ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯ: ಚಿತ್ರಶಾಲೆಯಾಗಿ ಅರಳಿದ ಕೆವಿಎಸ್‌ ಜೀವನಗಾಥೆ

ಶತಮಾನೋತ್ಸವ ಭವನದಲ್ಲಿ ಅರಳಿದ ಶಾಶ್ವತ ಗ್ಯಾಲರಿ, ಅಪರೂಪದ ಛಾಯಾಚಿತ್ರಗಳ ಸಂಗ್ರಹ
Last Updated 12 ಮಾರ್ಚ್ 2022, 19:30 IST
ಅಕ್ಷರ ಗಾತ್ರ

ಮಂಡ್ಯ: ನಿತ್ಯ ಸಚಿವ ಕೆ.ವಿ.ಶಂಕರಗೌಡರ ಆದರ್ಶಮಯ ಬದುಕು ಚಿತ್ರಶಾಲೆಯ ರೂಪ ಪಡೆದಿದೆ. ಅವರ ಜೀವನಗಾಥೆ, ಪ್ರಮುಖ ಘಟ್ಟಗಳ ಅಪರೂಪದ ನೂರಾರು ಛಾಯಾಚಿತ್ರಗಳನ್ನು ಕರ್ನಾಟಕ ಸಂಘದ ಆವರಣದಲ್ಲಿರುವ ಕೆವಿಎಸ್‌ ಶತಮಾನೋತ್ಸವ ಭವನದಲ್ಲಿ ಪ್ರದರ್ಶನ ಮಾಡಲಾಗಿದ್ದು ಹೊಸ ಪೀಳಿಗೆಯ ಯುವಜನರಿಗೆ ಸ್ಫೂರ್ತಿ ತುಂಬುತ್ತಿದೆ.

ಭವನದ 2ನೇ ಮಹಡಿಯಲ್ಲಿ ಶಾಶ್ವತ ಗ್ಯಾಲರಿ ರೂಪಗೊಂಡಿದ್ದು ಅಲ್ಲಿ ಕೆ.ವಿ.ಶಂಕರಗೌಡರು ಸಾಧನೆಯ ಹಾದಿಯನ್ನು ಕಾಣಬಹುದಾಗಿದೆ. ಅವರು ಮುತ್ಸದ್ಧಿ ರಾಜಕಾರಣಿಯಾಗಿ, ಕಲಾಪ್ರೇಮಿಯಾಗಿ, ಕತೆಗಾರರಾಗಿ, ನಾಟಕಕಾರರಾಗಿ, ಶಿಕ್ಷಣ ತಜ್ಞರಾಗಿ ಮಾಡಿದ ಕೆಲಸಗಳನ್ನು ಛಾಯಾಚಿತ್ರಗಳಲ್ಲಿ ಕಾಣಬಹುದಾಗಿದೆ. ಸರಳಜೀವಿಯಾಗಿ ಬದುಕಿದ ಪರಿಯ ಸಂಕೇತವಾಗಿ ಅವರು ಬಳಸಿದ ವಸ್ತುಗಳನ್ನೂ ಸಂಗ್ರಹಿಸಿಡಲಾಗಿದೆ.

ರಾಜ್ಯ ರಾಜಕಾರಣದಲ್ಲಿ ಬೆರಗು ಮೂಡಿಸಿದ್ದ ಶಂಕರಗೌಡರು ತಮ್ಮ ಶ್ರೇಷ್ಠ ಆಲೋಚನೆಗಳಿಂದ ಪ್ರಸಿದ್ಧಿ ಪಡೆದಿದ್ದರು. ರಾಜಕಾರಣಿಗಳ ಜೊತೆ ಅವರ ಒಡನಾಟ ಬಹಳ ದೊಡ್ಡದಾಗಿತ್ತು. ಕೆಂಗಲ್‌ ಹನುಮಂತಯ್ಯ, ಎಸ್‌.ನಿಜಲಿಂಗಪ್ಪ, ವೀರೇಂದ್ರ ಪಾಟೀಲ್‌, ರಾಮಕೃಷ್ಣ ಹೆಗಡೆ ಮುಂತಾದ ದಿಗ್ಗಜರ ಜೊತೆಗಿನ ಚಿತ್ರಗಳನ್ನು ಸಂಗ್ರಹಿಸಲಾಗಿದೆ.

ಸ್ಥಳೀಯ ನಾಯಕರಾದ ಎಂ.ಕೆ.ಶಿವನಂಜಪ್ಪ, ಜಿ.ಎಸ್‌.ಬೊಮ್ಮೇಗೌಡ, ಪಿ.ಎನ್‌.ಜವರಪ್ಪಗೌಡ, ಎಚ್‌.ಸಿ.ಚನ್ನಯ್ಯ, ಎಚ್‌.ಡಿ.ಚೌಡಯ್ಯ ಮುಂತಾದವರ ಜೊತೆಗಿನ ಚಿತ್ರಗಳಿವೆ. ಕೇವಲ ರಾಜ್ಯ ರಾಜಕಾರಣದಲ್ಲಿ ಮಾತ್ರವಲ್ಲದೇ ಬೇರೆ ರಾಜ್ಯಗಳ ಮುತ್ಸದ್ಧಿ ನಾಯಕರಾದ ಕಾಮಗಾರಾಜ ನಾಡಾರ್‌, ಗುಲ್ಜರಿಲಾಲ್‌ ನಂದ, ಜಿ.ಎಸ್‌.ಪಾಠಕ್‌ ಮುಂತಾದವರ ಜೊತೆಗಿನ ಫೋಟೊಗಳಿವೆ. ಅಖಿಲ ಭಾರತ ವಯಸ್ಕರ ಶಿಕ್ಷಣ ಸಮ್ಮೇಳನದಲ್ಲಿ ಡಾ.ಸರ್ವಪಲ್ಲಿ ರಾಧಾಕೃಷ್ಣನ್‌, ಎ.ಜಿ.ರಾಮಚಂದ್ರರಾವ್‌ ಅವರ ಜೊತೆಗಿರುವ ಅಪರೂಪದ ಚಿತ್ರಗಳಿವೆ.

ಕೆ.ವಿ.ಶಂಕರಗೌಡರು ಸಾಹಿತ್ಯದ ಹೃದಯವುಳ್ಳವರಾಗಿದ್ದರು. ಸಾಹಿತಿ, ಕಲಾವಿದರ ಜೊತೆಗಿನ ಒಡನಾಟಕ್ಕೆ ಪ್ರಮುಖ ಆದ್ಯತೆ ನೀಡಿದ್ದರು. ಅದನ್ನು ಸಾಕ್ಷೀಕರಿಸುವಂತಹ ಛಾಯಾಚಿತ್ರಗಳು ಗ್ಯಾಲರಿಯಲ್ಲಿವೆ. ಕುವೆಂಪು ಅವರಿಗೆ ಜ್ಞಾನಪೀಠ ಪ್ರಶಸ್ತಿ ಬಂದಾಗ ಶಂಕರಗೌಡರು ಅವರನ್ನು ಕರೆಸಿ ಸನ್ಮಾನ ಮಾಡಿದ್ದರು. ಶಿವರಾಮ ಕಾರಂತ, ವಿ.ಕೃ.ಗೋಕಾಕ್‌, ಕೆ.ಎಸ್‌.ನಿಸಾರ್‌ ಅಹಮದ್‌, ದೇ.ಜ.ಗೌ, ಪುತಿನ ಮುಂತಾದವರ ಜೊತೆಗಿನ ಚಿತ್ರಗಳನ್ನೂ ಇಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ.

ಆದಿಚುಂಚನಗಿರಿ ಮಠದ ನಿರ್ಮಾತೃ ಬಾಲಗಂಗಾಧರನಾಥ ಸ್ವಾಮೀಜಿ ಜೊತೆಗಿನ ಹಲವು ಛಾಯಾಚಿತ್ರಗಳು ಇಲ್ಲಿವೆ. ರೈತರ ಸೊಸೈಟಿ ಕಟ್ಟಿದ ನೆನಪುಗಳ ಚಿತ್ರಗಳು ಇಲ್ಲಿವೆ. ಕಲಾವಿದರಾದ ಡಾ.ರಾಜ್‌ಕುಮಾರ್‌, ಡಾ.ಗಂಗೂಬಾಯಿ ಹಾನಗಲ್‌, ನಾಗರತ್ನಮ್ಮ, ವೈಜಯಂತಿ ಮಾಲಾ, ಕಲ್ಪನಾ, ಮಾಸ್ಟರ್‌ ಹಿರಣ್ಣಯ್ಯ, ಅಶೋಕ್‌, ಅಂಬರೀಷ್‌, ಲೋಕೇಶ್ ಮುಂತಾದವರೊಂದಿಗೆ ಇರುವ ಚಿತ್ರಗಳೂ ಇವೆ.

ಕೆ.ವಿ.ಎಸ್‌ ಅವರ ಕತೆ–ಸಂಭಾಷಣೆಯೊಂದಿಗೆ ಮೂಡಿಬಂದ ‘ಕೂಡಿ ಬಾಳೋಣ’ ಚಿತ್ರದ ಪೋಸ್ಟರ್‌ ಕೂಡ ಇದೆ. ತಾವು ಬರೆದ ಪಾದುಕಾ ಕಿರೀಟಿ ನಾಟದಲ್ಲಿ ‘ದಶರಥ’ನಾಗಿ ಅಭಿನಯಿಸಿದ ಚಿತ್ರಗಳನ್ನೂ ಸಂಗ್ರಹಿಸಿ ಇಡಲಾಗಿದೆ.

ಕೇವಲ ಚಿತ್ರಗಳು ಮಾತ್ರವಲ್ಲದೇ ಶಂಕರಗೌಡರ ಕೋಟು, ಪಂಚೆ, ಶಾಲು, ಟವೆಲ್‌ ಸಂಗ್ರಹಿಸಿ ಇಡಲಾಗಿದೆ. ಅವರ ಬಳಸುತ್ತಿದ್ದ ಶೇವಿಂಗ್‌ ಸೆಟ್‌, ಊಟಕ್ಕೆ ಬಳಸುತ್ತಿದ್ದ ತಟ್ಟೆ, ಲೋಟ, ಚಮಚಗಳೂ ಇವೆ. ಪೆನ್ನು ಕನ್ನಡಕ, ವಾಚ್‌, ಆಲಾರಮ್‌ ಗಡಿಯಾರಗಳೂ ಇವೆ. ಅವರಿಗೆ ಬಂದ ಉಡುಗೊರೆ, ಪದಕ, ಹಳೆಯ ಪತ್ರಗಳಿಗೂ ಚಿತ್ರರೂಪ ನೀಡಲಾಗಿದೆ. ಶಂಕರಗೌಡರನ್ನು ಕುರಿತು ಪ್ರಕಟಗೊಂಡಿರುವ ಪುಸ್ತಗಳನ್ನೂ ಸಂಗ್ರಹಿಸಿ ಇಡಲಾಗಿದೆ.

‘ಶಂಕರಗೌಡರು ಮುಂದಿನ ತಲೆಮಾರುಗಳಿಗೆ ಪ್ರೇರಕ ಶಕ್ತಿಯಾಗಿದ್ದಾರೆ. ಅವರ ಸಾಧನೆಗಳನ್ನು ಗ್ಯಾಲರಿ ಮೂಲಕ ಮುಂದಿನ ಪೀಳಿಗೆಗೆ ತಿಳಿಸುವ ಕೆಲಸ ಮಾಡಿದ್ದೇವೆ. ಗ್ಯಾಲರಿ ರೂಪಿಸಲು ಬಿ.ಎನ್‌.ಶಿವಕುಮಾರ್‌ ಅವರು ₹ 1 ಲಕ್ಷ ನೀಡಿದ್ದಾರೆ. ಉಳಿದಂತೆ ಶಂಕರಗೌಡ ಅಭಿಮಾನಿಗಳು ₹ 2.5 ಲಕ್ಷ ಭರಿಸಿದ್ದಾರೆ’ ಎಂದು ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶ್‌ಗೌಡ ತಿಳಿಸಿದರು.

****

ವಿವಿಧೆಡೆಯಿಂದ ಚಿತ್ರ ಸಂಗ್ರಹ

88ರ ಹರೆಯದಲ್ಲೂ ಉತ್ಸಾಹದ ಚಿಲುಮೆಯಾಗಿರುವ ಕೆ.ವಿ.ಶಂಕರಗೌಡರ ಪತ್ನಿ ಸುಶೀಲಮ್ಮ ಅವರು ಗ್ಯಾಲರಿಯಲ್ಲಿರುವ ಹಲವು ಚಿತ್ರಗಳನ್ನು ಕಾಪಾಡಿಕೊಂಡು ಬಂದಿದ್ದರು. ಜೊತೆಗೆ ಅವರ ಕುಟುಂಬ ಸದಸ್ಯರು, ಅಭಿಮಾನಿಗಳು, ವಾರ್ತಾ ಇಲಾಖೆ ಸಂಗ್ರಹ, ಸಾಹಿತಿಗಳ ಬಳಿಯಿದ್ದ ಚಿತ್ರಗಳನ್ನು ಪಡೆದು ಚಿತ್ರಶಾಲೆ ರೂಪಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT