ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಗೇಂದ್ರರನ್ನು ಸಂಪುಟದಿಂದ ಕೈ ಬಿಡುತ್ತಾರಾ: ಶಾಸಕ ಜನಾರ್ದನ ರೆಡ್ಡಿ ಪ್ರಶ್ನೆ

Published 28 ನವೆಂಬರ್ 2023, 16:47 IST
Last Updated 28 ನವೆಂಬರ್ 2023, 16:47 IST
ಅಕ್ಷರ ಗಾತ್ರ

ಕೊಪ್ಪಳ: ‘ಹಿಂದೆ ಸಿದ್ದರಾಮಯ್ಯ ನನ್ನ ವಿರುದ್ಧ ಗಣಿ ಹಗರಣದ ಕಥೆ ಹೆಣೆದು ಬಳ್ಳಾರಿ ತನಕ ಪಾದಯಾತ್ರೆ ಮಾಡಿ ಅಧಿಕಾರ ಗಿಟ್ಟಿಸಿಕೊಂಡರು. ಈಗ ಅವರ ಸಂಪುಟದಲ್ಲಿಯೇ ಸಚಿವರಾಗಿರುವ ನಾಗೇಂದ್ರ ಮೇಲೆ ಗಣಿ ಹಗರಣದ 20 ಪ್ರಕರಣಗಳಿವೆ. ಅವರನ್ನು ಸಚಿವ ಸ್ಥಾನದಿಂದ ಸಿದ್ದರಾಮಯ್ಯ ಕೈ ಬಿಡುತ್ತಾರೆಯೇ?’ ಎಂದು ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಪ್ರಶ್ನಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ಸಿದ್ದರಾಮಯ್ಯ ಪ್ರಾಮಾಣಿಕ ವ್ಯಕ್ತಿ ಎಂದು ಪಕ್ಷ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿತು. ಆದರೆ, ಅವರು ‘ಡಿ.ಕೆ. ಶಿವಕುಮಾರ್‌ ವಿರುದ್ಧದ ಸಿಬಿಐ ತನಿಖೆ ಹಿಂಪಡೆದು ದೊಡ್ಡ ತಪ್ಪು ಮಾಡಿದರು’ ಎಂದರು.

‘ರಾಜ್ಯಾಧ್ಯಕ್ಷರಾದ ಬಳಿಕ ಬಿ.ವೈ. ವಿಜಯೇಂದ್ರ ಫೋನ್‌ ಮಾಡಿದ್ದರು. ವೈಯಕ್ತಿಕವಾಗಿ ಶುಭಾಶಯಗಳನ್ನು ಕೋರಿದೆ ಹೊರತು; ಯಾವುದೇ ರಾಜಕೀಯ ಚರ್ಚೆ ಮಾಡಲಿಲ್ಲ. ಬಿಜೆಪಿ ಹಾಗೂ ಕಾಂಗ್ರೆಸ್‌ ಈ ಎರಡೂ ಪಕ್ಷಗಳನ್ನು ಸೇರ್ಪಡೆಯಾಗುವುದು ಕನಸಿನ ಮಾತು. ನಾನು ಕಟ್ಟಿರುವ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಬೆಳವಣಿಗೆಗೆ ಶ್ರಮಿಸುವೆ’ ಎಂದು ಹೇಳಿದರು.

‘ನರೇಂದ್ರ ಮೋದಿ ಪ್ರಧಾನಿಯಾಗಿ ಹತ್ತು ವರ್ಷಗಳಾದರೂ ಅಂಜನಾದ್ರಿ ಅಭಿವೃದ್ಧಿಗೆ ಒಂದು ಸಣ್ಣ ಕಲ್ಲು ಹಾಕಲು ಅವರಿಗೆ ಸಾಧ್ಯವಾಗಿಲ್ಲ. ಆಯೋಧ್ಯೆ ಮಾದರಿಯಲ್ಲಿ ಅಂಜನಾದ್ರಿ ಕಾರಿಡಾರ್‌ ಅಭಿವೃದ್ಧಿ ಮಾಡಿ ದೇಶವೇ ಈ ಭಾಗದಲ್ಲಿ ನೋಡುವಂತೆ ಮಾಡುವೆ’ ಎಂದರು.

‘ಗಂಗಾವತಿಯಿಂದ ಆಯೋಧ್ಯೆಗೆ ನೇರ ರೈಲು ಸಂಚಾರ ಆರಂಭಿಸುವುದಾಗಿ ಕೊಪ್ಪಳ ಸಂಸದ ಸಂಗಣ್ಣ ಕರಡಿ ಮೇಲಿಂದ ಮೇಲೆ ಹೇಳುತ್ತಿದ್ದಾರೆ. ಚುನಾವಣೆ ಬಂದಾಗ ಮಾತ್ರ ರೈಲು ಬಿಡುವ ವಿಚಾರ ಮಾತನಾಡುತ್ತಾರೆ. ನಾನು ₹5  ಸಾವಿರ ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಯೋಜನೆ ರೂಪಿಸಿದ್ದೇನೆ’ ಎಂದು ಹೇಳಿದರು.

ಕರಡಿ ಹಾವಳಿ ಕಡಿವಾಣಕ್ಕೆ ಆಗ್ರಹ
ಕೊಪ್ಪಳ: ಇರಕಲ್ಲಗಡ ಹೋಬಳಿ ಭಾಗದಲ್ಲಿ ಕರಡಿ ಹಾವಳಿ ಹೆಚ್ಚಾಗುತ್ತಿದ್ದು ಜನ ಗಂಭೀರ ಸಮಸ್ಯೆ ಎದುರಿಸುತ್ತಿದ್ದಾರೆ. ಕರಡಿ ಹಾವಳಿಗೆ ಕಡಿವಾಣ ಹಾಕಬೇಕು. ಇಲ್ಲವಾದರೆ ಜಿಲ್ಲಾಡಳಿತ ಭವನದ ಎದುರು ಹೋರಾಟ ಮಾಡಲಾಗುವುದು ಎಂದು ಜನಾರ್ದನ ರೆಡ್ಡಿ ಹೇಳಿದರು. ಆ ಭಾಗದಲ್ಲಿ ಕರಡಿ ಧಾಮ ನಿರ್ಮಿಸಬೇಕು ಈ ಕುರಿತು ಬೆಳಗಾವಿ ಅಧಿವೇಶನದಲ್ಲಿ ಚರ್ಚೆ ಮಾಡುವೆ. ಕರಡಿ ಹಾಳುಮಾಡಿದ ಬೆಳೆ ಮತ್ತು ಗಾಯಗೊಂಡ ವ್ಯಕ್ತಿ ಎರಡಕ್ಕೂ ಸರ್ಕಾರದಿಂದ ಪರಿಹಾರ ಸಿಗುತ್ತಿಲ್ಲ. ಈ ಬಗ್ಗೆ ತುರ್ತು ಕ್ರಮ ಕೈಗೊಳ್ಳಬೇಕು ಎಂದರು.   

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT