ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯದಲ್ಲಿ ಪ್ರತಿಭಟನೆಗಷ್ಟೇ ಸೀಮಿತವಾದ ಭಾರತ್‌ ಬಂದ್‌

ಜನಜೀವನದ ಮೇಲೆ ಪ್ರಭಾವ ಬೀರದ ಹೋರಾಟ, ವಿವಿಧ ಸಂಘಟನೆಗಳಿಂದ ಮೆರವಣಿಗೆ
Last Updated 8 ಡಿಸೆಂಬರ್ 2020, 12:34 IST
ಅಕ್ಷರ ಗಾತ್ರ

ಮಂಡ್ಯ: ರೈತ, ಕಾರ್ಮಿಕ ವಿರೋಧಿ ಕಾಯ್ದೆಗಳ ತಿದ್ದುಪಡಿ ಖಂಡಿಸಿ ಮಂಗಳವಾರ ಕರೆ ನೀಡಿದ್ದ ಭಾರತ ಬಂದ್‌ಗೆ ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ವಿವಿಧ ಸಂಘಟನೆಗಳ ಮುಖಂಡರ ಪ್ರತಿಭಟನೆಗಷ್ಟೇ ಬಂದ್‌ ಸೀಮಿತವಾಗಿತ್ತು. ಜನಜೀವನ ಎಂದಿನಂತಿತ್ತು.

ಬೆಳಿಗ್ಗೆ, ಬಂದ್‌ ತೀವ್ರತೆ ಪಡೆಯಬಹುದು ಎಂಬ ನಿರೀಕ್ಷೆ ಇತ್ತು, ಆದರೆ ಬೆಳಿಗ್ಗೆ 10–11 ಗಂಟೆಯಾಗುತ್ತಲೇ ಯಾವುದೇ ಬಂದ್‌ನ ವಾತಾವರಣ ಕಂಡುಬರಲಿಲ್ಲ. ಹೋಟೆಲ್‌, ಅಂಗಟಿ ಮುಂಗಟ್ಟು, ದಿನಸಿ ಅಂಗಡಿಗಳು ತೆರೆದಿದ್ದವು. ಬೀದಿ ಬದಿ ವ್ಯಾಪಾರಿಗಳು ಎಂದಿನಂತೆ ವ್ಯಾಪಾರ ನಡೆಸಿದರು. ನಗರದ ಪೇಟೆ ಬೀದಿ, ಆರ್‌ಪಿ ರಸ್ತೆ, ವಿವಿ ರಸ್ತೆಗಳಲ್ಲಿ ಅಂಗಡಿಗಳು ತೆರದಿದ್ದವು.

ಬಿಗ್‌ ಬಜಾರ್‌, ಮೋರ್‌, ರಿಲಯನ್ಸ್‌, ಬಾಟಾ ಶೋರೂಂಗಳು ಬೆಳಿಗ್ಗೆಯೇ ತೆರೆದಿದ್ದವು. ಪ್ರತಿಭಟನಾಕಾರರು ಬರಬಹುದು ಎಂಬ ಕಾರಣಕ್ಕೆ ಒಂದೇ ಬಾಗಿಲು ತೆಗೆದು ವಹಿವಾಟು ನಡೆಸುತ್ತಿದ್ದರು. ಬಂದ್‌ನ ತೀವ್ರತೆ ಹೆಚ್ಚಾಗದ ಕಾರಣ ಎಂದಿನಂತೆ ವಹಿವಾಟು ಮುಂದುವರಿಸಿದರು. ಬಸ್‌ಗಳು, ಆಟೊ ಸಂಚಾರಕ್ಕೆ ತಡೆ ಇರಲಿಲ್ಲ. ಸರ್ಕಾರಿ ಕಚೇರಿ, ಬ್ಯಾಂಕ್‌, ಸರ್ಕಾರಿ, ಖಾಸಗಿ ಕಾಲೇಜುಗಳು ಎಂದಿನಂತೆ ತೆರೆದಿದ್ದವು.

ಗ್ರಾಮಾಂತರ ಪ್ರದೇಶಗಳಿಗೆ ಬಸ್‌ ಸಂಪರ್ಕ ಇರಲಿಲ್ಲ. ತಾಲ್ಲೂಕು ಕೇಂದ್ರಗಳಿಗೆ ಬಸ್‌ ಸಂಚಾರ ಎಂದಿನಂತಿತ್ತು. ಬಸ್‌ ನಿಲ್ದಾಣದಲ್ಲಿ ಪ್ರತಿಭಟನಾಕಾರರಿಂದ ವಿರೋಧ ವ್ಯಕ್ತವಾಗಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಯಾರೂ ಬಸ್‌ ನಿಲ್ದಾಣಗಳತ್ತ ಸುಳಿಯದ ಕಾರಣ ಎಂದಿನಂತೆ ಬಸ್‌ಗಳು ಸಂಚರಿಸಿದವು. ಮಂಡ್ಯ ವಿಭಾಗದ ಕೆಲವೊಂದು ಘಟಕಗಳಲ್ಲಿ ಬೆಳಿಗ್ಗೆ ಬಸ್‌ಗಳ ರಸ್ತೆಗಿಳಿಯಲಿಲ್ಲ. ಪರಿಸ್ಥಿತಿ, ಪ್ರಯಾಣಿಕರ ಲಭ್ಯತೆ ಮೇಲೆ ಬಸ್‌ಗಳನ್ನು ಬಿಡಲಾಯಿತು.

ಕೆಲಹೊತ್ತು ರಸ್ತೆ ತಡೆ: ದಲಿತ, ರೈತ ಮತ್ತು ಕಾರ್ಮಿಕ ಸಂಘಟನೆಗಳ ಐಕ್ಯ ಹೋರಾಟ ಸಮಿತಿ, ಅಖಿಲ ಭಾರತ ರೈತ ಹೋರಾಟಗಳ ಸಮನ್ವಯ ಸಮಿತಿ, ಎಲ್ಲಾ ಪ್ರಗತಿಪರ, ಜನಪರ, ಕನ್ನಡ ಪರ ಸಂಘಟನೆಗಳ ಸದಸ್ಯರು ನಗರದ ಸಿಲ್ವರ್‌ ಜ್ಯೂಬಿಲಿ ಪಾರ್ಕ್‌ನಿಂದ ಜಯಚಾಮರಾಜ ವೃತ್ತದ ವರೆಗೆ ಮೆರವಣಿಗೆ ನಡೆಸಿದರು. ಕೆಲಕಾಲ ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.

ವಾಹನ ಸಂಚಾರಕ್ಕೆ ತಡೆಯಾಗದಂತೆ ಪ್ರತಿಭಟನೆ ನಡೆಸಲು ಪೊಲೀಸರು ಅವಕಾಶ ಮಾಡಿಕೊಟ್ಟಿದ್ದರು. ಜೆಸಿ ವೃತ್ತದಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿತ್ತು. ನಂತರ ಜಿಲ್ಲಾಧಿಕಾರಿ ಕಚೇರಿವರೆಗೆ ತೆರಳಿ ಮನವಿ ಸಲ್ಲಿಸಿದರು.

ಸುಗ್ರೀವಾಜ್ಞೆ ಮೂಲಕ ಕೇಂದ್ರ, ರಾಜ್ಯ ಸರ್ಕಾರಗಳು ಜನವಿರೋಧಿ ನೀತಿಗಳನ್ನು ಒತ್ತಾಯಪೂರ್ವಕವಾಗಿ ಹೇರಲು ಮುಂದಾಗಿದೆ. ಕೂಡಲೇ ಎಪಿಎಂಸಿ ಕಾಯ್ದೆ ತಿದ್ದುಪಡಿ ಕೈ ಬಿಡಬೇಕು. ಸ್ವಾಮಿನಾಥನ್‌ ವರದಿ ಜಾರಿಗೆ ತಂದು ರೈತರ ಬೆಳೆಗಳಿಗೆ ನ್ಯಾಯಯುತ ಬೆಲೆ ಒದಗಿಸಬೇಕು. ಕಾರ್ಮಿಕರ ಪರವಾದ ಕಾಯ್ದೆಗಳನ್ನು ಜಾರಿಗೆ ತರಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎ.ಎಲ್‌.ಕೆಂಪೂಗೌಡ, ರೈತ ನಾಯಕರಾದ ಸುನಂದಾಜಯರಾಂ, ಸುಧೀರ್‌ಕುಮಾರ್‌, ಬೋರಾಪುರ ಶಂಕರೇಗೌಡ, ಅರುಣೋದಯ ಕಲಾ ತಂಡದ ಮಂಜುಳಾ, ಸಿಐಟಿಯು ಪ್ರಧಾನ ಕಾರ್ಯದರ್ಶಿ ಸಿ.ಕುಮಾರಿ, ಕರ್ನಾಟಕ ಜನಶಕ್ತಿ ಸಂಘಟನೆಯ ಕಾರ್ಯದರ್ಶಿ ಎಂ.ಸಿದ್ದರಾಜು, ರಮ್ಯಾ, ಭಾರತಿ, ಉಮಾ, ಜಯಶೀಲಾ, ಮಹಿಳಾ ಮುನ್ನಡೆಯ ಕಮಲಾ ಸೇರಿದಂತೆ ಇದ್ದರು.

ಕೇಂದ್ರ ಸರ್ಕಾರ ನೀತಿ ಖಂಡಿಸಿ ರಾಜ್ಯ ರೈತ ಸಂಘದ ಹೆಮ್ಮಿಗೆ ಚಂದ್ರಶೇಖರ್‌ ಸೇರಿದಂತೆ ಕೆಲ ರೈತರು ಜಯಚಾಮರಾಜ ವೃತ್ತದಲ್ಲಿ ಚಾಪೆ ಹಾಕಿ ಮಲಗಿ ಪ್ರತಿಭಟನೆ ನಡೆಸಲು ಯತ್ನಿಸಿದರು. ಇದಕ್ಕೆ ಆಸ್ಪದ ನೀಡದ ಪೊಲೀಸರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಜಿಲ್ಲಾಧಿಕಾರಿ ಕಚೇರಿ ಬಳಿ ಬಿಎಸ್‌ಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು. ಅಖಿಲಭಾರತ ವಕೀಲರ ಒಕ್ಕೂಟದ ಸದಸ್ಯರು ‍ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್‌ ಸಾಂಕೇತಿಕ ಪ್ರತಿಭಟನೆ

ಭಾರತ್‌ ಬಂದ್‌ಗೆ ನೈತಿಕ ಬೆಂಬಲ ವ್ಯಕ್ತ ಪಡಿಸಿದ ಕಾಂಗ್ರೆಸ್‌ ಜಿಲ್ಲಾ ಘಟಕದ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಬಳಿ ಸಾಂಕೇತಿಕ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.

ಇದಕ್ಕೂ ಮುನ್ನಾ ಪತ್ರಿಕಾಗೊಷ್ಠಿ ನಡೆಸಿದ ಕಾಂಗ್ರೆಸ್‌ ನಾಯಕರು, ರೈತರು ತೀವ್ರ ಹೋರಾಟ ನಡೆಸುತ್ತಿದ್ದರೂ ಸರ್ಕಾರ ಕಾಯ್ದೆಗಳ ತಿದ್ದುಪಡಿ ವಾಪಸ್‌ ಪಡೆದಿಲ್ಲ. 22 ಬೆಳೆಗಳ ಬೆಂಬಲ ಬೆಲೆಯನ್ನು 14 ಬೆಳೆಗಳಿಗೆ ಮಾತ್ರ ನೀಡಲಾಗುತ್ತಿದೆ. ಅಲ್ಲದೆ ರೈತರಿಗೆ ನೀಡುವ ಸಾಲದ ಬಡ್ಡಿಯನ್ನು ಏರಿಕೆ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮುಖಂಡ ಎಂ.ಎಸ್‌.ಆತ್ಮಾನಂದ, ಜಿಲ್ಲಾ ಘಟಕದ ಅಧ್ಯಕ್ಷ ಸಿ.ಡಿ.ಗಂಗಾಧರ್‌, ಕಿಸಾನ್‌ ಘಟಕದ ಅಧ್ಯಕ್ಷ ಆರ್‌.ಮೋಹನ್‌ಕುಮಾರ್‌, ಮಹಿಳಾ ಘಟಕದ ಅಧ್ಯಕ್ಷೆ ಅಂಜನಾ ಶ್ರೀಕಾಂತ್‌, ಸಿದ್ದರಾಮೇಗೌಡ, ಎಂ.ಎಸ್‌. ಚಿದಂಬರ್‌ ಇದ್ದರು.

ರೈತರನ್ನು ದಾರಿ ತಪ್ಪಿಸುವ ಯತ್ನ

‘ರೈತರನ್ನು ದಾರಿ ತಪ್ಪಿಸುವ ಉದ್ದೇಶದಿಂದ ಅನಗತ್ಯ ಬಂದ್‌ ಮಾಡಲಾಗುತ್ತಿದೆ. ರೈತರನ್ನು ಕಮಿಷನ್‌ ಏಜೆಂಟ್‌ಗಳಿಂದ ಕಾಪಾಡುವ ಉದ್ದೇಶದಿಂದ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತರಲಾಗಿದೆ’ ಎಂದು ಬಿಜೆಪಿ ಜಿಲ್ಲಾಘಟಕದ ಅಧ್ಯಕ್ಷ ಕೆ.ಜೆ. ವಿಜಯ್‌ಕುಮಾರ್‌ ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ಕೇಂದ್ರ ಸರ್ಕಾರ ಕೃಷಿ ಕ್ಷೇತ್ರದಲ್ಲಿನ ಸುಧಾರಣೆಯ ದೂರದೃಷ್ಟಿತ್ವದಿಂದ ಅನೇಕ ಯೋಜನೆಗಳನ್ನು ರೂಪಿಸಿದೆ. ರೈತರ ಆದಾಯವನ್ನು 2022ರೊಳಗೆ ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಹಲವು ಕಾಯ್ದೆ ರೂಪಿಸಲಾಗಿದೆ’ ಎಂದರು.

ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯ ಡಾ.ಸಿದ್ದರಾಮಯ್ಯ, ಮುಖಂಡರಾದ ಕೆ.ಎಸ್‌.ನಂಜುಂಡೇಗೌಡ, ಜೋಗೀಗೌಡ, ಕೆ.ಕಾಳೇಗೌಡ, ಎಚ್‌.ಆರ್‌.ಬಸವರಾಜು, ಎಚ್‌.ಪಿ.ಮಹೇಶ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT