ಮಂಡ್ಯ: ‘ಪಟೇಲ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಸೆ.19 ಸಂಜೆ 5 ಗಂಟೆಗೆ ಕರ್ನಾಟಕ ಸಂಘ, ಕುವೆಂಪು ಬಯಲು ರಂಗಮಂದಿರದಲ್ಲಿ ವಿದ್ಯಾರ್ಥಿ ಪುರಸ್ಕಾರ ಪ್ರದಾನ ಹಾಗೂ ಸನ್ಮಾನ ಸಮಾರಂಭ ಆಯೋಜಿಸಲಾಗಿದೆ’ ಎಂದು ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ ಹೇಳಿದರು.
‘ವೀರಯೋಧ ಆರ್.ಲೋಕೇಶ್ ಪಟೇಲ್ ಜ್ಞಾಪಕಾರ್ಥವಾಗಿ ಸಮಾರಂಭ ಆಯೋಜಿಸಲಾಗಿದ್ದು, ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಹಾಗೂ ವಿಶ್ವಮಾನವ ಶಾಖಾಮಠದ ಪುರುಷೋತ್ತಮಾನಂದನಾಥ ಸ್ವಾಮಿಜಿ ಸಾನಿಧ್ಯ ವಹಿಸಲಿದ್ದಾರೆ’ ಎಂದು ಸುದ್ದಿಗೋಷ್ಠಿಯಲ್ಲಿ ಸೋಮವಾರ ತಿಳಿಸಿದರು.
ಮಾಜಿ ಶಾಸಕ ಜಿ.ಬಿ.ಶಿವಕುಮಾರ್ ಅಧ್ಯಕ್ಷತೆ ವಹಿಸಲಿದ್ದು, ಕೈಗಾರಿಕೋದ್ಯಮಿ ಸುರೇಶ್ ಬಾಬು ಅವರು ವಿದ್ಯಾರ್ಥಿ ಪುರಸ್ಕಾರ ಪ್ರದಾನ ಮಾಡುವರು. ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ಅವರು ಮೈಸೂರು ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕಿ ಕೆ.ಸಿ.ದಿವ್ಯಶ್ರೀ, ಮಂಡ್ಯ ಇಎನ್‌ಟಿ ತಜ್ಞವೈದ್ಯ ಡಾ.ಸಿ.ನಿಂಗಯ್ಯ ಹಾಗೂ ಪೌರಕಾರ್ಮಿಕ ಮಹದೇವ ಅವರನ್ನು ಸನ್ಮಾನಿಸುವರು ಎಂದರು.
‘ವೃತ್ತಿಪರ ವಿಭಾಗದ ಪ್ರತಿಭಾವಂತ ವಿದ್ಯಾರ್ಥಿಗಳಾದ ಮಂಡ್ಯ ತಾಲ್ಲೂಕಿನ ತಂಡಸನಹಳ್ಳಿ ಟಿ.ಬಿ.ಮೋಹನ್‌ಗೌಡ(ವೈದ್ಯಕೀಯ ಶಿಕ್ಷಣ), ಚಿಕ್ಕಬಳ್ಳಾಪುರದ ಮಲ್ಲಿಶೆಟ್ಟಿಹಳ್ಳಿ ಎಂ.ಡಿ.ಚೇತನ್‌ಗೌಡ(ಪಶುವೈದ್ಯಕೀಯ ಶಿಕ್ಷಣ), ಕೆ.ಆರ್.ಪೇಟೆ ತಾಲ್ಲೂಕಿನ ಸಿದ್ಧಾಪುರ ಗ್ರಾಮದ ಎಸ್.ಡಿ.ಪೂಜಾ (ತಾಂತ್ರಿಕ ಶಿಕ್ಷಣ), ಬೆಳಗಾವಿ ಜಿಲ್ಲೆಯ ಮೋಳವಾಡ ಗ್ರಾಮದ ಐಶ್ವರ್ಯ ರಾಜೇಂದ್ರ ಬಮನಾಳೆ(ಬಿ.ಎಸ್ಸಿ ಹಾನರ್ಸ್, ಕೃಷಿ) ಅವರಿಗೆ ತಲಾ ₹ 20 ಸಾವಿರ ನಗದು ವಿದ್ಯಾರ್ಥಿ ಪುರಸ್ಕಾರ ನೀಡಲಾಗುವುದು’ ಎಂದರು.
‘ನಮ್ಮ ಜಿಲ್ಲೆಯ ದೊಡ್ಡಗರುಡನಹಳ್ಳಿ ಸರ್ಕಾರಿ ಪ್ರೌಢಶಾಲೆಯ ಡಿ.ಎಸ್.ಅಶ್ವತಿ, ಬಸರಾಳು ಕಾಲೇಜು ವಿಜ್ಞಾನ ವಿಭಾಗದ ಡಿ.ಕೆ.ಅನುಷಾ, ವಾಣಿಜ್ಯ ವಿಭಾಗದ ಸಿ.ಎಂ.ಮೋನಿಕಾ, ಕಲಾವಿಭಾಗದ ಡಿ.ಎಸ್.ಶ್ವೇತಾ ಎಂಬುವವರಿಗೆ ತಲಾ ₹ 5 ಸಾವಿರ ವಿದ್ಯಾರ್ಥಿ ಪುರಸ್ಕಾರ ನೀಡಲಾಗುವುದು’ ಎಂದರು.
ಕವನ ಸಂಕಲನ ಬಿಡುಗಡೆ: ‘ಕರ್ನಾಟಕ ಸಂಘದ ಸಹಯೋಗದಲ್ಲಿ ಸೆ.21 ರಂದು ಸಂಜೆ 5 ಗಂಟೆಗೆ ನಗರದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಕವನ ಸಂಕಲನಗಳ ಬಿಡುಗಡೆ ಸಮಾರಂಭ ಜರುಗಲಿದ್ದು, ಸಾಹಿತಿ ಡಾ.ಎಚ್.ಎಸ್.ಮುದ್ದೇಗೌಡ ಅಧ್ಯಕ್ಷತೆ ವಹಿಸುವರು’ ಎಂದರು.
‘ಸಂತೆಕಸಲಗೆರೆ ಪ್ರಕಾಶ್ ಅವರ ‘ಕಾಲನ ಸುಳಿಗೆ ಸಿಲುಕಿದ ಕಾಲ’ ಹಾಗೂ ಎಂ.ಯು.ಶ್ವೇತಾ ಅವರ ‘ಅಗ್ನಿಕುಸುಮ’ ಕವನ ಸಂಕಲನಗಳನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಬಿ.ವಿ.ವಸಂತಕುಮಾರ್ ಬಿಡುಗಡೆ ಮಾಡಲಿದ್ದು, ನಾಟಕಕಾರ ಡಾ.ರಾಜಪ್ಪದಳವಾಯಿ ಅವರು ಕವನ ಸಂಕಲನ ಕುರಿತು ಮಾತನಾಡುವರು’ಎಂದರು.
ಕರ್ನಾಟಕ ಸಂಘದ ಕಾರ್ಯದರ್ಶಿ ಪಿ.ಲೋಕೇಶ್ ಚಂದಗಾಲು, ಮಾಜಿ ಶಾಸಕ ಜಿ.ಬಿ.ಶಿವಕುಮಾರ್, ಯೋಧ ಆರ್.ಲೋಕೇಶ್ ಪಟೇಲ್ ಜೆ.ರಾಜಶೇಖರಯ್ಯ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.