ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಲೇಜಿಗೆ ಮೂಲಸೌಲಭ್ಯ

ತಳಕಲ್ ಕೌಶಲ ಅಭಿವೃದ್ಧಿ ಕೇಂದ್ರಕ್ಕೆ ಉಪಮುಖ್ಯಮಂತ್ರಿ ಚಾಲನೆ
Last Updated 11 ನವೆಂಬರ್ 2020, 7:33 IST
ಅಕ್ಷರ ಗಾತ್ರ

ಕೊಪ್ಪಳ: ರಾಜ್ಯದಲ್ಲಿಯೇ ಮಾದರಿಯಾದ ಕಟ್ಟಡವನ್ನು ಇಲ್ಲಿನ ಎಂಜಿನಿಯರಿಂಗ್ ಕಾಲೇಜು ಹೊಂದಿದೆ. ಇಲ್ಲಿರುವ ಕೌಶಲ ಅಭಿವೃದ್ಧಿ ಕೇಂದ್ರವನ್ನು ಉನ್ನತಮಟ್ಟದಲ್ಲಿ ರೂಪಿಸಲು ಶ್ರಮಿಸಲಾಗುವುದು ಎಂದು ಉನ್ನತ ಶಿಕ್ಷಣ, ಐಟಿ, ಬಿಟಿ ಸಚಿವ ಹಾಗೂ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.

ಅವರು ಕುಕನೂರು ತಾಲ್ಲೂಕಿನ ತಳಕಲ್‌ ಗ್ರಾಮದಲ್ಲಿರುವ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ಆವರಣದಲ್ಲಿರುವ ಕೌಶಲ ಅಭಿವೃದ್ಧಿ ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿದರು.

ಉನ್ನತ ಶಿಕ್ಷಣಕ್ಕೆ ರಾಜ್ಯ ದೇಶದಲ್ಲಿಯೇ ಮಾದರಿಯಾಗಿದೆ. ಇಲ್ಲಿರುವ ಕಾಲೇಜು ಕೂಡಾ ಮಾದರಿಯಾಗಿ ರೂಪಿಸಲು ಶಾಸಕ ಹಾಲಪ್ಪ ಆಚಾರ ಉತ್ಸಾಹದಿಂದ ಶ್ರಮಿಸುತ್ತಿದ್ದಾರೆ. ಅವರ ನಿರೀಕ್ಷೆಗೆ ತಕ್ಕಂತೆ ಕಾರ್ಯನಿರ್ವಹಿಸಿ ಈ ಭಾಗದ ಒಂದು ಬೌದ್ಧಿಕ ಕೇಂದ್ರವನ್ನಾಗಿ ರೂಪಿಸಲಾಗುವುದು ಎಂದರು.

ಈ ಕಾಲೇಜಿಗೆ ಅಪಾರ ಪ್ರಮಾಣದ ಮಾನವ ಸಂಪನ್ಮೂಲದ ಅವಶ್ಯಕತೆ ಇದೆ. ಪ್ರಸ್ತುತ ಸಂದರ್ಭದಲ್ಲಿ ಹಣಕಾಸಿನ ತೊಂದರೆ ಇರುವುದರಿಂದ ಮುಂದಿನ ದಿನಗಳಲ್ಲಿ ಖಂಡಿತಾ ಮೂಲಸೌಕರ್ಯಗಳನ್ನು ಕಲ್ಪಿಸಿ ಅತ್ಯುತ್ತಮ ಕೇಂದ್ರವನ್ನಾಗಿ ರೂಪಿಸಲಾಗುವುದು ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ ಮಾತನಾಡಿ, ತಳಕಲ್ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ರಾಜನಿಲ್ಲದ ಅರಮನೆಯಂತೆ ಇದೆ. ಸೇನಾಪತಿಯೂ ಇಲ್ಲ. ಸೈನಿಕರೂ ಇಲ್ಲ. ಹಾಗಾಗಿ ಈ ಕಾಲೇಜಿಗೆ ಇನ್ನೂ ಹೆಚ್ಚಿನ ಮೌಲ್ಯ ಬರಬೇಕಾದರೆ ಭೌತಿಕ ಕಟ್ಟಡದ ಜೊತೆಗೆ ಸಿಬ್ಬಂದಿ ನೇಮಕಾತಿಯನ್ನು ಕೂಡಾ ಮಾಡಬೇಕು ಎಂದು ಮನವಿ ಮಾಡಿದರು.

ಶಾಸಕ ಹಾಲಪ್ಪ ಆಚಾರ ಪ್ರಾಸ್ತಾವಿಕವಾಗಿ ಮಾತನಾಡಿ, ತಳಕಲ್‌ ಕಾಲೇಜು ಬೃಹತ್ ಕಟ್ಟಡವನ್ನು ಹೊಂದಿದ್ದು, ಮೂಲಸೌಕರ್ಯ ಕಲ್ಪಿಸುವುದರ ಜೊತೆಗೆ ಧಾರವಾಡ ಐಐಟಿ ಕೇಂದ್ರದ ವಿಸ್ತರಣಾ ಕೇಂದ್ರವನ್ನು ತೆರೆಯಬೇಕು ಎಂದು ಸಚಿವರನ್ನು ಆಗ್ರಹಿಸಿದರು.

ನಾನು ಶಾಸಕನಾದ ನಂತರ ಕ್ಷೇತ್ರದ ನೀರಾವರಿ ಮತ್ತು ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಿದ್ದೇನೆ. ಕಟ್ಟಡಗಳನ್ನು ನಿರ್ಮಾಣ ಮಾಡುವುದಷ್ಟೇ ನಮ್ಮ ಕೆಲಸವಲ್ಲ. ಅದು ಸದಾ ಕ್ರಿಯಾಶೀಲವಾಗಿರುವಂತೆ ಸಿಬ್ಬಂದಿ ನೇಮಕ, ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಈ ನಿಟ್ಟಿನಲ್ಲಿ ಸಚಿವರು ಗಮನ ಹರಿಸಬೇಕು ಎಂದು ಮನವಿ ಮಾಡಿದರು.

ಸಂಸದ ಸಂಗಣ್ಣ ಕರಡಿ ಮಾತನಾಡಿ, ಜಿಲ್ಲೆಯ ಉನ್ನತ ಶಿಕ್ಷಣ ಕೇಂದ್ರಗಳಿಗೆ ಹಣಕಾಸಿನ ಕೊರತೆ ಇದೆ. ಕೌಶಲ ಕೇಂದ್ರದ ಜೊತೆಗೆ ಉಳಿದ ಶಿಕ್ಷಣ ಸಂಸ್ಥೆಯನ್ನು ಅಭಿವೃದ್ಧಿಗೊಳಿಸಬೇಕು. ಮಾಜಿ ಸಚಿವ ಬಸವರಾಜ ರಾಯರಡ್ಡಿ ತಮ್ಮ ಅವಧಿಯಲ್ಲಿ ಉತ್ತಮವಾದ ಕಾಲೇಜು ನಿರ್ಮಾಣ ಮಾಡಿದ್ದಾರೆ. ಅದಕ್ಕೆ ಇರುವ ಕೊರತೆಯನ್ನು ನೀಗಿಸಿ ನಾವು ಸದ್ಬಳಕೆ ಮಾಡಿಕೊಳ್ಳಬೇಕಿದೆ ಎಂದು ಸ್ಮರಿಸಿದರು.

ಶಾಸಕ ಅಮರೇಗೌಡ ಬಯ್ಯಾಪುರ ಮಾತನಾಡಿದರು. ಶಾಸಕ ಪರಣ್ಣ ಮುನವಳ್ಳಿ, ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ಉಪಕುಲಪತಿ ಕರಿಸಿದ್ಧಪ್ಪ, ಉನ್ನತ ಶಿಕ್ಷಣ ಇಲಾಖೆ ಆಯುಕ್ತ ಪ್ರದೀಪ್, ಕೌಶಲ ಅಭಿವೃದ್ಧಿ ಕೇಂದ್ರದ ವ್ಯವಸ್ಥಾಪಕ ನಿರ್ದೇಶಕ ಅಶ್ವಿನ್, ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಟಿ.ಶ್ರೀಧರ್, ಜಿಲ್ಲಾ ಪಂಚಾಯಿತಿ ಸಿಇಒ ರಘುನಂದನಮೂರ್ತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT