ಮಂಡ್ಯ: ಕಾವೇರಿ ಜಲಾನಯನ ಪ್ರದೇಶದಲ್ಲಿ ಈ ಬಾರಿ ಧಾರಾಕಾರ ಮಳೆಯಾದ ಕಾರಣ, ಶ್ರೀರಂಗಪಟ್ಟಣ ತಾಲ್ಲೂಕಿನ ಕೃಷ್ಣರಾಜಸಾಗರ ಜಲಾಶಯ ಭರ್ತಿಯಾಗಿದ್ದು (ಗರಿಷ್ಠ 124.80 ಅಡಿ), ನಾಲೆಗಳಿಗೆ ನೀರು ಬಿಡಲಾಗಿದೆ. ಇದರಿಂದ ಜಿಲ್ಲೆಯಲ್ಲಿ ಭತ್ತದ ಬಿತ್ತನೆ ಕಾರ್ಯ ಚುರುಕುಗೊಂಡಿದೆ.
ಕಳೆದ ವರ್ಷ ಮಳೆಯ ತೀವ್ರ ಕೊರತೆಯಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದರು. ಅಣೆಕಟ್ಟೆಯಲ್ಲಿ ನೀರಿನ ಪ್ರಮಾಣ ಕಡಿಮೆ ಇದ್ದ ಕಾರಣ ಬೇಸಿಗೆಯಲ್ಲಿ ಕೃಷಿ ಚಟುವಟಿಕೆಗೆ ನಾಲೆಗಳಿಗೆ ನೀರು ಹರಿಸಿರಲಿಲ್ಲ. ಇದರಿಂದ ‘ಬೇಸಿಗೆ ಬೆಳೆ’ ಬೆಳೆಯಲು ಸಾಧ್ಯವಾಗದೆ ರೈತರು ಸಮಸ್ಯೆ ಎದುರಿಸಿದ್ದರು.
ಜಿಲ್ಲೆಯಲ್ಲಿ ಈ ಬಾರಿ ಏಪ್ರಿಲ್ 1ರಿಂದ ಜುಲೈ ಅಂತ್ಯದವರೆಗೆ 262 ಮಿ.ಮೀ. ವಾಡಿಕೆ ಮಳೆಗೆ 387 ಮಿ.ಮೀ. ಮಳೆ ಸುರಿದಿದ್ದು, ಸರಾಸರಿ ಶೇ 47.5ರಷ್ಟು ಹೆಚ್ಚುವರಿ ಮಳೆಯಾಗಿದೆ. ಇದರಿಂದ ಜಲಾಶಯ, ಕೆರೆ, ನಾಲೆಗಳಿಗೆ ನೀರು ಬಂದಿದ್ದು, ರೈತರು ಸಂತಸದಿಂದ ಕೃಷಿ ಕಾರ್ಯದಲ್ಲಿ ತೊಡಗಿದ್ದಾರೆ.
ಈ ಬಾರಿ ಜಿಲ್ಲೆಯಲ್ಲಿ 57,700 ಹೆಕ್ಟೇರ್‌ನಲ್ಲಿ ಭತ್ತದ ಬಿತ್ತನೆ ಕಾರ್ಯದ ಗುರಿಯನ್ನು ಕೃಷಿ ಇಲಾಖೆ ಹೊಂದಿದೆ. ಈಗಾಗಲೇ 45 ಹೆಕ್ಟೇರ್‌ನಲ್ಲಿ ಬಿತ್ತನೆ ಕಾರ್ಯವಾಗಿದೆ. ಕೆಸರುಗದ್ದೆಗಳನ್ನು ಹದಗೊಳಿಸಿ, ಭತ್ತದ ಒಟ್ಲು ಬಿಡುವ ಕಾರ್ಯ ಭರದಿಂದ ಸಾಗಿದೆ. ಆಗಸ್ಟ್ ಎರಡನೇ ವಾರದಿಂದ ಭತ್ತದ ಪೈರು ನಾಟಿ ಮಾಡುವ ಕಾರ್ಯ ಆರಂಭವಾಗಲಿದೆ.
‘ಮಂಡ್ಯ ಜಿಲ್ಲೆಯಲ್ಲಿ 4 ಸಾವಿರ ಕ್ವಿಂಟಲ್ ಭತ್ತದ ಬಿತ್ತನೆ ಬೀಜವನ್ನು ಜಿಲ್ಲೆಯ ವಿವಿಧ ರೈತ ಸಂಪರ್ಕ ಕೇಂದ್ರಗಳು ಹಾಗೂ 78 ಮಾರಾಟ ಕೇಂದ್ರಗಳಲ್ಲಿ (ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು) ದಾಸ್ತಾನು ಮಾಡಲಾಗಿದೆ. ಸಹಾಯಧನದಲ್ಲಿ 481 ಕ್ವಿಂಟಲ್ ಭತ್ತದ ಬಿತ್ತನೆ ಬೀಜವನ್ನು ವಿತರಣೆ ಮಾಡಲಾಗಿದೆ’ ಎಂದು ಜಂಟಿ ಕೃಷಿ ನಿರ್ದೇಶಕ ಅಶೋಕ ವಿ.ಎಸ್. ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.
‘ಎಂ.ಟಿ.ಯು– 1001’ ಭತ್ತದ ಬಿತ್ತನೆ ಬೀಜವು 1,959 ಕ್ವಿಂಟಲ್, ‘ಐ.ಆರ್–64’ ಬಿತ್ತನೆ ಬೀಜ 1,236 ಕ್ವಿಂಟಲ್, ‘ಜ್ಯೋತಿ ಭತ್ತ’ 292 ಕ್ವಿಂಟಲ್, ‘ಎಂ.ಟಿ.ಯು–1010’ ಬಿತ್ತನೆ ಬೀಜ 100 ಕ್ವಿಂಟಲ್, ‘ಬಿ.ಆರ್–2655’ ಬಿತ್ತನೆ ಬೀಜ 60 ಕ್ವಿಂಟಲ್ ಹಾಗೂ ‘ಆರ್.ಎನ್.ಆರ್–15048’ ಬಿತ್ತನೆ ಬೀಜವು 305 ಕ್ವಿಂಟಲ್ ಜಿಲ್ಲೆಗೆ ಸರಬರಾಜಾಗಿದೆ. ಒಟ್ಟಾರೆ ಜಿಲ್ಲೆಗೆ 3,957 ಕ್ವಿಂಟಲ್ ಭತ್ತದ ಬಿತ್ತನೆ ಬೀಜ ಸರಬರಾಜಾಗಿದ್ದು, 481 ಕ್ವಿಂಟಲ್ ಅನ್ನು ರೈತರಿಗೆ ವಿತರಿಸಲಾಗಿದೆ’ ಎಂದು ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ 190 ಕ್ವಿಂಟಲ್ ರಾಗಿ ಬಿತ್ತನೆ ಬೀಜವನ್ನು ದಾಸ್ತಾನು ಮಾಡಲಾಗಿದ್ದು, 97 ಕ್ವಿಂಟಲ್‌ನಷ್ಟು ಬಿತ್ತನೆ ಬೀಜವನ್ನು ಸಹಾಯಧನದಲ್ಲಿ ವಿತರಣೆ ಮಾಡಲಾಗಿದೆ. 130 ಕ್ವಿಂಟಲ್ ಮುಸುಕಿನ ಜೋಳದ ಬಿತ್ತನೆ ಬೀಜವನ್ನು ದಾಸ್ತಾನು ಮಾಡಲಾಗಿದ್ದು, 30 ಕ್ವಿಂಟಲ್‌ನಷ್ಟು ಬಿತ್ತನೆ ಬೀಜವನ್ನು ರೈತರಿಗೆ ವಿತರಿಸಲಾಗಿದೆ ಎಂದು ಕೃಷಿ ಅಧಿಕಾರಿಗಳು ತಿಳಿಸಿದರು.
ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ 1.92 ಲಕ್ಷ ಹೆಕ್ಟೇರ್ ಬಿತ್ತನೆ ಕ್ಷೇತ್ರದ ಗುರಿ ಹಾಕಿಕೊಂಡಿದ್ದು, 29,055 ಹೆಕ್ಟೇರ್‌ನಲ್ಲಿ ವಿವಿಧ ಬೆಳೆಗಳ ಬಿತ್ತನೆ ಪೂರ್ಣಗೊಂಡಿದೆ. ಅಂದರೆ ಶೇ 15.1ರಷ್ಟು ಬಿತ್ತನೆ ಕಾರ್ಯ ಪ್ರಗತಿಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 16.7ರಷ್ಟು ಪ್ರಗತಿಯಾಗಿತ್ತು. ಉದ್ದು (ಶೇ 88.5), ಹೆಸರು (ಶೇ 85.1) ಹಾಗೂ ಅಲಸಂದೆ (102.3), ನೆಲಗಡಲೆ (51.7)ರಷ್ಟು ಬಿತ್ತನೆ ಪ್ರಗತಿಯಾಗಿದೆ.
57,700 ಹೆಕ್ಟೇರ್‌ನಷ್ಟು ಭತ್ತದ ಬಿತ್ತನೆ ಗುರಿ 3,957 ಕ್ವಿಂಟಲ್ ಭತ್ತದ ಬಿತ್ತನೆ ಬೀಜ ದಾಸ್ತಾನು ಭತ್ತದ ಒಟ್ಲು ಬಿಡುವ ಕಾರ್ಯ ಚುರುಕು
ಮಂಡ್ಯ ಜಿಲ್ಲೆಯಲ್ಲಿ ಬಿತ್ತನೆ ಬೀಜಗಳಿಗೆ ಯಾವುದೇ ಕೊರತೆಯಿಲ್ಲ. ರೈತರು ಪ್ರಮಾಣೀಕೃತ ಬಿತ್ತನೆ ಬೀಜವನ್ನು ಸಹಾಯಧನದಲ್ಲಿ ಕೃಷಿ ಇಲಾಖೆಯಿಂದ ಖರೀದಿಸಿ ಬಿತ್ತನೆ ಮಾಡಬೇಕು– ಅಶೋಕ್ ವಿ.ಎಸ್. ಜಂಟಿ ಕೃಷಿ ನಿರ್ದೇಶಕ ಮಂಡ್ಯ
ಕಬಿನಿ ಕೆಆರ್‌ಎಸ್ ಜಲಾಶಯಗಳು ಭರ್ತಿಯಾಗಿ ನಾಲೆಗಳಲ್ಲಿ ನೀರು ಬರುತ್ತಿದೆ. ಭತ್ತದ ಬಿತ್ತನೆ ಕಾರ್ಯ ಕೈಗೊಂಡಿದ್ದು ಉತ್ತಮ ಇಳುವರಿಯ ನಿರೀಕ್ಷೆಯಲ್ಲಿದ್ದೇನೆ– ರಮೇಶ್ ರೈತ ನೆಲಮಾಕನಹಳ್ಳಿ ಮಳವಳ್ಳಿ ತಾ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.