗೇರಾ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯನ್ನು ಸಂಪರ್ಕಿಸಿದ ಸಂಸದರು, ಗ್ರಾಮಸ್ಥರು ಸುರಕ್ಷಿತ ರೀತಿಯಲ್ಲಿ ನೀರು ತೆಗೆದುಕೊಂಡು ಹೋಗುವುದಕ್ಕೆ ಅಗತ್ಯ ವ್ಯವಸ್ಥೆ ಮಾಡಬೇಕು. ಮತ್ತು ಕುಡಿಯುವ ನೀರಿಗಾಗಿ ಜನರಿಗೆ ತೊಂದರೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಈ ಕುರಿತು ಸಂಸದ ಸಂಗಣ್ಣ ಅವರಿಗೆ ಮಾಹಿತಿ ನೀಡಿದ ಅಭಿವೃದ್ಧಿ ಅಧಿಕಾರಿ ಬಸವರಾಜ ಸಂಕನಾಳ, ಗ್ರಾಮದ ನಾಲ್ಕೂ ದಿಕ್ಕಿನಲ್ಲಿ ನೀರಿನ ಕೊಳಾಯಿಗಳಿದ್ದು ನೀರು ಪೂರೈಕೆಯಾಗುತ್ತಿದೆ. ಆದರೆ ಸಿಹಿ ನೀರು ಕನಕೊಪ್ಪ ರಸ್ತೆಯಲ್ಲಿನ ಕೊಳಾಯಿಗಳಿಗೆ ಮಾತ್ರ ಸರಬರಾಜು ಆಗುತ್ತಿದೆ. ಹಾಗಾಗಿ ಜನರು ಸಿಹಿ ನೀರಿಗಾಗಿ ಏಕಕಾಲಕ್ಕೆ ಅಲ್ಲಿಗೆ ಬರುತ್ತಾರೆ. ಜನ ಗುಂಪುಗೂಡುವುದನ್ನು ತಡೆಯಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ವಿವರಿಸಿದರು.

ಅಲ್ಲದೆ ಬಹುಗ್ರಾಮ ಕುಡಿಯುವ ನೀರು ಪೂರೈಕೆ ಯೋಜನೆ ಕಾಮಗಾರಿ ಪ್ರಗತಿಯಲ್ಲಿದ್ದು ಈಗಾಗಲೇ ಕೊಳವೆಗಳನ್ನು ಅಳವಡಿಸಲಾಗಿದೆ. ಕೃಷ್ಣಾ ನದಿಯಿಂದ ನೀರು ಸರಬರಾಜು ಆದರೆ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯಲಿದೆ ಎಂದೂ ಹೇಳಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಮಹೇಶ್, ಪ್ರಭುಶಂಕರಗೌಡ ಪಾಟೀಲ, ಶರಣಪ್ಪ ಹಿರೇಮನಿ  ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು