ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರು ಬಿಟ್ಟರೂ ಮೇಕೆದಾಟು ಯೋಜನೆಗೆ ಅಡ್ಡಿ ಏಕೆ; ಅರ್ಜುನಹಳ್ಳಿ ಪ್ರಸನ್ನಕುಮಾರ್‌

ಕೊರತೆಯ ನಡುವೆಯೂ ತಮಿಳುನಾಡಿಗೆ ನೀರು; ಅರ್ಜುನಹಳ್ಳಿ ಪ್ರಸನ್ನಕುಮಾರ್‌ ಪ್ರಶ್ನೆ
Last Updated 8 ಸೆಪ್ಟೆಂಬರ್ 2021, 12:30 IST
ಅಕ್ಷರ ಗಾತ್ರ

ಮಂಡ್ಯ: ‘ಕಾವೇರಿ ಕೊಳ್ಳದ ರೈತರಿಗೆ ನೀರಿನ ಕೊರತೆಯಾಗಿದ್ದು ಮಳೆಗಾಗಿ ಕಾಯುತ್ತಿದ್ದಾರೆ. ಕಷ್ಟದ ನಡುವೆಯೂ ಕೆಆರ್‌ಎಸ್‌ನಿಂದ ತಮಿಳುನಾಡಿಗೆ ನೀರು ಹರಿಸಲಾಗುತ್ತಿದೆ. ನೀರು ಬಿಡುತ್ತಿದ್ದರೂ ತಮಿಳುನಾಡು ಸರ್ಕಾರ ಮೇಕೆದಾಟು ಯೋಜನೆಗೆ ತಡೆಯೊಡ್ಡುತ್ತಿರುವುದು ಏಕೆ’ ಎಂದು ನೀರಾವರಿ ತಜ್ಞ ಅರ್ಜುನಹಳ್ಳಿ ಪ್ರಸನ್ನಕುಮಾರ್‌ ಬುಧವಾರ ಪ್ರಶ್ನಿಸಿದರು.

‘ಯೋಜನೆಗೆ ಅಡ್ಡಿಪಡಿಸಿ ಪದೇಪದೇ ಸುಪ್ರೀಂ ಕೋರ್ಟ್‌ ಮೆಟ್ಟಿಲೇರುತ್ತಿರುವ ತಮಿಳುನಾಡು ಸರ್ಕಾರಕ್ಕೆ ಹಲವು ಬಾರಿ ಹಿನ್ನಡೆ ಉಂಟಾಗಿದೆ. ಮೇಕೆದಾಟು ಯೋಜನೆಗೆ ನ್ಯಾಯಾಧೀಕರಣದ ಅನುಮತಿ ಬೇಕಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳುತ್ತಿರುವುದು ಅವರಿಗೆ ಸಾಮಾನ್ಯ ಜ್ಞಾನವಿಲ್ಲ ಎಂಬುದು ತಿಳಿಯುತ್ತದೆ’ ಎಂದು ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

‘ರಾಜ್ಯದ ನೀರಾವರಿ ಯೋಜನೆಗಳಿಗೆ ತಡೆಯೊಡ್ಡುವ ಅಧಿಕಾರ ಕೇಂದ್ರ ಸರ್ಕಾರಕ್ಕಾಗಲೀ, ಕೇಂದ್ರ ನೀರಾವರಿ ಆಯೋಗಕ್ಕಾಗಲಿ, ನ್ಯಾಯಾಲಕ್ಕಾಗಲೀ ಇಲ್ಲ. ಅದು ಸಂವಿಧಾನ ಅನುಚ್ಚೇದ 7ರಲ್ಲಿ ರಾಜ್ಯಗಳಿಗೆ ಕೊಟ್ಟಿರುವ ಹಕ್ಕು. ಈ ಹಕ್ಕನ್ನು ಧೈರ್ಯವಾಗಿ ಚಲಾಯಿಸುವ ಸರ್ಕಾರ ಇದುವರೆವಿಗೂ ಬಂದಿಲ್ಲ. ಇದು ನಮ್ಮ ಸಮಸ್ಯೆಯಾಗಿದೆ’ ಎಂದು ವಿಷಾದ ವ್ಯಕ್ತಪಡಿಸಿದರು.

‘ಸುಪ್ರೀಂ ಕೋರ್ಟ್‌ ತೀರ್ಪಿನಂತೆ ತಮಿಳುನಾಡಿಗೆ ನೀರು ಬಿಡಿಸುವುದು, ಜಲಾಶಯ ನಿರ್ವಹಣೆ ಮಾಡುವುದು ನೀರು ನಿರ್ವಹಣಾ ಸಮಿತಿಯ ಜವಾಬ್ದಾರಿಯಾಗಿದೆ. ರಾಜ್ಯದ ಯೋಜನೆಯನ್ನು ತಡೆಯುವ ಹಕ್ಕು ಸಮಿತಿಗೆ ಇಲ್ಲ. ಈ ಬಗ್ಗೆ ಸಮರ್ಥವಾಗಿ ನಿರ್ಧಾರ ಕೈಗೊಳ್ಳುವ ರಾಜಕಾರಣಿಗಳು ನಮ್ಮಲ್ಲಿ ಇಲ್ಲದಿರುವುದು ದುರದೃಷ್ಟಕರ’ ಎಂದರು.

ಎಸ್‌.ಬಿ.ಶಿಕ್ಷಣ ಸಂಸ್ಥೆ ಅಧ್ಯಕ್ಷ ಪ್ರೊ.ಬಿ.ಶಿವಲಿಂಗಯ್ಯ ಮಾತನಾಡಿ ‘ಕಾವೇರಿ ವಿಚಾರದಲ್ಲಿ ರಾಜಕೀಯ ಬೆರಸಲಾಗುತ್ತಿದೆ. ಜಲವಿದ್ಯುತ್‌ಗಾಗಿ ಜಲಾಶಯ ನಿರ್ಮಿಸಲು ನ್ಯಾಯಾಧಿಕರಣದ ತೀರ್ಪಿನಲ್ಲೇ ಅವಕಾಶವಿದೆ. ಆದರೆ ಇದನ್ನು ಮರೆತು ರಾಜಕಾರಣಿಗಳು, ಬೆಂಗಳೂರು, ಕೋಲಾರಕ್ಕೆ ಕುಡಿಯುವ ನೀರಿಗಾಗಿ ಯೋಜನೆ ಜಾರಿಗೊಳಿಸುತ್ತಿರುವ ವಿಚಾರ ಮಾತನಾಡುತ್ತಿರುವುದು ಅವೈಜ್ಞಾನಿಕ’ ಎಂದರು.’

‘ತಮಿಳುನಾಡು ಸರ್ಕಾರ ಆಕ್ಷೇಪ ಸಲ್ಲಿಸಲು ನಾವೇ ಅವಕಾಶ ಮಾಡಿಕೊಟ್ಟಂತಾಗಿದೆ. ಶಿವನಸಮುದ್ರ ಸಮೀಪದ ಹಲವು ಕಿರು ಜಲ ವಿದ್ಯುತ್‌ ಯೋಜನೆಗಳಿಗೆ ತಮಿಳುನಾಡು ಸರ್ಕಾರ ಅಡ್ಡಿ ವ್ಯಕ್ತಪಡಿಸಿತ್ತು. ನಂತರ ವಾಸ್ತವ ಅರಿತು ಹಿಂದೆ ಸರಿದಿತ್ತು’ ಎಂದರು.

ನಗರಸಭೆ ಮಾಜಿ ಅಧ್ಯಕ್ಷ ಬಿ.ಸಿದ್ದರಾಜು, ಪಾಂಡವಪುರ ವಿಜಯ ಕಾಲೇಜಿನ ಗೌರವ ಕಾರ್ಯದರ್ಶಿ ಬಸವರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT