ಯಲಬುರ್ಗಾ: ನೂತನ ಗುರುಭವನ ನಿರೀಕ್ಷೆ

ಯಲಬುರ್ಗಾ: ಇಲ್ಲಿನ ಶಿಕ್ಷಕರ ಪತ್ತಿನ ಸಹಕಾರ ಸಂಘದ ಕಚೇರಿ ಬಳಿ ಇರುವ ಗುರುಭವನ 43 ವರ್ಷಗಳಷ್ಟು ಹಳೆಯದು. ಆರ್ಥಿಕ ನೆರವಿನಿಂದ ಆಗಾಗ ಸುಣ್ಣ–ಬಣ್ಣ ಕಂಡಿದೆ. ಆದರೆ, ಮೂಲಸೌಕರ್ಯ ಕೊರತೆ ಎದುರಿಸುತ್ತಿದೆ.
ಗುರುಭವನ ಸಮಿತಿ ಅಧ್ಯಕ್ಷರೂ ಹಾಗೂ ಸಹಾಯಕ ಶಿಕ್ಷಣಾಧಿಕಾರಿಯಾಗಿದ್ದ ಪಿ.ಎ.ರಾಮಕೃಷ್ಣ ಅವರ ಅಧ್ಯಕ್ಷತೆಯಲ್ಲಿ 1978ರಲ್ಲಿ ಶಿಕ್ಷಣ ಇಲಾಖೆಯ ಅಂದಿನ ಹೆಚ್ಚುವರಿ ನಿರ್ದೇಶಕರಾಗಿದ್ದ ಕೆ.ಮಲ್ಲಪ್ಪನವರು ಅಡಿಗಲ್ಲು ಕಾರ್ಯ ನೆರವೇರಿಸಿ ಗುರುಭವನ ನಿರ್ಮಾಣಕ್ಕೆ ಚಾಲನೆ ನೀಡಿದ್ದರು. ಕಟ್ಟಡವೂ ನಿರ್ಮಾಣವಾಯಿತು. ಈಗ ಶಿಕ್ಷಕರ ಸಂಖ್ಯೆ ಹೆಚ್ಚಿದ್ದು, ಗುರುಭವನ ತೀರಾ ಚಿಕ್ಕದಾಗಿದೆ. ಬಹುತೇಕ ಚಟುವಟಿಕೆಗಳು ಬೇರೆ ಕಟ್ಟಡದಲ್ಲಿಯೇ ನಡೆಯುತ್ತಿವೆ.
‘ಕ್ಷೇತ್ರ ಶಿಕ್ಷಣಾಧಿಕಾರಿ ಅಧ್ಯಕ್ಷತೆಯಲ್ಲಿ ರಚನೆಯಾಗಿರುವ ಗುರುಭವನ ಸಮಿತಿಯೇ ಆಗಾಗ ಸುಣ್ಣಬಣ್ಣ ಹಚ್ಚಿ ಕಟ್ಟಡವನ್ನು ರಕ್ಷಿಸುತ್ತಿದೆ. ಮಾಜಿ ಶಾಸಕ ಬಸವರಾಜ ರಾಯರಡ್ಡಿ ಉನ್ನತ ಶಿಕ್ಷಣ ಸಚಿವರಾಗಿದ್ದ ವೇಳೆ ಶಿಕ್ಷಕರ ಸಂಘದ ಮನವಿಗೆ ಸ್ಪಂದಿಸಿ ಆಗಿನ ಶಿಕ್ಷಣ ಸಚಿವ ತನ್ವಿರ್ ಸೇಠ್ ಅವರಿಗೆ ಪತ್ರ ಬರೆದಿದ್ದರು. ಅವರು ₹1 ಕೋಟಿ ಅನುದಾನ ಮಂಜೂರಾತಿಗೆ ಒಪ್ಪಿಗೆ ಸೂಚಿಸಿದ್ದರು’ ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಸ್.ವಿ.ಧರಣಾ ಹೇಳುತ್ತಾರೆ.
2016-17ನೇ ಸಾಲಿನಲ್ಲಿ ₹1 ಕೋಟಿ ವೆಚ್ಚದಲ್ಲಿ ಗುರುಭವನ ನಿರ್ಮಾಣಕ್ಕೆ ಸಕಲ ಸಿದ್ಧತೆ ನಡೆಸಲಾಗಿತ್ತು. ಸರ್ಕಾರದ ಮಟ್ಟದಲ್ಲಿ ಪತ್ರವ್ಯವಹಾರ ನಡೆದಿದ್ದವು. ಆದರೆ, ಸೂಕ್ತ ನಿವೇಶನ ಸಿಗಲಿಲ್ಲ. ಈಗಿರುವ ಹಳೆ ಕಟ್ಟಡ ತೆರವುಗೊಳಿಸಿ ಅಲ್ಲೇ ಗುರುಭವನ ನಿರ್ಮಿಸುವ ಯೋಜನೆಯಿದೆ’ ಎಂದು ಯಲಬುರ್ಗಾದ ಗುರುಭವನ ಸಮಿತಿಯ ಕಾರ್ಯದರ್ಶಿ ಸಿದ್ಧಲಿಂಗಪ್ಪ ಶ್ಯಾಗೋಟಿ ಹೇಳುತ್ತಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.