ಭಾನುವಾರ, ಜನವರಿ 17, 2021
20 °C
‘ಜನ ಸೇವಕ’ ಸಮಾವೇಶದಲ್ಲಿ ನಳಿನ್‌ ಕುಮಾರ್ ಕಟೀಲ್‌ ಜೆಡಿಎಸ್‌, ಕಾಂಗ್ರೆಸ್‌ ವಿರುದ್ಧ ಆಕ್ರೋಶ

ಮಂಡ್ಯದಲ್ಲಿ ಗೂಂಡಾ ರಾಜಕಾರಣಕ್ಕೆ ಮುಕ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಡ್ಯ: ‘ಗೂಂಡಾಗಿರಿ, ಕುಟುಂಬ ರಾಜಕಾರಣಕ್ಕೆ ಹೆಸರುವಾಸಿಯಾಗಿದ್ದ ಮಂಡ್ಯ ಜಿಲ್ಲೆಯಲ್ಲಿ ಕೇಸರಿ ಪತಾಕೆ ಹಾರುತ್ತಿದೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಹಸಿರು ಬಣ್ಣ ಮಾಯವಾಗಿ ಕೇಸರಿ ಮೂಡಲಿದೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಹೇಳಿದರು.

ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆದ್ದ ಬಿಜೆಪಿ ಬೆಂಬಲಿತ ಸದಸ್ಯರನ್ನು ಸನ್ಮಾನಿಸಲು ಮಂಗಳವಾರ ಬಿಜಿಎಸ್‌ ಸಮುದಾಯ ಭವನದಲ್ಲಿ ಆಯೋಜಿಸಿದ್ದ ‘ಜನಸೇವಕ’ ಸಮಾವೇಶದದಲ್ಲಿ ಅವರು ಮಾತನಾಡಿದರು.

‘ನಾನು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷನಾದಾಗ ರಾಜ್ಯದ ಭೂಪಟ ನೋಡಿದೆ. ಎಲ್ಲೆಡೆ ಕೇಸರಿ ಬಣ್ಣವಿತ್ತು, ಆದರೆ ಮಂಡ್ಯ ಜಿಲ್ಲೆಯಲ್ಲಿ ಮಾತ್ರ ಹಸಿರು ಇತ್ತು. ಇಲ್ಲಿ ಬಿಜೆಪಿ ಗೆಲುವು ಸಾಧಿಸಲು ಸಾಧ್ಯವೇ ಇಲ್ಲ ಎಂಬ ಮಾತು ಕೇಳಿದ್ದೆ, ಆದರೆ ಈಗ ಅಂತಹ ಪರಿಸ್ಥಿತಿ ಇಲ್ಲ. ನಾರಾಯಣಗೌಡರು ಮಂಡ್ಯದಲ್ಲಿ ಕೇಸರಿ ಬಣ್ಣ ಚೆಲ್ಲಿದ್ದಾರೆ. ಶೀಘ್ರವೇ ಹಸಿರು ಬಣ್ಣ ಜಿಲ್ಲೆಯಿಂದ ಮಾಯವಾಗಲಿದೆ’ ಎಂದರು.

‘ರಾಜ್ಯ, ದೇಶದಲ್ಲಿ ಪರಿವರ್ತನೆಯ ಗಾಳಿ ಬೀಸಿದೆ. ಅಧಿಕಾರ ಇದ್ದಾಗ ದರ್ಪ, ಅಹಂಕಾರ, ಭ್ರಷ್ಟಾಚಾರ ನಡೆಸಿದ ಕಾಂಗ್ರೆಸ್‌ ಪಕ್ಷ ಅರಬ್ಬಿ ಸಮುದ್ರದಲ್ಲಿ ಮುಳುಗಿ ಹೋಗಲಿದೆ. ಕೇಂದ್ರದಲ್ಲಿ ನರೇಂದ್ರ ಮೋದಿ, ರಾಜ್ಯದಲ್ಲಿ ಬಿ.ಎಸ್‌.ಯಡಿಯೂರಪ್ಪ ಆದರ್ಶವಾಗಿದ್ದಾರೆ. ಒಂದೇ ಒಂದು ದಿನ ರಜೆ ಪಡೆಯದ ನರೇಂದ್ರ ಮೋದಿ ಅವರು ವಿಶ್ವದ ನಾಯಕರಾಗಿದ್ಧಾರೆ. ಇಡೀ ವಿಶ್ವ ಭಾರತದ ಕಡೆಗೆ ತಿರುಗಿ ನೋಡುವಂತೆ ಮಾಡಿದ್ದಾರೆ’ ಎಂದರು.

‘15ನೇ ಹಣಕಾಸು ಯೋಜನೆಯಡಿ ಕೇಂದ್ರ ಸರ್ಕಾರ ಪ್ರತಿ ಗ್ರಾಮ ಪಂಚಾಯಿತಿಗೆ ನೇರವಾಗಿ ₹ 1 ಕೋಟಿ ಅನುದಾನ ನೀಡಲಿದ್ದಾರೆ. ಉದ್ಯೋಗ ಖಾತ್ರಿ ಅಡಿ ಅಪಾರ ಪ್ರಮಾಣದ ಹಣ ಗ್ರಾ.ಪಂಗಳಿಗೆ ಹರಿದು ಬರಲಿದೆ. ಮಹಿಳೆಯರ ಕಣ್ಣೀರು ಒರೆಸುವ ಕೆಲಸವನ್ನು ಬಿಜೆಪಿ ಸರ್ಕಾರ ಮಾಡುತ್ತಿದೆ. ಶೌಚಾಲಯ ನಿರ್ಮಾಣಕ್ಕಾಗಿ ಕೋಟ್ಯಂತರ ರೂಪಾಯಿ ಹಣ ಬಿಡುಗಡೆ ಮಾಡಿದೆ’ ಎಂದರು.

ಮೈಸೂರು ಸಂಸದ ಪ್ರತಾಪ್‌ ಸಿಂಹ ಮಾತನಾಡಿ ‘ಕೇಂದ್ರದಲ್ಲಿ ಬಿಜೆಪಿ ಸರ್ಕಾರ ರಚನೆಯಾದ ನಂತರ ರಾಜ್ಯದಲ್ಲೂ ಬಿಜೆಪಿ ಬರಬೇಕು ಎಂಬ ಆಸೆ ಇತ್ತು. ಅದಕ್ಕಾಗಿ ಹಲವು ಶಾಸಕರು ವಿವಿಧ ಪಕ್ಷ ತೊರೆದು ಬಿಜೆಪಿಗೆ ಬಂದರು. ರಾಜ್ಯದಲ್ಲೂ ಬಿಜೆಪಿ ಸರ್ಕಾರ ರಚನೆಯಾಗುವಂತೆ ಮಾಡಿದರು. ಬಿಜೆಪಿ ವಿಜಯಯಾತ್ರೆ ಮುಂದುವರಿಯಲಿದೆ. ತಾಲ್ಲೂಕು, ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲೂ ಜಯಭೇರಿ ಬಾರಿಸಲಿದೆ’ ಎಂದರು.

‘ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ರಾಜ್ಯದಾದ್ಯಂತ 45 ಸಾವಿರ ಬಿಜೆಪಿ ಬೆಂಬಲಿಗ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. 3,300 ಪಂಚಾಯಿತಿಗಳಲ್ಲಿ ನಮ್ಮ ಪಕ್ಷದ ಬೆಂಬಲಿಗರು ಅಧಿಕಾರ ಹಿಡಿಯಲಿದ್ದಾರೆ. ಮಂಡ್ಯ ಜಿಲ್ಲೆಯಲ್ಲೂ 900 ಮಂದಿ ಗೆಲುವು ಸಾಧಿಸಿದ್ದಾರೆ. ಇದು ನರೇಂದ್ರ ಮೋದಿ ಹಾಗೂ ಯಡಿಯೂರಪ್ಪ ಅವರ ನಾಯಕತ್ವಕ್ಕೆ ಸಿಕ್ಕ ಗೆಲುವಾಗಿದೆ’ ಎಂದರು.

ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌ ಮಾತನಾಡಿ ‘ಬಿಜೆಪಿ ಸರ್ಕಾರ ರಚನೆಗೆ ಸಹಾಯ ಮಾಡಿದ ಶಾಸಕರಿಗೆ ಮುಖ್ಯಮಂತ್ರಿಗಳು ಸಚಿವ ಸ್ಥಾನ ನೀಡಿ ನುಡಿದಂತೆ ನಡೆದುಕೊಂಡಿದ್ದಾರೆ. ನಾಳೆ, ನಾಡಿದ್ದು ನಡೆಯಲಿರುವ ಸಂಪುಟ ವಿಸ್ತರಣೆಯಲ್ಲಿ ನಮ್ಮ ಜೊತೆಗೆ ಬಿಜೆಪಿಗೆ ಬಂದ 2–3 ಶಾಸಕರಿಗೆ ಸಚಿವ ಸ್ಥಾನ ದೊರೆಯಲಿದೆ. ಕೋವಿಡ್‌ ಸಂದರ್ಭದಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ರಾಜ್ಯವನ್ನು ಮುನ್ನಡೆಸಿದ ರೀತಿ ಇಡೀ ದೇಶಕ್ಕೆ ಮಾದರಿಯಾಗಿದೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 150 ಸ್ಥಾನ ಗೆಲ್ಲುವುದು ಖಚಿತ’ ಎಂದರು.

ನೂತನ ಗ್ರಾಮ ಪಂಚಾಯಿತಿ ಸದಸ್ಯರಿಗೆ ಹೂವಿನ ಮಳೆ ಸುರಿಸುವ ಮೂಲಕ ಅಭಿನಂದಿಸಲಾಯಿತು. ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಅಶ್ವಥ್‌ ನಾರಾಯಣ್‌, ಉಪಾಧ್ಯಕ್ಷರಾದ ರಾಜೇಂದ್ರ, ಸೋಮಶೇಖರ್‌, ಎಸ್‌ಸಿ ಘಟಕದ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ, ರೈತ ಮೋರ್ಚಾ ಉಪಾಧ್ಯಕ್ಷ ಕೆ.ಎಸ್‌.ನಂಜುಂಡೇಗೌಡ, ಜಿಲ್ಲಾ ಘಟಕದ ಅಧ್ಯಕ್ಷ ಕೆ.ಜೆ.ವಿಜಯ್‌ಕುಮಾರ್‌, ಡಾ.ಸಿದ್ದರಾಮಯ್ಯ ಇದ್ದರು.

ಕಾಂಗ್ರೆಸ್‌ಗೆ ಗೋವು, ಗಾಂಧಿ ಶಾಪ
‘ಕಾಂಗ್ರೆಸ್‌ ಪಕ್ಷ ಗಾಂಧಿ, ಅಂಬೇಡ್ಕರ್‌ ಹಾಗೂ ಹಸು–ಕರು ಮೇಲೆ ರಾಜಕಾರಣ ಮಾಡಿದೆ. ಆದರೆ ಗಾಂಧಿ, ಅಂಬೇಡ್ಕರ್‌ ತತ್ವಗಳಿಗೆ ಅವಮಾನ ಮಾಡಿದೆ, ಗೋ ಹಂತಕರ ಪರ ನಿಂತಿದೆ. ಹೀಗಾಗಿ ಕಾಂಗ್ರೆಸ್‌ಗೆ ಗೋವು ಹಾಗೂ ಗಾಂಧಿಯ ಶಾಪ ತಟ್ಟಿದೆ’ ಎಂದು ನಳಿನ್‌ ಕುಮಾರ್‌ ಕಟೀಲ್‌ ಹೇಳಿದರು.

‘ಭಾರತ ಜಗದ್ಗುರುವಾಗಲಿದೆ ಎಂದು ಸ್ವಾಮಿ ವಿವೇಕಾನಂದ ಹೇಳಿದ್ದರು. ಅದರಂತೆ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಅದು ನಿಜವಾಗುತ್ತಿದೆ’ ಎಂದರು.

ನಾಲ್ಕು ಸ್ಥಾನ ಗೆಲ್ತೀವಿ: ಕೆಸಿಎನ್‌
‘ಮುಂದಿನ ವಿಧಾನಸಭಾ ಚನಾವಣೆಯಲ್ಲಿ ಮಂಡ್ಯ ಜಿಲ್ಲೆಯ ನಾಲ್ಕು ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸುವುದು ನಿಶ್ಚಿತ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ ಹೇಳಿದರು.

‘ಜಿಲ್ಲೆಯ ಮಗನಾದ ಬಿ.ವೈ.ವಿಜಯೇಂದ್ರ ಅವರ ನಾಯಕತ್ವದಲ್ಲೇ ಮುಂದಿನ ಚುನಾವಣೆ ನಡೆಯಲಿದೆ. ಬಿಜೆಪಿ ಮುಖಂಡರು ನಮಗೆ ಮಾರ್ಗದರ್ಶನ ಮಾಡಲಿದ್ದು ಅವರು ಹೇಳಿದ ಹಾದಿಯಲ್ಲಿ ನಡೆಯುತ್ತೇವೆ’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು