ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿನಿಯ ಯತ್ನಕ್ಕೆ ಎಲ್ಲೆಡೆ ಮೆಚ್ಚುಗೆ, 'ಐರನ್ ಲೇಡಿ' ಎಂದ ನೆಟ್ಟಿಗರು

ದಾಳಿ ಯತ್ನವನ್ನು ಧೈರ್ಯದಿಂದ ಎದುರಿಸಿದೆ: ಬೀಬಿ ಮುಸ್ಕಾನ್ ಖಾನ್
Last Updated 9 ಫೆಬ್ರುವರಿ 2022, 14:00 IST
ಅಕ್ಷರ ಗಾತ್ರ

ಮಂಡ್ಯ:'ಕೇಸರಿ ಶಾಲು ಧರಿಸಿದ್ದ ನೂರಾರು ವಿದ್ಯಾರ್ಥಿಗಳು ನನ್ನ ಮೇಲೆ ದಾಳಿ ಮಾಡಲು ಯತ್ನಿಸಿದರು. ಅಲ್ಲಾಹು ಅಕ್ಬರ್ ಘೋಷಣೆ ಕೂಗಿ ಆ ಪರಿಸ್ಥಿತಿಯನ್ನು ಧೈರ್ಯದಿಂದ ಎದುರಿಸಿದೆ' ಎಂದು ಬೀಬಿ ಮುಸ್ಕಾನ್ ಖಾನ್ ಬುಧವಾರ ಹೇಳಿದರು.

ನಗರದ ಪಿಇಎಸ್ ಪದವಿ ಕಾಲೇಜಿನಲ್ಲಿ 2ನೇ ಬಿ.ಕಾಂ ಓದುತ್ತಿರುವ ಅವರು ಮಂಗಳವಾರ ಕೇಸರಿ ಶಾಲು ಧರಿಸಿ ಜೈ ಶ್ರೀರಾಮ್ ಕೂಗುತ್ತಿದ್ದ ವಿದ್ಯಾರ್ಥಿಗಳ ಎದುರು ಅಲ್ಲಾಹು ಅಕ್ಬರ್ ಘೋಷಣೆ ಕೂಗಿ ಧೈರ್ಯ ಪ್ರದರ್ಶನ ಮಾಡಿದ್ದರು. ಆ ಕುರಿತ ವಿಡಿಯೊ ದೇಶದಾದ್ಯಂತ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

' ಹಿಜಾಬ್, ಬುರ್ಖಾ ಧರಿಸಿದ್ದ ನಾಲ್ಕೈದು ವಿದ್ಯಾರ್ಥಿನಿಯರು ನನಗಿಂತಲೂ ಮೊದಲೇ ಕಾಲೇಜಿಗೆ ಬಂದಿದ್ದರು. ಆಗಲೂ ಕೇಸರಿ ಶಾಲು ಧರಿಸಿದ್ದವರು ದಾಳಿ ನಡೆಸಲು ಮುಂದಾಗಿದ್ದರು. ವಿದ್ಯಾರ್ಥಿನಿಯರು ಅಳುತ್ತಾ ತರಗತಿಗೆ ತೆರಳಿದ್ದರು. ಆದರೆ ನಾನು ಆ ಸಂದರ್ಭದಲ್ಲಿ ಒಂಟಿಯಾಗಿ ಪ್ರತಿರೋಧ ವ್ಯಕ್ತಪಡಿಸಿದೆ. ತಕ್ಷಣ ನನ್ನ ಬಾಯಿಯಿಂದ ದೇವರ ಶಬ್ಧಗಳು ಬಂದವು' ಎಂದರು.

'ಅಸೈನ್‌ಮೆಂಟ್ ಸಲ್ಲಿಸಲು ನಾನು ಕಾಲೇಜಿಗೆ ಬಂದಿದ್ದೆ. ಪ್ರತಿದಿನ ಬರುವಂತೆಯೇ ನಾನು ಬುರ್ಖಾ, ಹಿಜಾಬ್ ಧರಿಸಿ ಬಂದಿದ್ದೆ. ಈ ರೀತಿ ಸಂದರ್ಭ ಬರಲಿದೆ ಎಂಬುದನ್ನು ನಾನು ಎಣಿಸಿರಲಿಲ್ಲ.‌ ನೂರಾರು ವಿದ್ಯಾರ್ಥಿಗಳು ನನ್ನ ಹಿಂದೆ ಓಡಿ ಬಂದಾಗ ನಮ್ಮ ಉಪನ್ಯಾಸಕರು, ಕಾಲೇಜು ಸಿಬ್ಬಂದಿ ನನ್ನನ್ನು ರಕ್ಷಣೆ ಮಾಡಿದರು' ಎಂದರು.

'ನಾನು ಕಾಲೇಜು ಗೇಟ್‌ಗೆ ಬಂದಾಗ ವಿದ್ಯಾರ್ಥಿಗಳು ತಡೆದರು. 'ಒಳಗೆ ಹೋಗಬೇಕಾದರೆ ಬುರ್ಖಾ ತೆಗಿ, ಇಲ್ಲವೆಂದರೆ ಒಳಗೆ ಹೊಗಬೇಡ, ಬುರ್ಖಾ ತೆಗೆಯಲಿಲ್ಲ ಎಂದರೆ ವಾಪಸ್ ಹೋಗು'ಎಂದು ತಾಕೀತು ಮಾಡಿದರು. ಅದನ್ನೂ ಎದುರಿಸಿ ನಾನು ಒಳಗೆ ಬಂದೆ ಎಂದರು.

'ನನ್ನ ಕಿವಿಯತ್ತ ಬಂದು ಜೈ ಶ್ರೀರಾಮ್ ಎಂದು ಕೂಗಿದರು. ನನ್ನನ್ನು ರಕ್ಷಿಸಿಕೊಳ್ಳಲು ಅಲ್ಲಾಹು ಅಕ್ಬರ್ ಎಂದೆ. ಭಾರತ ಹಲವು ರಾಜ್ಯಗಳ ಒಕ್ಕೂಟ. ಹಲವು ಧರ್ಮಗಳಿದ್ದು ಎಲ್ಲಾ ಧರ್ಮಗಳಿಗೂ ಧರ್ಮ ಸ್ವಾತಂತ್ರ್ಯವಿದೆ. ಬುರ್ಖಾ, ಹಿಜಾಬ್ ಧರಿಸುವುದು ನಮ್ಮ ಸ್ವಾತಂತ್ರ್ಯ, ಅದನ್ನು ಆಚರಿಸಲು ಬಿಡಬೇಕು' ಎಂದರು.

ಮೆಚ್ಚುಗೆ: ಸೂಕ್ಷ್ಮ ಸಂದರ್ಭವನ್ನು‌ ಪರಿಣಾಮಕಾರಿಯಾಗಿ ಎದುರಿಸಿದ ಬೀಬಿ ಮುಸ್ಕಾನ್ ಖಾನ್ ಪ್ರಯತ್ನಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಆಕೆಯನ್ನು 'ಐರನ್ ಲೇಡಿ' ಎಂದು ಸಂದೇಶ‌ ಪ್ರಕಟಿಸಿದ್ದಾರೆ.

₹ 5 ಲಕ್ಷ ಬಹುಮಾನ?: ವಿದ್ಯಾರ್ಥಿನಿಯ ಪ್ರತಿರೋಧಕ್ಕೆ ಮೆಚ್ಚುಗೆ ವ್ಯಕ್ತಪಡಿಸಿರುವ ಮುಸ್ಲಿಂ‌ ಸಂಘಟನೆಗಳು ಆಕೆ ₹ 5 ಲಕ್ಷ ಬಹುಮಾನ ಘೋಷಣೆ ಮಾಡಿವೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಇದಕ್ಕೆ ಪ್ರತಿಕ್ರಿಯಿಸಿದ ಬೀಬಿ ಮುಸ್ಕಾನ್‌ ಖಾನ್ 'ಆ ವಿಷಯ ನನಗೆ ಗೊತ್ತಿಲ್ಲ, ಅದರ ಬಗ್ಗೆ ಯಾರೂ ನನಗೆ ತಿಳಿಸಿಲ್ಲ' ಎಂದರು.

ವಿದ್ಯಾರ್ಥಿನಿಯರ ಪ್ರತಿಭಟನೆಗೆ ತಡೆ:ಪಿಇಎಸ್ ಕಾಲೇಜಿನಲ್ಲಿ ಕೇಸರಿ ಶಾಲು ಧರಿಸಿದ್ದ ವಿದ್ಯಾರ್ಥಿಗಳ ಪ್ರತಿಭಟನೆಗೆ ಪ್ರತಿಯಾಗಿ ಬುರ್ಖಾ, ಹಿಜಾಬ್ ಧರಿಸಿದ್ದ 10ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಪ್ರತಿಭಟಿಸಲು ನಿರ್ಧರಿಸಿದ್ದರು. ಆದರೆ, ಅವರನ್ನು ಉಪನ್ಯಾಸಕರು ತಡೆದರು.‌ ತರಗತಿಯೊಳಗೆ ಕೂರಿಸಿ ಅವರನ್ನು ಹೊರಗೆ ಬಿಡಲಿಲ್ಲ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT