ಶನಿವಾರ, ಜನವರಿ 18, 2020
22 °C
ಮುಜರಾಯಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಭರವಸೆ

ಮುಜರಾಯಿಗೆ ಒಳಪಡದ ದೇವಸ್ಥಾನಗಳಿಗೂ ನೆರವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ಮುಜರಾಯಿ ವ್ಯಾಪ್ತಿಗೆ ಒಳಪಡದ ದೇವಸ್ಥಾನಗಳ ಜೀರ್ಣೋದ್ಧಾರಕ್ಕೂ ಸರ್ಕಾರ ನೆರವು ನೀಡಲಿದೆ ಎಂದು ಮುಜರಾಯಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಭರವಸೆ ನೀಡಿದರು.

ಊರುಗಡೂರಿನ ಗುಡ್ಡೇಮರಡಿ ದೇವಸ್ಥಾನದ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ತಾಲ್ಲೂಕು ದೇವಸ್ಥಾನ ಸಮಿತಿ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯದ ಹಲವು ದೇವಸ್ಥಾನಗಳು ಸರ್ಕಾರದ ನೆರವಿಲ್ಲದೆ ನಡೆಯುತ್ತಿವೆ. ಇಂತಹ ದೇವಾಲಯಗಳಲ್ಲೂ ಸಮಾಜಮುಖಿ ಕೆಲಸಗಳು ಭಕ್ತರ ಸಹಕಾರದಲ್ಲೇ  ನಡೆಯುತ್ತಿವೆ. ಅವುಗಳ ಜೀರ್ಣೋದ್ಧಾರವೂ ಮುಖ್ಯ. ದೇವಸ್ಥಾನ ಸಮಿತಿಗಳು ಪ್ರಸ್ತಾವ ಸಲ್ಲಿಸಿದರೆ ನೆರವು ನೀಡಲು ಸಿದ್ದ ಎಂದರು.

ರಾಜ್ಯದ ಸುಮಾರು 110  ಮುಜರಾಯಿ ದೇವಸ್ಥಾನಗಳಲ್ಲಿ ಏ.26ರಂದು ಸಾಮೂಹಿಕ ವಿವಾಹ ನಡೆಸಲಾಗುತ್ತಿದೆ. ವಧು–ವರರಿಗೆ ₨ 40 ಸಾವಿರ ಮೌಲ್ಯದ ತಾಳಿ, ₨ 10 ಸಾವಿರ ಮೌಲ್ಯದ ಧಾರೆ ಸೀರೆ ಸೇರಿ ಪ್ರತಿ ದಂಪತಿಗೆ ₨ 55 ಸಾವಿರ ವೆಚ್ಚ ಮಾಡಲಾಗುವುದು. ದೇವಸ್ಥಾನ ಸಮಿತಿಗಳು ಜನರಲ್ಲಿ ಜಾಗೃತಿ ಮೂಡಿಸಬೇಕು. ಸಾಮೂಹಿಕ ಮದುವೆಗೆ ಸಹಕರಿಸಬೇಕು ಎಂದು ಕೋರಿದರು.

ಸಾರ್ವಜನಿಕರ ಹಣ ಸಾಮಾಜಿಕವಾಗಿ ವಿನಿಯೋಗಿಸಲಾಗುತ್ತಿದೆ. ಸಾಮೂಹಿಕ ಮದುವೆಗಳು ಬಡವರಿಗೆ ವರದಾನ. ರಾಜ್ಯ ಸರ್ಕಾರದ ಇಂತಹ ಸಮಾಜಮುಖಿ ಕಾರ್ಯಕ್ಕೆ ಎಲ್ಲ ಶಾಸಕರೂ ಸಹಕಾರ ನೀಡಬೇಕು. ರಾಜ್ಯದಲ್ಲಿ ಸುಮಾರು 35 ಸಾವಿರ ದೇವಸ್ಥಾನಗಳಿವೆ. ಆರ್ಥಿಕ ವರಮಾನದ ಮಾನದಂಡದಲ್ಲಿ ಇವುಗಳ ವಿಂಗಡಣೆ ಮಾಡಲಾಗಿದೆ. ದೇವಸ್ಥಾನಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗಿದೆ ಎಂದರು.

ಶಾಸಕ ಕೆ.ಬಿ.ಅಶೋಕ್ ನಾಯ್ಕ, ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಬಿ.ಭಾನುಪ್ರಕಾಶ್, ಪಾಲಿಕೆ ಉಪ ಮೇಯರ್ ಎಸ್.ಎನ್.ಚನ್ನಬಸಪ್ಪ, ಜಿಲ್ಲಾ ಪಂಚಾಯಿತಿ ಸಮಸ್ಯೆ ಹೇಮಾವತಿ, ಶಿವನಂಜಪ್ಪ, ವಿರೂಪಾಕ್ಷಪ್ಪ ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು