ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎರೆಹುಳು ಗೊಬ್ಬರ’ದಲ್ಲಿ ಯಶ ಕಂಡ ಸೈದಾಬಿ

Last Updated 8 ಮಾರ್ಚ್ 2020, 10:28 IST
ಅಕ್ಷರ ಗಾತ್ರ

ಗಂಗಾವತಿ: ಓದಿದ್ದು ಮೂರನೇ ತರಗತಿಯಾದರೂ ಯಾವ ವಿದ್ಯಾವಂತರಿಗೂ ಕಮ್ಮಿ ಇಲ್ಲ ಈ ರೈತ ಮಹಿಳೆ. ತನ್ನ ಇಳಿ ವಯಸ್ಸಿನಲ್ಲಿ ಇಂದಿಗೂ ಬತ್ತದ ಅವರ ಉತ್ಸಾಹ ಇಂದು ಅವರನ್ನು ಜಿಲ್ಲೆಯಾದ್ಯಂತ ಗುರುತಿಸುವಂತೆ ಮಾಡಿದೆ.

ತಾಲ್ಲೂಕಿನ ಬಂಡ್ರಾಳ ಗ್ರಾಮದ ಸೈದಾಬಿ ಈ ಸಾಧಕಿ.2004ರಲ್ಲಿ ಕೃಷಿ ವಿಜ್ಞಾನಿಗಳಿಂದ ತರಬೇತಿ ಪಡೆದು ಅಂದು ಪುಟ್ಟದಾಗಿ ಪ್ರಾರಂಭ ಮಾಡಿದ ಎರೆಹುಳು ಗೊಬ್ಬರ ತಯಾರಿಕೆ ಘಟಕ ಅವರನ್ನು ಸ್ವಾವಲಂಬಿಯಾಗಿ ಜೀವನ ನಡೆಸುವಂತೆ ಮಾಡಿದೆ. ಕೈತುಂಬಾ ಆದಾಯ ಗಳಿಸುವ ಇವರು, ಇತರರಿಗೂ ಮಾರ್ಗದರ್ಶನ ಮಾಡುವ ಮೂಲಕ ಈ ಭಾಗದಲ್ಲಿ ಪ್ರಸಿದ್ಧಿ ಹೊಂದಿದ್ದಾರೆ.

ಕೆವಿಕೆಯಿಂದ ಬದಲಾಯಿತು ಜೀವನ:‘ಗಂಗಾವತಿಯ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ 2004 ರಲ್ಲಿ ಎರೆಹುಳು ಗೊಬ್ಬರ ತಯಾರಿಕೆಯ ತರಬೇತಿ ನೀಡಲಾಗಿತ್ತು. ನಾನು, ನಮ್ಮ ಗ್ರಾಮದ ಸ್ವಸಹಾಯ ಗುಂಪುಗಳ ಮೂಲಕ ಈ ಎರೆಹುಳು ಗೊಬ್ಬರ ತಯಾರಿಕೆ ಶುರುಮಾಡಿದೆವು. ಆದರೆ, ಗುಂಪುಗಳ ನಡುವೆ ಗೊಬ್ಬರದ ಬಗ್ಗೆ ವೈಷ್ಯಮಗಳು ಉಂಟಾಗಿದ್ದರಿಂದ ಕೃಷಿ ಅಧಿಕಾರಿಗಳ ಜೊತೆ ಚರ್ಚಿಸಿ ಪ್ರತ್ಯೇಕವಾಗಿ ಮನೆಯ ಆವರಣದಲ್ಲಿ ಎರೆಹುಳುಗಳ ಗೊಬ್ಬರವನ್ನು ತಯಾರು ಮಾಡಲು ಶುರುಮಾಡಿದೆ. ಆದರೆ, ಮೊದಲಿಗೆ ಯಾರೂ ಇದನ್ನು ತೆಗೆದುಕೊಳ್ಳಲಿಲ್ಲ. ಹಾಗಾಗಿ ನಮ್ಮ ಹೊಲಕ್ಕೆ ಹಾಕಿದೆ. ಆ ವರ್ಷ ಅಧಿಕ ಇಳುವರಿ ಬಂತು. ಕ್ರಮೇಣ ಗೊಬ್ಬರಕ್ಕೆ ಬೇಡಿಕೆ ಸಹ ಹೆಚ್ಚಾಗತೊಡಗಿತು’ ಎಂದು ಅವರು ಹೇಳಿದರು.

‘ಇಂದು ನಮ್ಮ ಜಮೀನಿನಲ್ಲಿ ಬರುವ ಆದಾಯಕ್ಕಿಂತ ಈ ಎರೆಹುಳು ಗೊಬ್ಬರದಿಂದಲೇ ವಾರ್ಷಿಕ ₹60 ಸಾವಿರಕ್ಕೂ ಹೆಚ್ಚು ಆದಾಯವನ್ನು ನಾನು ಗಳಿಸುತ್ತಿದ್ದೇನೆ. ಜೊತೆಗೆ ಇದೇ ಆದಾಯದಲ್ಲಿ ಕುಟುಂಬವನ್ನು ನಿರ್ವಹಿಸುವುದರ ಜೊತೆ ಇಬ್ಬರು ಮಕ್ಕಳ ಮದುವೆ ಮಾಡಿದ್ದೇನೆ. ಈ ಎರೆಹುಳು ಗೊಬ್ಬರ ತಯಾರಿಕೆ ನನ್ನ ಜೀವನದ ದಿಕ್ಕನ್ನೇ ಬದಲಾಯಿಸಿದೆ’ ಎಂದು ಅವರು ಹೆಮ್ಮೆಪಟ್ಟರು.

3 ತಿಂಗಳಿಗೆ 30 ಕ್ವಿಂಟಲ್‌ ಗೊಬ್ಬರ : ಮನೆಯ ಆವರಣದಲ್ಲಿ ನಾಲ್ಕು ಚಿಕ್ಕ ತೊಟ್ಟಿಗಳನ್ನು ಮಾಡಿಕೊಂಡು ಕಳೆದ 15 ವರ್ಷಗಳಿಂದ ಈ ಎರೆಹುಳು ಗೊಬ್ಬರ ತಯಾರಿಕೆಯನ್ನೇ ವೃತ್ತಿಯನ್ನಾಗಿಸಿಕೊಂಡ ಸೈದಾಬಿ, ಮೂರು ತಿಂಗಳಿಗೊಮ್ಮೆ ಈ ಗೊಬ್ಬರವನ್ನು ಮಾರಾಟ ಮಾಡುತ್ತಾರೆ. ಮೂರು ತಿಂಗಳಿಗೆ 35 ರಿಂದ 40 ಕ್ವಿಂಟಲ್‌ ಗೊಬ್ಬರ ಸಿಗುತ್ತದೆ. ಒಂದು ಕ್ವಿಂಟಾಲ್‌ನ್ನು ₹700ಗೆ ಮಾರಾಟ ಮಾಡಲಾಗುತ್ತದೆ. ಜೊತೆಗೆ ಎರೆಹುಳುಗಳನ್ನು ಕೆ.ಜಿಗೆ ₹400ರಂತೆ ಮಾರಾಟ ಮಾಡುವ ಮೂಲಕ ಕೈತುಂಬಾ ಆದಾಯ ಗಳಿಸುತ್ತಿದ್ದಾರೆ.

ಹಲವು ಪ್ರಶಸ್ತಿಗೆ ಭಾಜನರಾದ ಸೈದಾಬಿ : ವಯಸ್ಸು 65 ಆದರೂ, ಕೃಷಿ ಬಗ್ಗೆ ಅವರಿಗಿರುವ ಉತ್ಸಾಹ, ಸ್ವಾವಲಂಬಿ ಜೀವನವನ್ನು ಕಂಡು ಕೃಷಿ ಇಲಾಖೆಯು ಕೃಷಿ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಜೊತೆಗೆ ಹಲವು ಸಂಘಟನೆಗಳು ಇವರ ಕಾರ್ಯವನ್ನು ಶ್ಲಾಘಿಸಿ ಸನ್ಮಾನಿಸಿ ಗೌರವಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT