ಗುರುವಾರ , ಅಕ್ಟೋಬರ್ 29, 2020
27 °C
ಮಳವಳ್ಳಿ; ಅವೈಜ್ಞಾನಿಕ ಕಾಮಗಾರಿ, ಕಿತ್ತುಹೋದ ನಲ್ಲಿಗಳು, ಬಿದ್ದು ಚೆಲ್ಲಾಡುತ್ತಿರುವ ಪೈಪ್‌ಗಳು

ನೆಪಕ್ಕಷ್ಟೇ 24X7 ನೀರಿನ ಯೋಜನೆ ಜಾರಿ

ಟಿ.ಕೆ.ಲಿಂಗರಾಜು Updated:

ಅಕ್ಷರ ಗಾತ್ರ : | |

Prajavani

ಮಳವಳ್ಳಿ: ಪುರಸಭೆ ವ್ಯಾಪ್ತಿಯಲ್ಲಿ ನಡೆಯುತ್ತಿರುವ 24X7 ಕುಡಿಯುವ ನೀರಿನ ಕಾಮಗಾರಿ ಅವೈಜ್ಞಾನಿಕ ರೀತಿಯಲ್ಲಿ ಅನುಷ್ಠಾನ ಮಾಡಲಾಗಿದೆ. ಕಾಮಗಾರಿ ಗುಣಮಟ್ಟ ಕಳಪೆಯಾಗಿದ್ದು ಯೋಜನೆ ಪೂರ್ಣಗೊಳ್ಳುವ ಮುನ್ನವೇ ಪೈಪ್‌ ಮೇಲೆದ್ದು ಬಂದಿವೆ, ನಲ್ಲಿಗಳು ಕಿತ್ತು ಹೋಗಿವೆ.

ಪಟ್ಟಣದಲ್ಲಿ ದಿನದಿಂದ ದಿನಕ್ಕೆ ಜನಸಂಖ್ಯೆ ಬೆಳೆಯುತ್ತಲೇ ಇದೆ. 2011ರ ಜನಗಣತಿ ಪ್ರಕಾರ 37,527 ಜನಸಂಖ್ಯೆ ಇದ್ದು, 2014-15ನೇ ಸಾಲಿನಲ್ಲಿ ಪಟ್ಟಣದಲ್ಲಿದ್ದ ಕುಡಿಯುವ ನೀರಿನ ಸಮಸ್ಯೆ ನೀಗಿಸಲು 24X7 ಶುದ್ಧ ಕುಡಿಯುವ ನೀರಿನ ಯೋಜನೆಗೆ ಮಂಜೂರಾತಿ ಪಡೆಯಲಾಗಿತ್ತು.  ₹ 70.20 ಕೋಟಿ ವೆಚ್ಚದಲ್ಲಿ ಪಟ್ಟಣಕ್ಕೆ 2ನೇ ಹಂತದ ನೀರು ಸರಬರಾಜು ಯೋಜನೆಗೆ ಆಡಳಿತ್ಮಾಕ ಮಂಜೂರಾತಿ ದೊರೆತಿತ್ತು.

ನೀರಿನ ಸರಬರಾಜಿಗಾಗಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ನಿಗಮವು 2017ರಲ್ಲಿ ಬೆಂಗಳೂರು ಮೂಲದ ಸುಭಾಷ್‌ ಸೇಲ್ಸ್ ಕಂಪನಿಗೆ ಟೆಂಡರ್ ಮೂಲಕ ಯೋಜನೆ ಅನುಷ್ಠಾನ ಜವಾಬ್ದಾರಿ ನೀಡಲಾಗಿತ್ತು.

ಕಾಮಗಾರಿಯಲ್ಲಿ 1 ಓವರ್‌ ಹೆಡ್‌ ಟ್ಯಾಂಕ್‌ ನಿರ್ಮಾಣ, 5 ಕಿ.ಮೀ ನೀರಿನ ಪೈಪ್ ಅಳವಡಿಸುವುದೂ ಸೇರಿತ್ತು. ಕಾಮಗಾರಿಯನ್ನು ಸಮರ್ಪಕವಾಗಿ ನಿರ್ವಹಣೆ ಮಾಡದ ಗುತ್ತಿಗೆದಾರರು ಈಗಾಗಲೇ ಕೆಲಸವನ್ನು ಪೂರ್ಣಗೊಳಿಸಿದ್ದೇವೆ, . ಇನ್ನೇನಿದ್ದರೂ ಬರೀ ನಿರ್ವಹಣೆ ಮಾಡಬೇಕು ಎಂದು ಎನ್ನುತ್ತಿದ್ದಾರೆ. ಆದರೆ ಕಾಮಗಾರಿ ಕಳೆಪೆಯಿಂದ ಕೂಡಿದ್ದು ವಿವಿಧೆಡೆ ಪೈಪ್‌ಗಳು ಒಡೆದು ಹೋಗಿವೆ, ನಲ್ಲಿಗಳು ಕಿತ್ತು ಬಂದಿವೆ. ಅವೈಜ್ಞಾನಿಕವಾಗಿ ಯೋಜನೆ ಅನುಷ್ಠಾನ ಮಾಡಲಾಗಿದ್ದು ಕೇವಲ ನೆಪಕ್ಕಷ್ಟೇ 24X7 ಯೋಜನೆ ಎನ್ನುತ್ತಿದ್ದಾರೆ ಎಂದು ಜನರು ಆರೋಪಿಸುತ್ತಾರೆ.

ನಲ್ಲಿಗಳ ಜೋಡಣೆಯಿಂದ ಸಮರ್ಪಕ ನೀರು ಪೂರೈಸಲು ಇನ್ನೂ ಸಾಧ್ಯವಾಗಿಲ್ಲ.  ಕಾಮಗಾರಿಯು ಕಳಪೆಯಿಂದ ಕೂಡಿದೆ ಎಂಬ ಸಾರ್ವಜನಿಕರು ಆರೋಪ ಮಾಡಿದ ಕಾರಣ ಎರಡು ತಿಂಗಳ ಹಿಂದೆ ಪಟ್ಟಣದ ಪುರಸಭೆಯ 23 ಸದಸ್ಯರು ತಾತ್ಕಾಲಿಕವಾಗಿ ಯೋಜನೆಯನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿ ಮಂಡ್ಯ ಉಪವಿಭಾಗಾಧಿಕಾರಿ ಮತ್ತು ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕಾರ್ಯಪಾಲಕ ಎಂಜಿನಿಯರ್‌ಗೆ ಮನವಿ ಸಲ್ಲಿಸಿದರು.

ಬಹುತೇಕ ಬಡಾವಣೆಗಳಲ್ಲಿ ಹಲವೆಡೆ ಕಾಮಗಾರಿಗೆ ಪೈಪ್ ಲೈನ್ ಅಳವಡಿಸದಿರುವುದರಿಂದ ಕುಡಿಯುವ ನೀರಿನ ಸಮಸ್ಯೆ ನೀಗಿಲ್ಲ. 1, 6, 16, 18 ಸೇರಿದಂತೆ ಕೆಲವು ವಾರ್ಡ್ ಗಳಲ್ಲಿ ಹಾಕಿರುವ ಕೂಳವೆ ನಲ್ಲಿಗಳಲ್ಲಿ ಸರಿಯಾಗಿ ನೀರು ಬರುವುದಿಲ್ಲ. ಕೆಲವು ಬಡಾವಣೆಗಳಲ್ಲಿ ನೀರು ಬಂದರೂ 15 ನಿಮಿಷದಲ್ಲಿ ನಿಂತುಹೋಗುತ್ತದೆ. ಕೆಲವೆಡೆ ಅಳವಡಿಸಿರುವ ಹೊಸ ನಲ್ಲಿಯಲ್ಲಿ ನೀರು ಬರದೆ ಹಳೇ ಪೈಪ್‌ನಲ್ಲಿ ಬರುವ ನೀರನ್ನೇ ಬಳಸುವ ಸ್ಥಿತಿ ನಿರ್ಮಾಣವಾಗಿದೆ.

ಐದಾರು ಮನೆಗಳಿಗೆ ಒಂದೇ ಸಾಲಿನಲ್ಲಿ ನಲ್ಲಿ ಕಲ್ಪಿಸಿದ್ದು, ಅಲ್ಲಿ ಬಿಂದಿಗೆ ಇಡಲು ಸಾಧ್ಯವಿಲ್ಲ‌ದ ಸ್ಥಿತಿ ಇದೆ. ₹ 70 ಕೋಟಿ ವೆಚ್ಚದ ಹೊಸ ಯೋಜನೆದಿಂದ ಪಟ್ಟಣದಲ್ಲಿನ ಕುಡಿಯುವ ನೀರಿನ ಸಮಸ್ಯೆಗೆ ಯಾವುದೇ ಪ್ರಯೋಜನವಿಲ್ಲದೇ ಸಾರ್ವಜನಿಕರ ಹಣ ವ್ಯರ್ಥವಾಗುತ್ತಿದೆ. ಕೆಲ ಬಡಾವಣೆಗಳಲ್ಲಿ ಮಧ್ಯರಾತ್ರಿಯಲ್ಲಿ ನೀರು ಬರುತ್ತದೆ. ಅಲ್ಲಿನ ನಿವಾಸಿಗಳು ನೀರಿಗಾಗಿ ರಾತ್ರಿಯೆಲ್ಲಾ ಕಾಯುವ ಸ್ಥಿತಿ ನಿರ್ಮಾಣವಾಗಿದ್ದು, ನೆಪಮಾತ್ರಕ್ಕೆ ದಿನದ 24 ಗಂಟೆ ನೀರು ಎನ್ನುವ ಯೋಜನೆ ಇದಾಗಿದೆ ಎಂದು ಜನ ಆರೋಪಿಸುತ್ತಾರೆ.

‘24X7 ಕುಡಿಯುವ ನೀರು ನೀಡುವುದಾಗಿ ಹೇಳುವ ಯೋಜನೆ ನೆಪ ಮಾತ್ರಕ್ಕೆ ಜಾರಿಗೊಳಿಸಲಾಗಿದೆ. ದಿನದಲ್ಲಿ ಅರ್ಧ ಗಂಟೆಯೂ ನೀರು ಬರುವುದಿಲ್ಲ. ಪೈಪ್ ಲೈನ್ ಕಾಮಗಾರಿಗಾಗಿ ಅಗೆದ ರಸ್ತೆಯನ್ನು ಮತ್ತೆ ಸರಿಪಡಿಸದೇ ನಿರ್ಲಕ್ಷ್ಯ ತೋರಿಸಿದ್ದಾರೆ. ರಸ್ತೆಗಳು ಗುಂಡಿ ಬಿಂದಿದ್ದು ಜನರು ಓಡಾಡಲು ಕಷ್ಟವಾಗಿದೆ. ನಿತ್ಯ ಬೈಕ್‌ ಸವಾರರು ಗಾಯಗೊಳ್ಳುತ್ತಿದ್ದಾರೆ. ಭೂಮಿ ಅಗೆದ ನಂತರ ಅದನ್ನು ಮುಚ್ಚುವ ಜವಾಬ್ದಾರಿಯೂ ಅವರದ್ದೇ ಆಗಿತ್ತು. ಆದರೆ ಅಧಿಕಾರಿಗಲ ನಿರ್ಲಕ್ಷ್ಯದಿಂದಾಗಿ ಸಾರ್ವಜನಿಕರಿಗೆ ಕಿರಿಕಿರಿ ಉಂಟಾಗುತ್ತಿದೆ. ಕೆಲಸವನ್ನು ಸಂಪೂರ್ಣ ಮಾಡದೇ ಹೇಗೆ ಪುರಸಭೆಗೆ ಹಸ್ತಾಂತರ ಮಾಡುತ್ತಾರೆ’ ಎಂದು 17 ನೇ ವಾರ್ಡಿನ ನಿವಾಸಿ ನಾಗರಾಜು ಪ್ರಶ್ನಿಸಿದರು.

‘ಪಟ್ಟಣದ 8 ಸಾವಿರ ಮನೆಗಳಿಗೆ 24 ಗಂಟೆಯೂ ಕುಡಿಯುವ ಪೂರೈಕೆ ಮಾಡುವ ಕಾಮಗಾರಿ ಗಾಗಲೇ ಪೂರ್ಣಗೊಂಡಿದ್ದು, ಕೆಲ ಸಣ್ಣ ಪುಟ್ಟ ಸಮಸ್ಯೆಗಳಿದ್ದು, ಅದನ್ನು ಸರಿಪಡಿಸುವ ಕೆಲಸ ನಡೆಯುತ್ತಿದೆ’ ಎಂದು ಜಲಮಂಡಳಿ ಸಹಾಯಕ ಎಂಜಿನಿಯರ್‌ ರವೀಂದ್ರ ಹೇಳುತ್ತಾರೆ.

‘ಯೋಜನೆಯಲ್ಲಿ 8,200 ಮನೆಗಳಿಗೆ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ. ಕೆಲ ಬಡಾವಣೆಗಳಲ್ಲಿ ಹೊಸದಾಗಿ ಮನೆ ನಿರ್ಮಾಣ ಮಾಡಿರುವುದರಿಂದ ಸಂಪರ್ಕ ಕಲ್ಪಿಸಲು ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ ವ್ಯವಸ್ಥೆ ಮಾಡಲಾಗುವುದು. ಕೆಲ ಲೋಪದೋಷಗಳನ್ನು ಸರಿಪಡಿಸಲಾಗುವುದು’ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಗುರುರಾಜ್ ಹೇಳೀದರು.

************

ಕಳೆದ ವರ್ಷವೇ ಮುಗಿಯಬೇಕಾಗಿತ್ತು

‘ಅವೈಜ್ಞಾನಿಕ, ಕಳಪೆ ಕಾಮಗಾರಿ ಬಗ್ಗೆ ಪುರಸಭೆ ಮುಖ್ಯಾಧಿಕಾರಿ ಸೇರಿ ಹಲವು ಅಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಸುಮಾರು 8 ಸಾವಿರ ಮನೆಗಳಿಗೆ ನೀರಿನ ಸಂಪರ್ಕ ನೀಡಲು 2019 ಡಿಸೆಂಬರ್‌ನೊಳಗೆ ಯೋಜನೆ ಪೂರ್ಣಗೊಳಿಸಬೇಕಾಗಿತ್ತು. ಆದರೆ ಅವಧಿ ಮುಕ್ತಾಯಗೊಂಡ ನಂತರ ಮತ್ತೆ ಆರು ತಿಂಗಳು ವಿಸ್ತರಿಸಲಾಯಿತು. ಆ ಅವಧಿಯೂ ಮುಕ್ತಾಯವಾದರೂ ಕಾಮಗಾರಿ ಪೂರ್ಣಗೊಂಡಿಲ್ಲ’ ಎಂದು ಪುರಸಭೆ ಮಾಜಿ ಅಧ್ಯಕ್ಷ ಗಂಗರಾಜೇಅರಸ್ ಆರೋಪಿಸಿದರು.

‘ಪಟ್ಟಣಕ್ಕೆ ನಿರಂತರ ಕುಡಿಯುವ ನೀರಿನ ಕಾಮಗಾರಿಯು ಅತ್ಯಂತ ಕಳಪೆ ಮಟ್ಟದಿಂದ ಕೂಡಿದ್ದು, ಇದನ್ನು ನಿರ್ವಹಣೆ ಮಾಡಬೇಕಾಗಿದ್ದ ಕರ್ನಾಟಕ ನಗರ ನೀರು ಸರಬರಾಜ ಮತ್ತು ಒಳಚರಂಡಿ ನಿಗಮದ ಅಧಿಕಾರಿಗಳ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ’ ಎಂದು ಅವರು ಹೇಳಿದರು.

******

ನಾನು ಶಾಸಕನಾಗಿ ಆಯ್ಕೆಯಾದ ನಂತರ ಯೋಜನೆ ಜಾರಿಯಲ್ಲಿದ್ದ ಕೆಲ ತೊಡಕುಗಳನ್ನು ನಿವಾರಿಸಿದ್ದೇನೆ. ಗುತ್ತಿಗೆದಾರರು ಒಂದು ವರ್ಷ ಹೆಚ್ಚುವರಿಯಾಗಿ ನಿರ್ವಹಣೆ ಮಾಡಿದ ನಂತರ ಪುರಸಭೆಗೆ ಹಸ್ತಾಂತರ ಮಾಡಲಾಗುವುದು

– ಡಾ.ಕೆ.ಅನ್ನದಾನಿ, ಶಾಸಕ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.