ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯ: ಮೈಷುಗರ್‌ ಯಂತ್ರ ಸಾಗಿಸಲು ಯತ್ನ, ದೂರು

ನಿರಾಣಿ ಗ್ರೂಪ್‌ ಸಿಬ್ಬಂದಿಯಿಂದ ಅನಧಿಕೃತ ಪ್ರವೇಶ, ಟರ್ಬೈನ್‌ ಕಳ್ಳ ಸಾಗಣೆ ಆರೋಪ
Last Updated 21 ಡಿಸೆಂಬರ್ 2021, 15:12 IST
ಅಕ್ಷರ ಗಾತ್ರ

ಮಂಡ್ಯ: ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆ (ಪಿಎಸ್‌ಎಸ್‌ಕೆ) ಗುತ್ತಿಗೆ ಪಡೆದಿರುವ ನಿರಾಣಿ ಷುಗರ್ಸ್‌ ಸಿಬ್ಬಂದಿ ನಗರದ ಮೈಷುಗರ್‌ ಕಾರ್ಖಾನೆಯಿಂದ ದುಬಾರಿ ಯಂತ್ರೋಪಕರಣಗಳನ್ನು ಅನಧಿಕೃತವಾಗಿ ಸಾಗಣೆ ಮಾಡಲು ಯತ್ನಿಸಿದ್ದಾರೆ ಎಂದು ಆರೋಪಿಸಿ ಮೈಷುಗರ್‌ ಅಧ್ಯಕ್ಷ ಶಿವಲಿಂಗೇಗೌಡ ಕೇಂದ್ರ ಪೊಲೀಸ್‌ ಠಾಣೆಗೆ ಮಂಗಳವಾರ ದೂರು ನೀಡಿದ್ದಾರೆ.

ನಿರಾಣಿ ಗ್ರೂಪ್‌ನ ಎಂಜಿನಿಯರ್‌ ಜಿ.ಶರಣಬಸಪ್ಪ ಹಾಗೂ ಸಿಬ್ಬಂದಿ ಮಂಗಳವಾರ ಅನಧಿಕೃತವಾಗಿ ಕಾರ್ಖಾನೆ ಆವರಣ ಪ್ರವೇಶ ಮಾಡಿದ್ದಾರೆ. ಸಹ ವಿದ್ಯುತ್‌ ಘಟಕದ ಟರ್ಬೈನ್‌ ಗವರ್ನರ್‌ ಕೊಂಡೊಯ್ಯಲು ಯತ್ನಿಸಿದ್ದಾರೆ. ಇದು ಕಂಪನಿಯ ನಿಯಮಾವಳಿಗೆ ವಿರುದ್ಧವಾಗಿದ್ದು ಎಂಜಿನಿಯರ್‌ ಶರಣಬಸಪ್ಪ ಹಾಗೂ ಇತರ ಸಿಬ್ಬಂದಿಯನ್ನು ಬಂಧಿಸಿ ವಿಚಾರಣೆ ಒಳಪಡಿಸಬೇಕು ಎಂದು ದೂರಿನಲ್ಲಿ ಒತ್ತಾಯಿಸಿದ್ದಾರೆ.

ಕಳ್ಳ ಸಾಗಾಣಿಕೆ ಆರೋಪ: ನಿರಾಣಿ ಗ್ರೂಪ್‌ ಸಿಬ್ಬಂದಿ ಟರ್ಬೈನ್‌ ಸೇರಿ ಯಂತ್ರೋಪಕರಣಗಳನ್ನು ಕಳ್ಳಸಾಗಣೆ ಮಾಡಲು ಯತ್ನಿಸಿದ್ದಾರೆ. ಅಕ್ರಮವಾಗಿ ಕಾರ್ಖಾನೆ ಆವರಣ ಪ್ರವೇಶ ಮಾಡಿದ್ದಾರೆ ಎಂದು ಆರೋಪಿಸಿ ವಿವಿಧ ಸಂಘಟನೆಗಳ ಮುಖಂಡರು ಕಾರ್ಖಾನೆ ಎದುರು ಪ್ರತಿಭಟನೆ ನಡೆಸಿದರು. ಮೊದಲು ಕರವೇ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಡಿ.ಜಯರಾಂ ಹಾಗೂ ಇತರರು ಪ್ರತಿಭಟನೆ ನಡೆಸಿದರು. ನಂತರ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಸೇರಿ ವಿವಿಧ ಸಂಘನೆಗಳ ಮುಖಂಡರು ಸೇರಿಕೊಂಡರು.

ನಿರಾಣಿ ಗ್ರೂಪ್‌ನ ಅಧಿಕಾರಿಗಳು ಭದ್ರತಾ ಸಿಬ್ಬಂದಿಯನ್ನು ಬೆದರಿಸಿ ಒಳ ಪ್ರವೇಶ ಮಾಡಿದ್ದಾರೆ. ಭದ್ರತಾ ಸಿಬ್ಬಂದಿ ಒಳ ಬಿಡಲು ನಿರಾಕರಿಸಿದಾಗ ನಿರಾಣಿ ಗ್ರೂಪ್‌ನ ಮುಖ್ಯ ಎಂಜಿನಿಯರ್‌ ಅನಧಿಕೃತ ಪತ್ರವೊಂದನ್ನು ಸೃಷ್ಟಿಸಿದ್ದಾರೆ. ಮೈಷುಗರ್‌ ವ್ಯವಸ್ಥಾಪಕರಿಗೆ ಪತ್ರ ಬರೆದು ಪಿಎಸ್‌ಎಸ್‌ಕೆ ಟರ್ಬೈನ್‌ ಹಾಳಾಗಿದ್ದು ಮೈಷುಗರ್‌ ಯಂತ್ರವನ್ನು ಸಾಲದ ರೂಪದಲ್ಲಿ ನೀಡುವಂತೆ ಮನವಿ ಮಾಡಿದ್ದಾರೆ. ಆದರೆ ಈ ಮನವಿ ಪತ್ರ ಮೈಷುಗರ್‌ ಎಂ.ಡಿಗೆ ತಲುಪಿಲ್ಲ, ಎಂ.ಡಿ ಅನುಮತಿಯನ್ನೂ ನೀಡಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಈ ಖೊಟ್ಟಿ ಪತ್ರವನ್ನು ಇಟ್ಟುಕೊಂಡು ನಿರಾಣಿ ಗ್ರೂಪ್‌ ಸಿಬ್ಬಂದಿ ಮೈಷುಗರ್ ಕಾರ್ಖಾನೆ ಆವರಣ ಪ್ರವೇಶ ಪಡೆದಿದ್ದಾರೆ. ₹ 25 ಲಕ್ಷ ಮೌಲ್ಯದ ಟರ್ಬೈನ್‌ ಹೊತ್ತಯ್ಯಲು ಯತ್ನಿಸಿದ್ದಾರೆ. ಹಲವು ದಿನಗಳಿಂದ ಇವರು ಯಂತ್ರೋಪಕರಣಗಳನ್ನು ಕಳ್ಳ ಸಾಗಣೆ ಮಾಡಿದ್ದಾರೆ ಎಂಬ ಗುಮಾನಿ ಇದೆ. ಸಿಬ್ಬಂದಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದರು.

ಕಾರ್ಖಾನೆ ಆವರಣವನ್ನು ಸಂಸದೆ ಸುಮಲತಾ ಅವರ ಪುತ್ರ ಅಭಿಷೇಕ್‌ ಅಭಿನಯದ ಚಲನಚಿತ್ರ ಶೂಟಿಂಗ್‌ಗೂ ನೀಡಲಾಗಿದೆ. ಆಗಿನಿಂದಲೂ ಕಾರ್ಖಾನೆ ಆವರಣದಲ್ಲಿ ಅನಧಿಕೃತವಾಗಿ ವಾಹನಗಳು ಓಡಾಡುತ್ತಿವೆ, ಈ ಬಗ್ಗೆಯೂ ತನಿಖೆ ನಡೆಯಬೇಕು ಎಂದು ಆಗ್ರಹಿಸಿದರು.

‘ಮೈಷುಗರ್‌ ಸರ್ಕಾರಿ ಸ್ವಾಮ್ಯದ ಕಾರ್ಖಾನೆ. ಯಾವುದೇ ಯಂತ್ರೋಪಕರಣ ಖರೀದಿ, ಮಾರಾಟ, ಸಾಗಣೆಗೆ ನಿಯಮಗಳಿವೆ. ನಿರಾಣಿ ಗ್ರೂಪ್‌ ಸಿಬ್ಬಂದಿ ಏಕಾಏಕಿ ನಮ್ಮ ಕಾರ್ಖಾನೆಗೆ ಪ್ರವೇಶ ಮಾಡಿದ್ದು ತಪ್ಪು. ಹೀಗಾಗಿ ಸಮಗ್ರ ತನಿಖೆಗೆ ಒತ್ತಾಯಿಸಿ ದೂರು ನೀಡಲಾಗಿದೆ’ ಎಂದು ಮೈಷುಗರ್‌ ಅಧ್ಯಕ್ಷ ಶಿವಲಿಂಗೇಗೌಡ ಹೇಳಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ನಾಯಕಿ ಸುನಂದಾ ಜಯರಾಂ, ಕನ್ನಡಸೇನೆ ಮಂಜುನಾಥ್‌, ಮುಖಂಡರಾದ ಯಶವಂತ್‌, ಮುದ್ದೇಗೌಡ, ಕುಮಾರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT