ಸೋಮವಾರ, ಮಾರ್ಚ್ 8, 2021
22 °C
ಮದ್ಯ ಖರೀದಿ ಜೋರು; ವಾಹನ ಸಂಚಾರ ಹೆಚ್ಚಳ

ವಿಜಯಪುರ | ಲಾಕ್‌ಡೌನ್‌ ವಿನಾಯ್ತಿ; ಗರಿಗೆದರಿದ ಜನಜೀವನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಕೋವಿಡ್‌–19 ದೃಢಪಟ್ಟಿರುವ ಕಂಟೈನ್ಮೆಂಟ್‌ ಪ್ರದೇಶಗಳನ್ನು ಹೊರತು ಪಡಿಸಿ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಲಾಕ್‌ಡೌನ್‌ನಿಂದ ಸೋಮವಾರ ಒಂದಷ್ಟು ವಿನಾಯ್ತಿ ಸಿಕ್ಕಿರುವುದರಿಂದ ಜನಜೀವನ ಗರಿಗೆದರಿರುವ ದೃಶ್ಯ ಕಂಡುಬಂದಿತು.

ಒಂದೂವರೆ ತಿಂಗಳಿಂದ ಜನ, ವಾಹನಗಳಿಲ್ಲದೇ ಬಿಕೋ ಎನ್ನುತ್ತಿದ್ದ ನಗರ ಸೇರಿದಂತೆ ಜಿಲ್ಲೆಯ ವಿವಿಧ ಪಟ್ಟಣ, ಗ್ರಾಮೀಣ ಪ್ರದೇಶಗಳ ಬಹುತೇಕ ರಸ್ತೆಗಳಲ್ಲಿ ಬೈಕು, ಕಾರುಗಳ ಸಂಚಾರ ಕಂಡುಬಂದಿತು. ಸಣ್ಣಪುಟ್ಟ ಅಂಗಡಿಗಳು ಬಾಗಿಲು ತೆರೆದು, ಸ್ವಚ್ಛಗೊಳಿಸಿದರು. ಜನರು ವ್ಯಾಪಾರ, ವಹಿವಾಟು ನಡೆಸಿದರು.

ಜನರು ಮುಖಕ್ಕೆ ಮಾಸ್ಕ್‌ ಧರಿಸಿ, ಪರಿಸ್ಪರ ಅಂತರ ಕಾಯ್ದುಕೊಂಡು ವ್ಯಾಪಾರ, ವಹಿವಾಟಿನಲ್ಲಿ ತೊಡಗಿದ್ದರು. ಇನ್ನು ಕೆಲವೆಡೆ ಇದಾವುದರ ಪರಿವಿಲ್ಲದಂತೆ ಜನರು ತಮ್ಮ, ತಮ್ಮ ಕೆಲಸಗಳಲ್ಲಿ ನಿರತವಾಗಿದ್ದರು.

ಅಡೆತಡೆ ತೆರವು

ಕೊರೊನಾ ಭಯದಿಂದಾಗಿ ಸ್ವಯಂ ಪ್ರೇರಿತವಾಗಿ ಜನರು ತಮ್ಮ ಬಡಾವಣೆ, ಕಾಲೊನಿ, ಓಣಿ, ಕೇರಿಗಳನ್ನು ಸಂಪರ್ಕಿಸುವ ಮುಖ್ಯ ರಸ್ತೆಗಳಿಗೆ ಹಾಕಿದ್ದ ಕಲ್ಲು, ಮುಳ್ಳಿನ ಕಂಠಿಗಳನ್ನು ಸೋಮವಾರ ತೆರವುಗೊಳಿಸಿ, ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಅಲ್ಲದೇ, ಪ್ರಮುಖ ರಸ್ತೆಗಳಲ್ಲಿ ಅಳವಡಿಸಿದ್ದ ಬ್ಯಾರಿಕೇಡ್‌ಗಳನ್ನು ಪೊಲೀಸರು ತೆರವುಗೊಳಿಸಿದ್ದರಿಂದ ಜನ, ವಾಹನಗಳ ಸಂಚಾರ ಸುಗುಮವಾಗಿತ್ತು.

ಸಾಲುಗಟ್ಟಿ ನಿಂತ ಜನ

ನಗರ ಸೇರಿದಂತೆ ಜಿಲ್ಲೆಯಾದ್ಯಂತ ಮದ್ಯ ಖರೀದಿ ಜೋರಾಗಿತ್ತು. ಅಂಗಡಿಗಳ ಮುಂದೆ ಜನರು ಸರದಿಯಲ್ಲಿ ನಿಂತು ಖರೀದಿಸುತ್ತಿದ್ದ ದೃಶ್ಯ ಕಂಡುಬಂದಿತು.

ಕಂಟೈನ್ಮೆಂಟ್‌ ವಲಯ ಹೊರತು ಪಡಿಸಿ ಜಿಲ್ಲೆಯಲ್ಲಿ 90 ವೈನ್‌ ಶಾಪ್‌, 40 ಎಂಎಸ್‌ಐಎಲ್‌ ಅಂಗಡಿಗಳಲ್ಲಿ ಮಾರಾಟಕ್ಕೆ ಅವಕಾಶ ನೀಡಲಾಗಿದೆ ಎಂದು ಜಿಲ್ಲಾ ಅಬಕಾರಿ ಇಲಾಖೆ ಡಿಸಿ ರವಿಶಂಕರ ಮಾಹಿತಿ ನೀಡಿದರು.

ಮದ್ಯದ ಅಂಗಡಿಗಳ ಎದುರು ಗ್ರಾಹಕರ ನಡುವೆ ಅಂತರ ಕಾಯ್ದುಕೊಳ್ಳಲು ಅನುವಾಗುವಂತೆ ಮಾರ್ಕಿಂಗ್‌ ಮಾಡುವ ಜೊತೆಗೆ ಬ್ಯಾರಿಕೇಡ್‌ ಅಳವಡಿಸಲಾಗಿದೆ. ಪ್ರತಿಯೊಬ್ಬರೂ ಮಾಸ್ಕ್‌ ಧರಿಸುವುದು ಕಡ್ಡಾಯ ಮಾಡಲಾಗಿದೆ. ಬೆಳಿಗ್ಗೆ 9ರಿಂದ ಸಂಜೆ 7ರ ವರೆಗೆ ಮಾತ್ರ ವ್ಯಾಪಾರಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದರು.

ಮುಂಜಾಗೃತ ಕ್ರಮವಾಗಿ ವೈನ್‌ ಶಾಪ್‌ ಹಾಗೂ ಎಂಎಸ್‌ಐಎಲ್‌ ಅಂಗಡಿಗಳ ಎದುರು ಪೊಲೀಸ್‌ ಭದ್ರತೆ ಒದಗಿಸಲಾಗಿದೆ ಎಂದು ತಿಳಿಸಿದರು.

ಪಾಸ್‌ಗೆ ಅಲೆದಾಟ

ಹೊರ ಜಿಲ್ಲೆ, ಹೊರ ರಾಜ್ಯಗಳಿಗೆ ತೆರಳಲು ಪಾಸ್‌ ಪಡೆಯುವುದಕ್ಕಾಗಿ ಕೂಲಿಕಾರ್ಮಿಕರು, ವಿದ್ಯಾರ್ಥಿಗಳು ಸೇರಿದಂತೆ ಅನೇಕರು ಜಿಲ್ಲಾಧಿಕಾರಿ, ತಹಶೀಲ್ದಾರ್‌ ಮತ್ತು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳ ಕಚೇರಿ ಎದುರು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬಂದರು.

ಕೋವಿಡ್‌: 47ಕ್ಕೆ ಏರಿಕೆ

ವಿಜಯಪುರ: ಜಿಲ್ಲೆಯಲ್ಲಿ ಸೋಮವಾರ ಮತ್ತೊಬ್ಬ ವ್ಯಕ್ತಿಯಲ್ಲಿ ಕೋವಿಡ್‌–19 ದೃಢಪಟ್ಟಿದೆ. ಪಿ228 ಸಂಪರ್ಕದಿಂದ 62 ವರ್ಷ ವಯಸ್ಸಿನ  ಮಹಿಳೆಗೆ ಸೋಂಕು ತಗುಲಿದೆ. ಈ ಮೂಲಕಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 47ಕ್ಕೆ ಏರಿಕೆಯಗಿದೆ.

ನಾಲ್ವರು ಗುಣಮುಖ

ಕೋವಿಡ್-19ನಿಂದ ಗುಣಮುಖರಾದ ನಾಲ್ವರು ರೋಗಿಗಳು ಸೋಮವಾರ ಜಿಲ್ಲಾಸ್ಪತ್ರೆಯಿಂದ ಬಿಡುಗಡೆಯಾದರು.

10 ವರ್ಷ ವಯಸ್ಸಿನ ಬಾಲಕ (ಪಿ404) ಸೇರಿದಂತೆ 25 ವರ್ಷ ವಯಸ್ಸಿನ ಯುವತಿ (ಪಿ400), 47 ವರ್ಷ(ಪಿ403 ) ಮತ್ತು  34 ವರ್ಷ (ಪಿ405) ವಯಸ್ಸಿನ ಮಹಿಳೆಯರಿಬ್ಬರು ಸೇರಿದಂತೆ ನಾಲ್ವರು ಸಂಪೂರ್ಣ ಗುಣಮುಖರಾಗಿ ಮನೆಗೆ ತೆರಳಿದರು.

ಆಸ್ಪತ್ರೆಯಿಂದ ಬಿಡುಗಡೆಯಾದ ರೋಗಿಗಳನ್ನು ವೈದ್ಯ ಸಿಬ್ಬಂದಿ ಚಪ್ಪಾಳೆ ತಟ್ಟಿ, ಹೂವು, ಡ್ರೈಪ್ರೂಟ್ಸ್‌ ನೀಡಿ ಸ್ವಾಗತಿಸಿ, ಮನೆಗೆ ಬೀಳ್ಕೊಟ್ಟರು.

19 ಜನ ಮನೆಗೆ

ಜಿಲ್ಲೆಯ ಈವರೆಗಿನ ಕಂಡುಬಂದಿರುವ ಒಟ್ಟು 47 ಪಾಸಿಟಿವ್ ಪ್ರಕರಣಗಳಲ್ಲಿ ಇಬ್ಬರು ಮೃತಪಟ್ಟಿದ್ದು, 19 ಜನ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಇನ್ನುಳಿದ 26 ರೋಗಿಗಳ ಆರೋಗ್ಯ ಸ್ಥಿರವಾಗಿದ್ದು, ಪರಿಣಾಮಕಾರಿ ಚಿಕಿತ್ಸೆ ಕೈಗೊಳ್ಳಲಾಗಿದೆ ಎಂದು  ಜಿಲ್ಲಾಸ್ಪತ್ರೆ ಸರ್ಜನ್ ಎಸ್.ಎ ಕಟ್ಟಿ ತಿಳಿಸಿದ್ದಾರೆ.

ಡಾ.ಲಕ್ಕಣ್ಣವರ, ಡಾ.ಬಿರಾದಾರ, ಡಾ.ಇಂಗಳೆ, ಡಾ.ಗುಂಡಪ್ಪ, ರವಿ ಕಿತ್ತೂರ, ಅಜಿತ್ ಕೋಟ್ನಿಸ್, ಡಾ.ಶೈಲಶ್ರೀ, ಬಸವರಾಜ ಕಟ್ಟಿಮನಿ, ನಸೀಮಾಬಾನು ಮುಜಾವರ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು