ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಳವಳ್ಳಿ | ದೇವಿಯ ದರ್ಶನಕ್ಕೆ ಹರಿದು ಬಂದ ಭಕ್ತಸಾಗರ

ಫೆ.23 ಹಾಗೂ 24ರಂದು ನಡೆಯುವ ಐತಿಹಾಸಿಕ ಸಿಡಿ ಹಬ್ಬಕ್ಕೆ ಅಧಿಕೃತ ಚಾಲನೆ
Published 20 ಫೆಬ್ರುವರಿ 2024, 13:54 IST
Last Updated 20 ಫೆಬ್ರುವರಿ 2024, 13:54 IST
ಅಕ್ಷರ ಗಾತ್ರ

ಮಳವಳ್ಳಿ: ಮಳವಳ್ಳಿಯ ಗಡಿ ಕಾಯುವ ದೇವರು ಎಂದು ಪ್ರಸಿದ್ಧಿ ಪಡೆದ ಪಟ್ಟಣದ ಹೊರವಲಯದ ದಂಡಿನ ಮಾರಮ್ಮನ ಹಬ್ಬವು ಮಂಗಳವಾರ ವಿಜೃಂಭಣೆಯಿಂದ ನಡೆಯುವ ಮೂಲಕ ಐತಿಹಾಸಿಕ ಪಟ್ಟಲದಮ್ಮನ ಸಿಡಿಹಬ್ಬಕ್ಕೆ ಅಧಿಕೃತ ಚಾಲನೆ ದೊರೆತಂದಾಗಿದೆ.

ಪಟ್ಟಣದ ದೊಡ್ಡಕೆರೆ ಸಮೀಪದ ಶಕ್ತಿದೇವತೆ ದಂಡಿನ ಮಾರಮ್ಮ ದೇವಸ್ಥಾನದಲ್ಲಿ ಪಟ್ಟಣದ ಸೇರಿದಂತೆ ಸುತ್ತಮುತ್ತಲಿನ ಹತ್ತಾರು ಗ್ರಾಮಗಳ ಸಾವಿರಾರು ಭಕ್ತರು ಪೂಜೆ ಸಲ್ಲಿಸುವುದರೊಂದಿಗೆ ಫೆ.24 ಮತ್ತು 26 ರಂದು ನಡೆಯುವ ಐತಿಹಾಸಿಕ ಪಟ್ಟಲದಮ್ಮನ ಸಿಡಿಹಬ್ಬಕ್ಕೆ ಅಧಿಕೃತ ಚಾಲನೆ ಸಿಕ್ಕಿದೆ.

ಸಿಡಿ ಹಬ್ಬದ ಆಚರಣೆಗೆ ಮೂರು ದಿನಗಳ ಇರುವಂತೆ ದಂಡಿನ ಮಾರಮ್ಮನ ಹಬ್ಬವನ್ನು ಆಚರಿಸಿಕೊಂಡು ಬರುತ್ತಿದ್ದು, ಸಂಪ್ರಾಯದಂತೆ ವಿಶೇಷ ಪೂಜಾ ಕೈಂಕರ್ಯಗಳು ಜರುಗಿದವು.

ದೇವಸ್ಥಾನಕ್ಕೆ ನಾನಾ ಬಗೆಯ ಹೂವು, ವಿದ್ಯುತ್ ದೀಪಾಲಂಕಾರಗಳ ಮಾಡಿ ಹಸಿರು ತೋರಣದಿಂದ ಕಂಗೊಳಿಸುವಂತೆ ಮಾಡಲಾಗಿತ್ತು.  ಬೆಳಗಿನ ಜಾವ 3ರಿಂದಲೇ ತಾಲ್ಲೂಕಿನ ವಿವಿಧ ಗ್ರಾಮದ ಸಾವಿರಾರು ಮಹಿಳೆಯರು ತಂಬಿಟ್ಟಿನ ಆರತಿಯೊಂದಿಗೆ ದೇವಸ್ಥಾನಕ್ಕೆ ಆಗಮಿಸಿ ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿದರು. ಸರತಿಯಲ್ಲಿ ತೆರಳಿದ ಭಕ್ತರು ನೂನಾರು ತಂಬಿಟ್ಟಿನ ಆರತಿಯೊಂದಿಗೆ ಕೋಳಿಗಳನ್ನು ಬಲಿ ನೀಡಿ ವಿಶೇಷ ಪೂಜೆ ಸಲ್ಲಿಸಿ ಹರಕೆ ತೀರಿಸಿದರು.

ಶಾಸಕರ ಭೇಟಿ: ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅವರು ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.‘ರಾಜ್ಯದಲ್ಲಿ ಅವರಿಸಿರುವ ಬರದಿಂದ ರೈತ ಕುಲವನ್ನು ಕಾಪಾಡುವಂತೆ ದೇವರಲ್ಲಿ ಪ್ರಾರ್ಥಿಸಲಾಗಿದೆ. ಮುಂದಿನ ದಿನಗಳಲ್ಲಿ ಮಳೆ ಬೆಳೆ ಸಮೃದ್ಧಿಯಿಂದ ಆಗಿ ರಾಜ್ಯದ ಜನರಿಗೆ ಒಳ್ಳೆಯದನ್ನು ಮಾಡಲಿ’ ಎಂದು ಆಶಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಜೆ.ದೇವರಾಜು, ಕೆಪಿಸಿಸಿ ಸದಸ್ಯ ಪುಟ್ಟಸ್ವಾಮಿ, ಮುಖಂಡರಾದ ಆರ್.ಎನ್.ವಿಶ್ವಾಸ್, ಎಂ.ಬಿ.ಮಲ್ಲಯ್ಯ, ಎಂ.ಲಿಂಗರಾಜು, ಮುಟ್ಟನಹಳ್ಳಿ ಅಂಬರೀಶ್, ರಮೇಶ್, ಬಸವರಾಜು, ಕಿರಣ್ ಶಂಕರ್, ನಂಜುಂಡಸ್ವಾಮಿ, ಪ್ರಸಾದ್, ಬಂಕ್ ಮಹದೇವು, ದಿಲೀಪ್ ಕುಮಾರ್(ವಿಶ್ವ), ಶಾಂತರಾಜು ಇದ್ದರು.

ಶಾಸಕ ಪಿ.ಎಂ.ನರೇಂದ್ರಸ್ವಾಮಿ ಮಳವಳ್ಳಿ ಪಟ್ಟಣದ ಹೊರವಲಯದ ದೊಡ್ಡಕೆರೆಯ ಸಮೀಪದ ದಂಡಿನ ಮಾರಮ್ಮನ ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿದರು
ಶಾಸಕ ಪಿ.ಎಂ.ನರೇಂದ್ರಸ್ವಾಮಿ ಮಳವಳ್ಳಿ ಪಟ್ಟಣದ ಹೊರವಲಯದ ದೊಡ್ಡಕೆರೆಯ ಸಮೀಪದ ದಂಡಿನ ಮಾರಮ್ಮನ ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿದರು

ದಂಡೆತ್ತಿ ಬಂದ ಸೈನಿಕರಿಂದ ರಕ್ಷಿಸಿದ ಶಕ್ತಿದೇವತೆ ದಂಡಿನ ಮಾರಮ್ಮನ ಹಬ್ಬ 24ರಿಂದ ಪಟ್ಟಲದಮ್ಮನ ಸಿಡಿಹಬ್ಬಕ್ಕೆ ಚಾಲನೆ ದೇವಸ್ಥಾನಕ್ಕೆ ಹೂವಿನಿಂದ ವಿಶೇಷ ಅಲಂಕಾರ

ಧಾರ್ಮಿಕ ಹಿನ್ನಲೆ: ಪಾರಂಪರಿಕ ಹಿನ್ನಲೆವುಳ್ಳ ಶಕ್ತಿದೇವತೆ ದಂಡಿನ ಮಾರಮ್ಮ ಮಳವಳ್ಳಿಯ ಗಡಿಕಾಯುವ ದೇವತೆಯಾಗಿ ರಾಜರ ಕಾಲದಿಂದಲೂ ಪಟ್ಟಣದ ಸಂರಕ್ಷಣೆಗಾಗಿಯೇ ದೊಡ್ಡಕೆರೆಯ ಬಳಿ ನೆಲಿಸಿದ್ದಾಳೆ ಎಂಬ ಅಪಾರ ನಂಬಿಕೆ ಭಕ್ತರಲ್ಲಿದೆ. ದಂಡೆತ್ತಿ ಬಂದ ಸೈನಿಕರನ್ನು ಹಿಮ್ಮಿಟ್ಟಿಸಿದ ದೇವತೆಗೆ ವಾಡಿಕೆಯಂತೆ ಅಗ್ರಪೂಜೆ ನೆರವೇರಿಸಿಕೊಂಡು ಬರಲಾಗುತ್ತಿದೆ. ಎಲ್ಲ ಸಮುದಾಯಗಳ ಆರಾಧ್ಯ ದೇವಿಯಾಗಿದ್ದು ಮಡಿಯುಟ್ಟ ಮುತ್ತೈದೆಯರು ಹೆಣ್ಣು ಮಕ್ಕಳು ರೌದ್ರ ದೇವತೆಯಾದ ದಂಡಿನ ಮಾರಮ್ಮನ ಕೋಪವನ್ನು ತಣಿಸುವ ನಿಟ್ಟಿನಲ್ಲಿ ಮುಂಜಾನೆಯಿಂದಲೇ ತಂಬಿಟ್ಟಿನ ಆರತಿಯೊಂದಿಗೆ ಭಕ್ತಿಯ ಜೊತೆಗೆ ಸಡಗರ ಸಂಭ್ರಮದಿಂದ ಪೂಜೆ ಸಲ್ಲಿಸುವ ಪ್ರತೀತಿ ನಡೆದುಕೊಂಡು ಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT