ಶ್ರೀರಂಗಪಟ್ಟಣ: ತಾಲ್ಲೂಕಿನ ಕಾರೇಕುರ ಗ್ರಾಮದ ಬಳಿ ಕಾವೇರಿ ನದಿ ತೀರಕ್ಕೆ ವಿಹಾರಕ್ಕೆ ಬಂದಿದ್ದ ಮೈಸೂರಿನ ಯುವಕರ ಗುಂಪು ಸ್ಥಳೀಯರ ಮೇಲೆ ಹಲ್ಲೆ ನಡೆಸಿದೆ ಎಂಬ ಹಿನ್ನೆಲೆಯಲ್ಲಿ ಗ್ರಾಮಸ್ಥರು ವಿಹಾರಿಗಳಿಗೆ ದಿಗ್ಬಂಧನ ವಿಧಿಸಿದ ಪ್ರಸಂಗ ಭಾನುವಾರ ಸಂಜೆ ನಡೆದಿದೆ.
ವಿಹಾರಕ್ಕೆ ಬಂದಿದ್ದವರು ಪಕ್ಕದ ಪಾಲಹಳ್ಳಿ ಗ್ರಾಮಸ್ಥರ ಜತೆ ವಾಗ್ವಾದ ನಡೆಸುತ್ತಿದ್ದ ವೇಳೆ ಮಧ್ಯೆ ಪ್ರವೇಶಿಸಿದ ಕಾರೇಕುರ ಗ್ರಾಮದ ಇಬ್ಬರ ಮೇಲೆ ಈ ಗುಂಪು ಹಲ್ಲೆ ನಡೆಸಿದೆ. ಇದರಿಂದ ಸಿಟ್ಟಿಗೆದ್ದ ಗ್ರಾಮಸ್ಥರು, ವಿಹಾರಿಗಳು ಬಂದಿದ್ದ ಕಾರಿನ ಚಕ್ರಗಳ ಗಾಳಿ ತೆಗೆದು ತಡೆದು ನಿಲ್ಲಿಸಿದ್ದಾರೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಶ್ರೀರಂಗಪಟ್ಟಣ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಗುಂಪು ಚದುರಿಸಿದರು. ಹಲ್ಲೆ ನಡೆಸಿದವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದರು. ಕಾರೇಕುರ ಗ್ರಾಮದ ನದಿ ತೀರಕ್ಕೆ ಬರುವವರು ಅವ್ಯವಸ್ಥೆ ಸೃಷ್ಟಿಸುತ್ತಿದ್ದಾರೆ. ಕೆಲವರು ಪ್ರಾಣವನ್ನೂ ಕಳೆದುಕೊಂಡಿದ್ದಾರೆ.ನದಿ ತೀರಕ್ಕೆ ವಿಹಾರಿಗಳು ಬರದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು. ಹಲ್ಲೆ ಪ್ರಕರಣ ಕುರಿತು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.