ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪಳ | ವಾರಾಂತ್ಯ ಕರ್ಫ್ಯೂ: ಮಿಶ್ರ ಪ್ರತಿಕ್ರಿಯೆ

ಜಿಲ್ಲೆಯಾದ್ಯಂತ ಅಂಗಡಿ ಮುಂಗಟ್ಟು ಬಂದ್; ಅವಶ್ಯಕ ಸಾಮಗ್ರಿಗಳ ಖರೀದಿಗೆ ಅವಕಾಶ
Last Updated 9 ಜನವರಿ 2022, 3:26 IST
ಅಕ್ಷರ ಗಾತ್ರ

ಕೊಪ್ಪಳ: ಕೋವಿಡ್ ಮೂರಲೇ ಅಲೆ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಘೋಷಿಸಿದ ವಾರಾಂತ್ಯದ ಕರ್ಫ್ಯೂಗೆ ಮೊದಲ ದಿನದ ಶನಿವಾರ ಜಿಲ್ಲೆಯಲ್ಲಿಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಸಾರ್ವಜನಿಕರು ಎಂದಿನಂತೆ ರಸ್ತೆ ಮೇಲೆ ಓಡಾಡುತ್ತಿರುವುದು ಕಂಡು ಬಂತು. ಅಂಗಡಿ, ಮುಂಗಟ್ಟುಗಳನ್ನು ಪೊಲೀಸರು ತಿಳಿಹೇಳಿ ಮುಚ್ಚಿಸಿದರು. ದೂರದ ಊರುಗಳಿಗೆ ಬಸ್‌ಗಳು ಇದ್ದರೂ ಪ್ರಯಾಣಿಕರ ಸಂಖ್ಯೆ ಕಡಿಮೆ ಇತ್ತು.ಸಾರಿಗೆ ಸಂಸ್ಥೆ ಬಸ್‌ಗಳ ಹೊರತಾಗಿ ಬೇರೆ ಯಾವುದೇ ಖಾಸಗಿ ವಾಹನಗಳು ರಸ್ತೆಗೆ ಇಳಿಯಲಿಲ್ಲ. ಸಿನಿಮಾ ಮಂದಿರ, ನಾಟಕ ಪ್ರದರ್ಶನವೂ ಸ್ಥಗಿತಗೊಂಡಿತ್ತು.

ಶಾಲೆ–ಕಾಲೇಜಿಗೆ ರಜೆ ನೀಡಿದ್ದರಿಂದ ಸರ್ಕಾರಿ ಹಾಗೂ ಖಾಸಗಿ ಕಚೇರಿಗಳಿಗೆ ತೆರಳುವವರು ಹೊರತಾಗಿ ಬೇರೆ ಯಾರೂ ರಸ್ತೆಗೆ ಇಳಿಯಲಿಲ್ಲ. ಟಂಟಂ, ಆಟೊಗಳು ರಸ್ತೆಗೆ ಇಳಿಯಲಿಲ್ಲ. ಬೆಳಿಗ್ಗೆಯಿಂದಲೇಬಹುತೇಕ ರಸ್ತೆಗಳು ಸ್ತಬ್ಧವಾಗಿದ್ದವು. ಸದಾ ಜನ, ವಾಹನ ದಟ್ಟಣೆಯಿಂದ ಕೂಡಿರುತ್ತಿದ್ದ ಪ್ರಮುಖ ರಸ್ತೆ, ಮಾರುಕಟ್ಟೆ ಪ್ರದೇಶ, ಬಸವೇಶ್ವರ ವೃತ್ತದಲ್ಲಿ ಜನರು ತಿರಿಗಾಡುತ್ತಿರುವುದು ಕಂಡು ಬಂತು.

ಭಾಗ್ಯನಗರಕ್ಕೆ ಹೋಗುವ ಆಟೊಗಳು ಪ್ರಯಾಣಿಕರನ್ನು ಹತ್ತಿಸಿಕೊಂಡು ಹೋಗುವುದನ್ನು ಕಂಡ ಪೊಲೀಸರು ಲಾಠಿ ಬೀಸಿದರು. ಎಲ್ಲೆಡೆ ಬಿಗಿಬಂದೋಬಸ್ತ್‌ ಹಾಕಿದ್ದರಿಂದ ಜನರಿಗೆ ತಿಳಿಹೇಳಿ ಅನವಶ್ಯಕವಾಗಿ ಸಂಚಾರ ಮಾಡದಂತೆ ತಿಳಿ ಹೇಳುತ್ತಿರುವುದು ಕಂಡು ಬಂತು.

ಆಸ್ಪತ್ರೆಗೆ ಹೋಗುವವರು, ಸರ್ಕಾರಿ ವಾಹನಗಳು ಮತ್ತು ಇತರೆ ತುರ್ತು ಕಾರ್ಯದ ವಾಹನಗಳು ಮಾತ್ರ ರಸ್ತೆಗೆ ಇಳಿದ್ದವು. ಅವುಗಳ ಸಂಚಾರ ಕಾರಣವನ್ನು ಕೇಳಿ ಕೆಲವು ಕಡೆ ವಾಹನಗಳನ್ನು ಬಿಡಲಾಯಿತು.

ನಸುಕಿನಲ್ಲಿ ಎಂದಿನಂತೆಯೇ ರಸ್ತೆ ಪಕ್ಕ ವ್ಯಾಪಾರಕ್ಕೆ ಮುಂದಾದ ಕಾಯಿ–ಪಲ್ಲೆ ಮಾರಾಟಗಾರರನ್ನು ಪೊಲೀಸರು ಖಾಲಿ ಮಾಡಿಸಿದರು. ಗ್ರಾಹಕರು ಇಲ್ಲದ ಕಾರಣ ಬಹುತೇಕ ಹೋಟೆಲ್‌ಗಳು ಬಂದ್ ಆಗಿದ್ದವು. ಅಲ್ಲೊಂದು ಇಲ್ಲೊಂದು ಹೋಟೆಲ್‌ನವರು ಊಟ–ತಿಂಡಿ ಪಾರ್ಸೆಲ್ ಮಾತ್ರ ನೀಡಿದರು. ಔಷಧಿ ಅಂಗಡಿಗಳು, ಹಾಲು–ಮೊಸರು ಮಾರಾಟಕ್ಕೆ ಬೂತ್‌ಗಳು ಮಾತ್ರ ಬಾಗಿಲು ತೆರೆದಿದ್ದವು. ದ್ವಿಚಕ್ರ ವಾಹನ ಸವಾರರು ಮನೆಯಿಂದ ಹೊರಗೆ ಬಂದರೂ ಮುಖ್ಯರಸ್ತೆಗಳಲ್ಲಿ ಪೊಲೀಸರ ಉಪಸ್ಥಿತಿ ಕಂಡು ದಿಕ್ಕು ಬದಲಿಸಿ ಒಳ ರಸ್ತೆಗಳತ್ತ ಮುಖ ಮಾಡಿದರು.

ತಾಲ್ಲೂಕಿನ ಗ್ರಾಮೀಣ ಭಾಗದಲ್ಲೂ ಅಷ್ಟೊಂದು ಪರಿಣಾಮಕಾರಿಯಾಗಿರಲಿಲ್ಲ. ಕೃಷಿ ಕಾರ್ಯಗಳಲ್ಲಿ ತೊಡಗಿದ್ದವರು ಬಿಟ್ಟರೆ ಪಟ್ಟಣಗಳತ್ತ ಮುಖ ಮಾಡಲಿಲ್ಲ. ಗ್ರಾಮಗಳಲ್ಲಿ ಮೊದಲೇ ಡಂಗೂರ ಹೊಡೆಸಲಾಗಿತ್ತು. ಲಾಕ್‌ಡೌನ್‌ ಸಂಪೂರ್ಣ ಅಲ್ಲ ಎಂದು ತಿಳಿದು ಅಲ್ಲಲ್ಲಿ ಎಂದಿನಂತೆ ಜನರು ಮಾತನಾಡಿಕೊಳ್ಳುತ್ತಾ ನಿಂತಿರುವುದು ಕಂಡು ಬಂತು.

ಸಂಪೂರ್ಣ ಲಾಕ್‌ಡೌನ್‌ ಹೇರದೇ ಇದ್ದರೂ ಸೆಮಿಲಾಕ್‌ಡೌನ್‌ ರೀತಿ ನಗರದಲ್ಲಿ ಕಂಡು ಬಂತು. ಜನರು ಸೋಂಕಿನ ಬಗ್ಗೆ ಅಷ್ಟೊಂದು ಗಂಭೀರವಾಗಿ ತೆಗೆದುಕೊಳ್ಳದೇ ಮಾಸ್ಕ್‌ ಇಲ್ಲದೇ ಸಂಚಾರ ಮಾಡುವುದು ನಡೆದಿತ್ತು. ನಗರದ ಒಳಗಿನ ಬಡಾವಣೆಗಳಲ್ಲಿ ಅಂಗಡಿಗಳನ್ನು ಅರ್ಧ ತೆರೆಯುವುದು, ಸಣ್ಣಪುಟ್ಟ ಅಂಗಡಿಗಳಲ್ಲಿ ಎಂದಿನಂತೆ ವ್ಯಾಪಾರ ಮಾಡುತ್ತಿರುವುದು ಕಂಡು ಬಂತು.

*

ಸೋಂಕು ತಡೆಗೆ ಸರ್ಕಾರ ಕರ್ಫ್ಯೂ ಜಾರಿಗೊಳಿಸಿದೆ. ಎಲ್ಲರೂ ಮಾರ್ಗಸೂಚಿ ಪಾಲಿಸಬೇಕು. ಶನಿವಾರ ಯಾವುದೇ ಗೊಂದಲವಿಲ್ಲದೆ ಜನರು ಕರ್ಫ್ಯೂಗೆ ಸಹಕಾರ ನೀಡಿದ್ದಾರೆ.
-ಟಿ.ಶ್ರೀಧರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT