ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವಕ ಸಾವು: ಟೋಲ್‌ಗೇಟ್‌ ಬಂದ್ ಮಾಡಿ ಪ್ರತಿಭಟನೆ

Last Updated 24 ಜನವರಿ 2022, 4:20 IST
ಅಕ್ಷರ ಗಾತ್ರ

ಕೊಪ್ಪಳ: ಚತುಷ್ಪಥ ರಾಷ್ಟ್ರೀಯ ಹೆದ್ದಾರಿ-150ರಲ್ಲಿ (ಹೊಸಪೇಟೆ -ಹುನಗುಂದ) ಶನಿವಾರ ಸಂಜೆ ರಸ್ತೆ ಅಪಘಾತದಲ್ಲಿ ಯುವಕ ಮೃತಪಟ್ಟ ಹಿನ್ನೆಲೆಯಲ್ಲಿ ಸಿಟ್ಟಿಗೆದ್ದ ಗ್ರಾಮಸ್ಥರು ಭಾನುವಾರ ಟೋಲ್ ಬಂದ್ ಮಾಡಿ, ಪ್ರತಿಭಟನೆ ನಡೆಸಿದರು.

ಶಹಾಪುರ ಗ್ರಾಮದ ಬೋಜಪ್ಪ ಭೀಮಪ್ಪ ಕಂಬಳಿ (26) ಮೃತರು. ‘ಹೆದ್ದಾರಿ ಪ್ರಾಧಿಕಾರವು ಅವೈಜ್ಞಾನಿಕ ರೀತಿಯಲ್ಲಿ ಹೆದ್ದಾರಿ ನಿರ್ಮಿಸಿದ್ದು, ಒಂದು ತಿಂಗಳಲ್ಲಿ ಮೂವರು ಯುವಕರು ಮೃತಪಟ್ಟಿದ್ದಾರೆ. ಹಲವರು ಗಾಯಗೊಂಡಿದ್ದಾರೆ’ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

‘ಯುವಕರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು. ವಾರದೊಳಗೆ ಅಪೂರ್ಣ ಕಾಮಗಾರಿ ಪೂರ್ಣಗೊಳಿಸಬೇಕು’ ಎಂದು ಪ್ರತಿಭಟನಾಕಾರರು ಭೋಜಪ್ಪನವರ ಶವವನ್ನು ಹೆದ್ದಾರಿ ಮೇಲೆ ಇಟ್ಟು ಪ್ರತಿಭಟಿಸಲು ಮುಂದಾದರು. ಅವರನ್ನು ಪೊಲೀಸರು ಸಮಾಧಾನಪಡಿಸಿದರು.

ಹಿಟ್ನಾಳ ಮತ್ತು ಶಹಾಪುರ ಗ್ರಾಮದ ಎರಡು ಟೋಲ್‌ ಗೇಟ್‌ಗಳಲ್ಲಿ ಸುಮಾರು 7 ರಿಂದ 8 ಗಂಟೆ ವಾಹನಗಳು ಶುಲ್ಕ ರಹಿತವಾಗಿ ಸಂಚರಿಸಿದವು. ಟೋಲ್‌ ಗೇಟ್‌ ಸಿಬ್ಬಂದಿಯನ್ನು ಗ್ರಾಮಸ್ಥರು ಸ್ಥಳದಿಂದ ಹೊರಗಡೆ ಕಳುಹಿಸಿದರು.

ಮುನಿರಾಬಾದ್ ಪಿಎಸ್‌ಐ ಸುಪ್ರೀತ್ ಪಾಟೀಲ, ಗ್ರಾಮೀಣ ಸಿಪಿಐ ವಿಶ್ವನಾಥ ಹಿರೇಗೌಡರ್ ಸ್ಥಳಕ್ಕೆ ಬಂದು ಬಂದೋಬಸ್ತ್ ಮಾಡಲಾಗಿತ್ತು.

ಅಪಘಾತದಲ್ಲಿ ಮೃತಪಟ್ಟ ಮೂವರೂ ಯುವಕರ ಕುಟುಂಬಕ್ಕೆ ಉದ್ಯೋಗ ನೀಡುವುದರ ಜೊತೆಗೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ಗ್ರಾಮಸ್ಥರು ಪಟ್ಟು ಹಿಡಿದರು.

‘ಪ್ರತಿಭಟನೆಗೆ ಮಣಿದು ಸ್ಥಳಕ್ಕೆ ಬಂದ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಮೃತ ಯುವಕರ ಕುಟುಂಬಕ್ಕೆ ಉದ್ಯೋಗ ನೀಡುವ ಕುರಿತು ಲಿಖಿತ ಭರವಸೆ ನೀಡಿದರು’ ಎಂದು ಪ್ರತಿಭಟನಾಕಾರರಾದ ವೀರಣ್ಣ ಕೋಮಲಾಪುರ, ಬೆಳ್ಳೆಪ್ಪ ಬೂದಗುಂಪಿ ತಿಳಿಸಿದರು. ತಹಶೀಲ್ದಾರ ಅಮರೇಶ್ ಬಿರಾದಾರ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT