ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನಾಗಮಂಗಲ | ರೈತ ಸಂಪರ್ಕ ಕೇಂದ್ರ ಸದೃಢಕ್ಕೆ ಕ್ರಮ: ಚಲುವರಾಯಸ್ವಾಮಿ

ನಾಗಮಂಗಲದಲ್ಲಿ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಭರವಸೆ
Published 19 ಜೂನ್ 2024, 7:24 IST
Last Updated 19 ಜೂನ್ 2024, 7:24 IST
ಅಕ್ಷರ ಗಾತ್ರ

ನಾಗಮಂಗಲ: ‘ಬಿತ್ತನೆ ಬೀಜ, ರಸಗೊಬ್ಬರ, ಸರ್ಕಾರದ ಸಬ್ಸಿಡಿ, ರೈತರಿಗೆ ಮಾಹಿತಿ ನೀಡುವ ಜೊತೆಗೆ ಎಲ್ಲಾ ಸೌಲಭ್ಯ ಒಂದೇ ಕಡೆ ದೊರೆಯುವಂತೆ ಮಾಡಲು ರೈತ ಸಂಪರ್ಕ ಕೇಂದ್ರ ಸದೃಢಗೊಳಿಸಲು ಕ್ರಮವಹಿಸಲಾಗಿದೆ’ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.

ತಾಲ್ಲೂಕಿನ ಬೆಳ್ಳೂರು ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಮಂಗಳವಾರ ₹2 ಕೋಟಿ ವೆಚ್ಚದಲ್ಲಿ ನಿರ್ಮಿಸುತ್ತಿರುವ ಬೆಳ್ಳೂರು ರೈತ ಸಂಪರ್ಕ ಕೇಂದ್ರದ ಕಟ್ಟಡ ನಿರ್ಮಾಣ ಕಾಮಗಾರಿ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

‘ರೈತರ ಹಿತ ಸಂರಕ್ಷಣೆ ಸರ್ಕಾರದ ಮೊದಲ ಅದ್ಯತೆ. ರೈತರು ಸಮಗ್ರ ಬೇಸಾಯದ ಕುರಿತು ಹೆಚ್ಚಿನ ಗಮನ ನೀಡಬೇಕು. ಬೆಳೆ ವಿಮೆ ನೋಂದಣಿ ಮಾಡಿಸುವ ಮೂಲಕ ಅನಿರೀಕ್ಷಿತ ನಷ್ಟದಿಂದ ರಕ್ಷಣೆ ಪಡೆಯಬಹುದು’ ಎಂದರು.

‘ರೈತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಕೃಷಿ ಇಲಾಖೆಯಲ್ಲಿ 600 ಸಹಾಯಕ ಕೃಷಿ ಅಧಿಕಾರಿ ಮತ್ತು ಕೃಷಿ ಅಧಿಕಾರಿಗಳ ನೇಮಕಾತಿಗೆ ಸಂಬಂಧ ಕ್ರಮವಹಿಸಲಾಗಿದ್ದು, ಮುಂದಿನ ದಿನಗಳಲ್ಲಿ ಕರ್ನಾಟಕ‌ ಲೋಕಸೇವಾ ಆಯೋಗದಿಂದ ನೇಮಕಾತಿ ಪ್ರಕ್ರಿಯೆ ನಡೆಯಲಿದೆ. ಅಧಿಕಾರಿಗಳ ಮತ್ತು ಸಿಬ್ಬಂದಿ ನೇಮಕ ಮಾಡಿ ಸುಮಾರು 20 ವರ್ಷ ಜರುಗಿದ್ದು, ರೈತರಿಗೆ ತೊಂದರೆಯಾಗದಂತೆ ಸರ್ಕಾರ ಕ್ರಮವಹಿಸುತ್ತಿದೆ’ ಎಂದರು.

‘ರೈತರು ಮಳೆಯಾಗುವ ಪ್ರಮಾಣವನ್ನು ಆಧರಿಸಿ ಕಡಿಮೆ ಮತ್ತು ದೀರ್ಘಾವಧಿ ಬೆಳಗಳ ಕುರಿತು ಅಧಿಕಾರಿಗಳಿಂದ ಅಗತ್ಯ ಮಾಹಿತಿ ಪಡೆದುಕೊಂಡು ನಿರ್ಧಾರ ಮಾಡಬೇಕು. ಕೃಷಿಯನ್ನು ಲಾಭದಾಯಕವಾಗಿ ಮಾಡುವ ಬಗ್ಗೆ ರೈತ ಸಂಪರ್ಕ ಕೇಂದ್ರಗಳು ಅಗತ್ಯ ಸಲಹೆ ಮತ್ತು ಮಾರ್ಗದರ್ಶನ ನೀಡುವ ಕಾರ್ಯ ನಿರ್ವಹಿಸುತ್ತವೆ. ಮುಂದಿನ ದಿನಗಳಲ್ಲಿ ತಾಲ್ಲೂಕಿನ ಎಲ್ಲಾ ರೈತರಿಗೆ ಹೆಚ್ಚಿನ ಪ್ರಮಾಣದಲ್ಲಿ ಅಗತ್ಯ ಕೃಷಿ ಸಲಕರಣೆ ಪೂರೈಸಲು ಕ್ರಮವಹಿಸಲಾಗುವುದು’ ಎಂದು ಭರವಸೆ ನೀಡಿದರು.

ಕೃಷಿ ಇಲಾಖೆಯಿಂದ ಚುಂಚನಹಳ್ಳಿ ಗ್ರಾಮಪಂಚಾಯಿತಿಯ ಎಂಟು ಜನ ಫಲಾನುಭವಿಗಳಿಗೆ ಬೆಳ್ಳೂರಿನಲ್ಲಿ ನೂತನ ರೈತ ಸಂಪರ್ಕ ಕೇಂದ್ರಕ್ಕೆ ಗುದ್ದಲಿ ಪೂಜೆ ವೇಳೆ ರಸಗೊಬ್ಬರ, ಬಿತ್ತನೆ ಬೀಜ, ಕೀಟನಾಶಕಗಳು ಸೇರಿ ಹಲವು ಕೃಷಿ ಸಂಬಂಧಿತ ವಸ್ತುಗಳನ್ನು ಸಚಿವರು ವಿತರಣೆ ಮಾಡಿದರು.

ಕಾಮಗಾರಿ ನಡೆಸುವ ಇಲಾಖೆ ಅಧಿಕಾರಿಗಳಿಗೆ ಗುಣಮಟ್ಟದ ಕಾಮಗಾರಿ ಮಾಡುವಂತೆ ಸೂಚನೆಯನ್ನು ನೀಡಿದರು. ಅಲ್ಲದೇ ಸ್ಥಳಕ್ಕೆ ಬಂದಿದ್ದ ಜನರಿಂದ ಅಹವಾಲು ಸ್ವೀಕರಿಸಿದರು.

ಕಾರ್ಯಕ್ರಮದಲ್ಲಿ ಜಂಟಿ ಕೃಷಿ ನಿರ್ದೇಶಕ ವಿ.ಎಸ್.ಅಶೋಕ್, ಉಪ ಕೃಷಿ ನಿರ್ದೇಶಕಿ ಮಮತಾ, ತಹಶೀಲ್ದಾರ್ ನಯೀಂ ಉನ್ನೀಸಾ, ಸಹಾಯಕ ಕೃಷಿ ನಿರ್ದೇಶಕ ಆರ್.ಹರೀಶ್, ಕೆ.ಆರ್.ಐ.ಡಿ.ಎಲ್ ಎಂಜಿಯರ್ ಚೈತ್ರಾ, ಕೃಷಿ ಅಧಿಕಾರಿಗಳಾದ ಯುವರಾಜ್, ರೆಡ್ಡಿ ಶೇಖರ್, ಬೆಳ್ಳೂರು ಪ.ಪಂ ಮುಖ್ಯಾಧಿಕಾರಿ ಡಿ.ಲಕ್ಷ್ಮಣ್ ಕುಮಾರ್, ಮುಖಂಡರಾದ ಯಾಸೀನ್, ರಂಗೇಗೌಡ, ಹೊನ್ನೇನಹಳ್ಳಿ ಕೃಷ್ಣೇಗೌಡ, ಪಾಪಣ್ಣ ಸೇರಿದಂತೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಇದ್ದರು.

ನಾಗಮಂಗಲ ತಾಲ್ಲೂಕಿನ ಬೆಳ್ಳೂರು ಪ.ಪಂ ವ್ಯಾಪ್ತಿಯಲ್ಲಿ ನೂತನವಾಗಿ ನಿರ್ಮಾಣ ಮಾಡಲಾಗುತ್ತಿರುವ ರೈತ ಸಂಪರ್ಕ ಕೇಂದ್ರದ ನಿರ್ಮಾಣ ಕಾಮಗಾರಿಗೆ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಚಾಲನೆ ನೀಡಿದರು.
ನಾಗಮಂಗಲ ತಾಲ್ಲೂಕಿನ ಬೆಳ್ಳೂರು ಪ.ಪಂ ವ್ಯಾಪ್ತಿಯಲ್ಲಿ ನೂತನವಾಗಿ ನಿರ್ಮಾಣ ಮಾಡಲಾಗುತ್ತಿರುವ ರೈತ ಸಂಪರ್ಕ ಕೇಂದ್ರದ ನಿರ್ಮಾಣ ಕಾಮಗಾರಿಗೆ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಚಾಲನೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT