ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಬುಲ್‌ ಕಲಾಂ ಜಯಂತಿ ಶಿಕ್ಷಣ ದಿನಾಚರಣೆಯಾಗಲಿ

Last Updated 11 ನವೆಂಬರ್ 2020, 13:28 IST
ಅಕ್ಷರ ಗಾತ್ರ

ಮಂಡ್ಯ: ‘ಸ್ವಾತಂತ್ರ್ಯ ಹೋರಾಟಗಾರ, ರಾಷ್ಟ್ರೀಯ ನಾಯಕ, ಸ್ವತಂತ್ರ ಭಾರತದ ಪ್ರಥಮ ಶಿಕ್ಷಣ ಸಚಿವರಾಗಿದ್ದ ಮೌಲಾನಾ ಅಬುಲ್‌ ಕಲಾಂ ಆಜಾದ್ ಅವರ ಜನ್ಮದಿನಾಚರಣೆ ಶಿಕ್ಷಣ ದಿನವನ್ನಾಗಿ ಆಚರಿಸಬೇಕು’ ಎಂದು ನಿವೃತ್ತ ಪ್ರಾಂಶುಪಾಲ ಪ್ರೊ.ಬಿ.ಎಸ್. ಚಂದ್ರಶೇಖರನ್ ಹೇಳಿದರು.

ಕರ್ನಾಟಕ ಸಮಾಜವಾದಿ ವೇದಿಕೆ ಮತ್ತು ಮುಸ್ಲಿಂ ಒಕ್ಕೂಟ ಜಿಲ್ಲಾ ಘಟಕದ ವತಿಯಿಂದ ಬುಧವಾರ ನಗರದ ಗಾಂಧಿ ಭವನದಲ್ಲಿ ನಡೆದ ಮೌಲಾನ ಅಬುಲ್ ಕಲಾಂ ಆಜಾದ್ ಜನ್ಮದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ಶಿಕ್ಷಣ ಸಚಿವರಾಗಿದ್ದ ಸಂದರ್ಭದಲ್ಲಿ 1951 ರಲ್ಲಿ ಐಐಟಿ, 1953 ರಲ್ಲಿ ಯುಜಿಸಿ ಸೇರಿದಂತೆ ಹಲವಾರು ವಿಶ್ವವಿದ್ಯಾಲಯಗಳನ್ನು ಸ್ಥಾಪನೆ ಮಾಡುವ ಮೂಲಕ ಭವಿಷ್ಯ ಭಾರತದ ಶಿಕ್ಷಣಕ್ಕೆ ಭದ್ರಬುನಾದಿ ಹಾಕಿದ್ದಾರೆ. ಧರ್ಮ ಆಧಾರಿತ ದೇಶ ವಿಭಜನೆಗೆ ಅವರು ಎಂದೂ ಒಪ್ಪಿರಲಿಲ್ಲ. ದೇಶ ವಿಭಜನೆಗೆ ಸಂಬಂಧಿಸಿದಂತೆ ಜಿನ್ನಾ ಅವರ ಮಾತುಗಳನ್ನು ತೀವ್ರವಾಗಿ ಖಂಡಿಸಿದ್ದ ಅವರು ರಾಷ್ಟ್ರೀಯವಾದಿ ಆಗಿಯೇ ಇದ್ದರು. ಆದರೆ ಅವರ ಇತಿಹಾಸವನ್ನು ಮರೆಮಾಚುವ ಕೆಲಸ ಮಾಡುತ್ತಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಖಿಲಾಫತ್ ಚಳವಳಿಯ ನಾಯಕತ್ವ ವಹಿಸುವ ಮೂಲಕ ಗಾಂಧೀಜಿ ಅವರಿಗೆ ಹತ್ತಿರವಾಗಿದ್ದರು. ಅಲ್ಲದೆ ತಮ್ಮ 35ನೇ ವರ್ಷದಲ್ಲಿ ಕಾಂಗ್ರೆಸ್ ಅಧ್ಯಕ್ಷರಾಗಿ ಪಕ್ಷವನ್ನು ಮುನ್ನಡೆಸಿದ್ದರು. 1942ರಲ್ಲಿ ಕ್ವಿಟ್ ಇಂಡಿಯಾ ಚಳವಳಿ ನೇತೃತ್ವವಹಿಸಿ ಸೆರೆವಾಸ ಅನುಭವಿಸಿದ್ದರು. ಅವರ ಇತಿಹಾಸವನ್ನು ಯುವಜನರಿಗೆ ತಿಳಿಸುವ ಕೆಲಸ ಮಾಡಬೇಕು’ ಎಂದು ಸಲಹೆ ನೀಡಿದರು.

ಸಾಹಿತಿ ಜಿ.ಟಿ.ವೀರಪ್ಪ ಮಾತನಾಡಿ ‘ನೆಹರೂ ಜನ್ಮದಿನಾಚರಣೆಯನ್ನು ಮಕ್ಕಳ ದಿನಾಚರಣೆಯನ್ನಾಗಿ, ಆಜಾದ್ ಅವರ ಜನ್ಮದಿನಾಚರಣೆಯನ್ನು ಶಿಕ್ಷಣ ದಿನಾಚರಣೆಯನ್ನಾಗಿ ಆಚರಿಸಬೇಕು ಎಂಬ ನಿಯಮವಿದ್ದರೂ ಪೂರ್ವಗ್ರಹ ಭಾವನೆಗಳ ಕಾರಣದಿಂದ ಶಾಲಾ-ಕಾಲೇಜುಗಳಲ್ಲಿ ಆಚರಿಸುತ್ತಿಲ್ಲ. ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದರು ಎಂಬ ವಿಚಾರವನ್ನು ಹೊರತುಪಡಿಸಿದಂತೆ ಆಜಾದ್ ಅವರ ಬಗ್ಗೆ ಹೆಚ್ಚಿನ ಮಾಹಿತಿಗಳು ಸಿಗುವುದಿಲ್ಲ. ಅವರ ಬಗ್ಗೆ ಹೆಚ್ಚಿನ ಅಧ್ಯಯನಗಳು ನಡೆಬೇಕು’ ಎಂದರು.

‘ದೇಶದಲ್ಲಿ ಮುಸ್ಲಿಮರು ಅಬುಲ್‌ ಕಲಾಂ ಅವರ ಮಾತು, ಹಿಂದೂಗಳು ಗಾಂಧೀಜಿಯವರ ಮಾತುಗಳನ್ನು ಕೇಳಿದ್ದರೆ ದೇಶದ ಚಿತ್ರಣವೇ ಬೇರೆಯಾಗಿರುತ್ತಿತ್ತು. ಮಡಿವಂತಿಕೆ ಕುಟುಂಬದವರಾದ ಆಜಾದ್ ಎಂದಿಗೂ ಧಾರ್ಮಿಕ ಮತೀಯ ಭಾವನೆಗಳನ್ನು ಹೊಂದಿರಲಿಲ್ಲ. ರಾಷ್ಟ್ರೀಯ ಭಾವನೆಗಳ ಮೂಲಕ ಸಮಾಜದ ಏಕೀಕರಣಕ್ಕೆ ಮುಂದಾಗಿದ್ದರು’ ಎಂದರು.

ರೈತ ನಾಯಕ ಸುನಂದಾ ಜಯರಾಂ ಅಧ್ಯಕ್ಷತೆ ವಹಿಸಿದ್ದರು. ಪ್ರಾಧ್ಯಾಪಕ ಮುಫ್ತಿ ರಿಜ್ವಾನ್ ಅಹಮದ್ ಖಾಸ್ಮಿ, ರೈತ ಮುಖಂಡ ಶಂಭೂನಹಳ್ಳಿ ಸುರೇಶ್, ಕೆನರಾ ಬ್ಯಾಂಕ್ ನಿವೃತ್ತ ವ್ಯವಸ್ಥಾಪಕ ಎಚ್.ಕೆ ಚಂದ್ರಹಾಸ, ಗಾಯಕ ಹುರುಗಲವಾಡಿ ರಾಮಯ್ಯ, ಮುಸ್ಲಿಂ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ತಾಹೀರ್, ಸ್ಮಾರ್ಟ್ ಇಂಗ್ಲಿಷ್ ಅಕಾಡೆಮಿ ನಿರ್ದೇಶಕ ಸಲೀಂ ಅಹ್ಮದ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT