ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣೆ ನಂತರ ವಿಜಯೇಂದ್ರ ಸ್ಥಾನಕ್ಕೆ ಚ್ಯುತಿ: ಎಂ.ಬಿ.ಪಾಟೀಲ್‌

Published 19 ಏಪ್ರಿಲ್ 2024, 14:23 IST
Last Updated 19 ಏಪ್ರಿಲ್ 2024, 14:23 IST
ಅಕ್ಷರ ಗಾತ್ರ

ಮಂಡ್ಯ: ‘ಲಿಂಗಾಯತರ ಮತ ಪಡೆಯಲೆಂದೇ ಬಿ.ವೈ.ವಿಜಯೇಂದ್ರ ಅವರನ್ನು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಲೋಕಸಭೆ ಚುನಾವಣೆ ನಂತರ ಅವರನ್ನು ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಸುವುದಿಲ್ಲ’ ಎಂದು ಕೈಗಾರಿಕೆ ಮತ್ತು ಮೂಲ ಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ ಶುಕ್ರವಾರ ಪ್ರತಿಪಾದಿಸಿದರು.

ನಗರದಲ್ಲಿ ನಡೆದ ಲಿಂಗಾಯತ ಮುಖಂಡರ ಸಭೆಯಲ್ಲಿ ಮಾತನಾಡಿ, ‘2008ರಲ್ಲಿ ಎಚ್‌.ಡಿ.ಕುಮಾರಸ್ವಾಮಿ ಅವರು 20 ತಿಂಗಳ ಮುಖ್ಯಮಂತ್ರಿ ಅವಧಿ ಮುಗಿಸಿದ ನಂತರ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಅಧಿಕಾರ ಹಸ್ತಾಂತರಿಸಬೇಕಿತ್ತು. ಆದರೆ ಮಾತು ತಪ್ಪಿದ ಜೆಡಿಎಸ್‌, ಯಡಿಯೂರಪ್ಪ ಮುಖ್ಯಮಂತ್ರಿಯಾಗುವುದನ್ನು ತಪ್ಪಿಸಿದರು. ಲಿಂಗಾಯತರು ಇದನ್ನು ಅರಿತುಕೊಳ್ಳಬೇಕು’ ಎಂದರು.

‘ಯಡಿಯೂರಪ್ಪ ಅವರನ್ನು ಬಿಜೆಪಿ 2 ಬಾರಿ ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸಿದೆ. ಹೀಗಾಗಿಯೇ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋಲಬೇಕಾಯಿತು. ಬಿಜೆಪಿ ನಾಯಕ ಬಿ.ಎಲ್‌.ಸಂತೋಷ್ ಅವರು ಲಿಂಗಾಯತ ನಾಯಕತ್ವವನ್ನು ಮುಗಿಸಲು ಹೊರಟಿದ್ದು, ಯಡಿಯೂರಪ್ಪ ಅವರನ್ನು ತುಳಿದಿದ್ದಾರೆ. ಕಾಂಗ್ರೆಸ್‌ ಪಕ್ಷದಿಂದ ಮಾತ್ರ ಸಮುದಾಯದ ಹಿತ ಕಾಯಲು ಸಾಧ್ಯ’ ಎಂದರು.

‘ಬಸವಣ್ಣ, ಅಂಬೇಡ್ಕರ್‌ ಅವರ ಸಿದ್ಧಾಂತ, ಸಂವಿಧಾನದ ತತ್ವಗಳನ್ನು ಬಿಜೆಪಿ ಒಪ್ಪುವುದಿಲ್ಲ. ರಾಜ್ಯದ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನವರ ಭಾವಚಿತ್ರ ಹಾಕಲು ಆದೇಶಿಸಿದ್ದು, ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದ್ದು ಕಾಂಗ್ರೆಸ್‌ ಸರ್ಕಾರ ಎಂಬುದನ್ನು ಲಿಂಗಾಯತ ಸಮುದಾಯ ಅರ್ಥ ಮಾಡಿಕೊಳ್ಳಬೇಕು. ಬಿಜೆಪಿ ನಾಯಕರು ಬಸವಣ್ಣನವರ ಕಾಯಕ, ದಾಸೋಹ ತತ್ವಗಳನ್ನು ಒಪ್ಪುವುದಿಲ್ಲ’ ಎಂದರು.

ಇದೇ ಸಂದರ್ಭದಲ್ಲಿ ಹಲವು ಲಿಂಗಾಯತ ಸಮುದಾಯದ ಮುಖಂಡರು ಬಿಜೆಪಿ, ಜೆಡಿಎಸ್ ತ್ಯಜಿಸಿ ಕಾಂಗ್ರೆಸ್‌ ಪಕ್ಷ ಸೇರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT