ಕೊಪ್ಪಳ: ‘ನಾವು ಬಿಜೆಪಿ ಜೊತೆ ಕೈ ಜೋಡಿಸಿದ್ದೇವೆ ಎನ್ನುವ ಮಾತ್ರಕ್ಕೆ ನಮ್ಮ ಸಿದ್ದಾಂತಗಳನ್ನು ಮಾರಾಟ ಮಾಡಿಕೊಂಡಿದ್ದೇವೆ ಎಂದಲ್ಲ. ಅಲ್ಪಸಂಖ್ಯಾತರು ಸೇರಿ ಎಲ್ಲ ಸಮುದಾಯಗಳ ಜನರ ಏಳಿಗೆಗೂ ನಾವು ದುಡಿಯುತ್ತೇವೆ’ ಎಂದು ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.
ನಗರದಲ್ಲಿ ಬುಧವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು ಚನ್ನಪಟ್ಟಣದ ಟಿಕೆಟ್ ಬಗ್ಗೆ ಪ್ರತಿಕ್ರಿಯಿಸಿ ‘ಸಿ.ಪಿ. ಯೋಗೇಶ್ವರ ಈಗಾಗಲೇ ವಿಧಾನಪರಿಷತ್ ಸದಸ್ಯರಿದ್ದಾರೆ. ಚನ್ನಪಟ್ಟಣದಲ್ಲಿ ಪ್ರಬಲವಾಗಿ ಬೆಳೆದ ಎರಡನೇ ಹಂತದ ನಾಯಕರ ದೊಡ್ಡಪಡೆಯೇ ಇದೆ. ಬಿಜೆಪಿ ಹಾಗೂ ಜೆಡಿಎಸ್ ಸಂಬಂಧ ಶಾಶ್ವತವಾಗಿ ಇರಬೇಕು ಎನ್ನುವ ಕಾರಣಕ್ಕೆ ದೇವೇಗೌಡರ ಮನಪೂರ್ತಿಯಾಗಿ ಮೈತ್ರಿಗೆ ಸಹಿ ಹಾಕಿದ್ದಾರೆ. ಎರಡೂ ಪಕ್ಷಗಳ ನಾಯಕರ ಸಮ್ಮತಿಯೊಂದಿಗೆ ಅಭ್ಯರ್ಥಿಯನ್ನು ಅಂತಿಮಗೊಳಿಸಲಾಗುವುದು’ ಎಂದರು.
ತಾವು ಟಿಕೆಟ್ ಆಕಾಂಕ್ಷಿಯೇ ಎನ್ನುವ ಪ್ರಶ್ನೆಗೆ ಮಾತ್ರ ಸ್ಪಷ್ಟ ಉತ್ತರ ನೀಡದ ಅವರು ’ಚನ್ನಪಟ್ಟಣದಲ್ಲಿ ಎನ್‌ಡಿಯ ಅಭ್ಯರ್ಥಿಯೇ ಗೆಲ್ಲಬೇಕು. ಆದರೆ ಅಲ್ಲಿ ಜೆಡಿಎಸ್ ಪಕ್ಷದ ಚಿಹ್ನೆಗೆ ಒಲಿಯುವ ಹಲವು ಸಾಂಪ್ರದಾಯಿಕ ಮತಗಳು ಇವೆ’ ಎಂದು ಹೇಳಿದರು.
‘ಕುಮಾರಸ್ವಾಮಿ ಅವರು ತಮ್ಮ ರಾಜಕೀಯ ಬದುಕಿನಲ್ಲಿ ಎಂದಿಗೂ ಹಿಟ್ ಅಂಡ್ ರನ್ ಮಾಡಿದವರಲ್ಲ. ಪೆನ್ ಡ್ರೈವ್ ಸೇರಿದಂತೆ ಅನೇಕ ದಾಖಲೆಗಳು ಇವೆ. ವಿರೋಧ ಪಕ್ಷದಲ್ಲಿದ್ದುಕೊಂಡು ಸಂದರ್ಭ ಬಂದಾಗ ಬಹಿರಂಗಪಡಿಸುತ್ತೇವೆ’ ಎಂದು ಪ್ರತಿಕ್ರಿಯಿಸಿದರು.