ಮಂಗಳವಾರ, ಸೆಪ್ಟೆಂಬರ್ 21, 2021
21 °C
ಕೃತಿ ಬಿಡುಗಡೆ ಸಮಾರಂಭದಲ್ಲಿ ಲೇಖಕ

ಜಾಲತಾಣ: ಮಾಹಿತಿಯ ಹಣತೆ ಹಚ್ಚೋಣ- ನಾಗತಿಹಳ್ಳಿ ಚಂದ್ರಶೇಖರ್‌ ಅಭಿಮತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಡ್ಯ: ‘ಸಾಮಾಜಿಕ ಜಾಲತಾಣಗಳನ್ನು ಇಂದು ಕೆಲವರು ಬೆಂಕಿ ಹಚ್ಚಲು ಬಳಸಿಕೊಳ್ಳುತ್ತಿದ್ದಾರೆ. ಆದರೆ ಇದರಿಂದ ಹಣತೆಯನ್ನೂ ಹಚ್ಚಬಹುದು, ಮಾಹಿತಿಯ ಆಗರವನ್ನಾಗಿ ಸದುಪಯೋಗ ಮಾಡಿಕೊಳ್ಳಬಹುದು’ ಎಂದು ಲೇಖಕ, ಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್‌ ಹೇಳಿದರು.

ಕರ್ನಾಟಕ ಸಂಘ, ಚಿರಂತ ಪ್ರಕಾಶನದ ವತಿಯಿಂದ ನಗರದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಭಾನುವಾರ ನಡೆದ ಡಾ.ಸುಮಾರಾಣಿ ಶಂಭು ಅವರ ಅಮೂರ್ತ, ಚಿತ್ತ ಲಹರಿ, ಜರ್ನಿ ಜಂಕ್ಷನ್‌ ಕೃತಿ ಬಿಡುಗಡೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

‘ಜಾಲತಾಣಗಳಲ್ಲಿ ದೊರೆಯುವ ಮಾಹಿತಿ ಜ್ಞಾನ ಅಲ್ಲದಿದ್ದರೂ ಅದು ನಮಗೆ ಮಾಹಿತಿ ಒದಗಿಸುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಜಾಲತಾಣಗಳಲ್ಲಿ ಸುಳ್ಳುಗಳನ್ನೇ ಹರಡಿಸುತ್ತಿದ್ದಾರೆ. ಕೋವಿಡ್‌ ಲಸಿಕೆ ಕುರಿತಾಗಿ ಹರಡಿಸಿದ ಸುಳ್ಳು ಸುದ್ದಿಗಳ ಪರಿಣಾಮವಾಗಿ ಈಗಲೂ ಕೆಲವು ಕಡೆ ಜನರು ಲಸಿಕೆ ಪಡೆಯಲು ಹಿಂಜರಿಯುತ್ತಿದ್ದಾರೆ. ಈಗಲೂ ನಮ್ಮ ದೇಶದ ಶೇ 25ರಷ್ಟು ಜನರು ಲಸಿಕೆ ಪಡೆಯಲು ಸಾಧ್ಯವಾಗಿಲ್ಲ’ ಎಂದರು.

‘ಸರ್ಕಾರವನ್ನು ಒಪ್ಪಿಕೊಳ್ಳುವುದು, ಬಿಡುವುದು ಬೇರೆ ವಿಷಯ. ಆದರೆ ರೋಗ, ಲಸಿಕೆಯನ್ನು ಒಪ್ಪಿಕೊಳ್ಳಲೇಬೇಕು. ಈ ನಿಟ್ಟಿನಲ್ಲಿ ಜಾಲತಾಣಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು. ಲೇಖಕಿ ಸುಮಾರಾಣಿ ಅವರು ತಮ್ಮ ಫೇಸ್‌ಬುಕ್‌ ಬರಹಗಳನ್ನು ಪುಸ್ತಕವಾಗಿ ಪ್ರಕಟಿಸುತ್ತಿರುವುದು ಸಂತೋಷದ ಸಂಗತಿ’ ಎಂದರು.

ಮಹಿಳಾ ಶಕ್ತಿ: ‘ಗ್ರಾಮೀಣ ಮಹಿಳೆಯರಲ್ಲಿ, ತಾಯಂದಿರಲ್ಲಿರುವ ಶಕ್ತಿ, ಸಾಮರ್ಥ್ಯವನ್ನು ಗುರುತಿಸುವ ಕೆಲಸವಾಗಬೇಕು. ಇಲ್ಲಿವರೆಗೂ ನಮ್ಮ ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಮಹಿಳೆಯ ಶಕ್ತಿ ಗುರುತಿಸುವ ಕೆಲಸ ಮಾಡಿಲ್ಲ. ವಿಕೇಂದ್ರೀಕರಣ ವ್ಯವಸ್ಥೆ ಬಂದ ನಂತರವಷ್ಟೇ ಮಹಿಳೆಗೆ ರಾಜಕೀಯವಾಗಿ ಸ್ಥಾನಮಾನ ಸಿಗುವಂತಾಗಿದೆ. ಮಹಿಳೆಗೆ ಎಲ್ಲವೂ ಸಾಧ್ಯ ಎಂಬುದನ್ನು ತೋರಿಸಿದ್ದಾಳೆ. ಸೈನ್ಯ, ವಿಜ್ಞಾನ, ಬಾಹ್ಯಾಕಾಶ, ತಂತ್ರಜ್ಞಾನ ಮುಂತಾದ ಕ್ಷೇತ್ರಗಳಲ್ಲಿ ತನ್ನ ಹೆಜ್ಜೆ ಗುರುತು ಮೂಡಿಸಿದ್ದಾಳೆ’ ಎಂದರು.

‘ಹೈನುಗಾರಿಕೆಯ ಮೂಲಕ ಮಹಿಳೆ ಕುಟುಂಬ ನಿರ್ವಹಣೆ ಮಾಡುತ್ತಿದ್ದಾಳೆ. ಇಡೀ ಸರ್ಕಾರಿ ಯೋಜನೆಗಳಲ್ಲಿ ವಾರಕ್ಕೊಮ್ಮೆ ಹಣ ಸಿಗುವುದು ಡೈರಿ ಉದ್ಯಮದಲ್ಲಿ ಮಾತ್ರ. ಕಬ್ಬು ಬೆಳೆದರೆ ವಾರಕ್ಕೆ ಹಣ ಸಿಗದು. ಹೈನುಗಾರಿಕೆಯ ಮೂಲಕ ಮಹಿಳೆ ಮಕ್ಕಳಿಗೆ ವಿದ್ಯಾಭ್ಯಾಸ ನೀಡುತ್ತಿದ್ದಾಳೆ. ಮಹಿಳೆಯ ಬಳಿ ಇರುವ ₹ 100 ಹಣ ₹ 1 ಸಾವಿರಕ್ಕೆ ಸಮ. ನಮ್ಮ ಸಮಾಜದಲ್ಲಿ ಮಹಿಳಾ ಕೇಂದ್ರಿತ ಬೈಗುಳಗಳೇ ರಾರಾಜಿಸುತ್ತಿದ್ದು ಇವುಗಳು ತೊಲಗಬೇಕು’ ಎಂದರು.

ಎಸ್‌.ಬಿ.ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಮೀರಾ ಶಿವಲಿಂಗಯ್ಯ ಮಾತನಾಡಿ ‘ವೈವಿಧ್ಯ, ನವೀನ, ಸೃಜನಶೀಲತೆ ಎಂಬುದು ಪ್ರತಿಯೊಬ್ಬ ಮನುಷ್ಯನಿಗೂ ಇರಬೇಕು. ಹೊಸ ಹೊಸ ವಿಚಾರಗಳ ತಿಳಿವಳಿಕೆ, ಜ್ಞಾನಸಂಪಾದನೆ ಮಾರ್ಗದಲ್ಲಿ ನಡೆಯಬೇಕು. ಅವಶ್ಯಕತೆಗಳಿಗೆ ಅನುಗುಣವಾಗಿ ಸಾಹಿತ್ಯವೂ ಬದಲಾಗುವಂತಿರಬೇಕು’ ಎಂದರು.

ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶಗೌಡ ಮಾತನಾಡಿ ‘ಪ್ರಸ್ತುತ ಸನ್ನಿವೇಶದಲ್ಲಿ ಮಹಿಳೆ ತನ್ನ ಸ್ವಾತಂತ್ರ್ಯವನ್ನು ತಾನೇ ದಕ್ಕಿಸಿಕೊಳ್ಳುವ ಪ್ರಯತ್ನ ಮಾಡಬೇಕು. ವೈಜ್ಞಾನಿಕವಾಗಿ, ವೈಚಾರಿಕವಾಗಿ ಯೋಚಿಸುವುದನ್ನು ರೂಢಿಸಿಕೊಳ್ಳಬೇಕು. ವೈಯಕ್ತಿಕ ಶಕ್ತಿಯ ಆಧಾರದ ಮೇಲೆ ಬೆಳೆಯಬೇಕು’ ಎಂದರು.

ಪುಸ್ತಕ ಕುರಿತು ಸಾಹಿತಿ ಡಾ.ಶುಭಶ್ರೀ ಪ್ರಸಾದ್‌ ಮಾತನಾಡಿದರು. ಲೇಖಕಿ ಡಾ.ಸುಮಾರಾಣಿ ಶಂಭು ಇದ್ದರು.

*******

ಪುಸ್ತಕ ಎಂದಿಗೂ ಅಮರ

‘ಬದಲಾವಣೆಯನ್ನು ನಾವು ಒಪ್ಪಿಕೊಳ್ಳಲೇಬೇಕು. ಸಿನಿಮಾ ಬಂದ ನಂತರ ರಂಗಭೂಮಿ ತತ್ತರಿಸಿ ಹೋಯಿತು. ಸಿನಿಮಾ ವಿಜೃಂಭಿಸುವ ಹೊತ್ತಿನಲ್ಲಿ ಬಂದ ದೂರದರ್ಶನ ಸಿನಿಮಾವನ್ನೇ ಮೀರಿಸುವ ಹಂತಕ್ಕೆ ತಲುಪಿತು. ದೂರದರ್ಶನ ಇಲ್ಲದೆ ಸಿನಿಮಾ ಇಲ್ಲದಂತಹ ಪರಿಸ್ಥಿತಿ ಇದೆ. ಈಗ ಹೊಸದಾಗಿ ಬಂದಿರುವ ಒಟಿಟಿ ವೇದಿಕೆಗೆ ಸಿನಿಮಾಗಳನ್ನು ಮಾರಾಟ ಮಾಡುವ ಹಂತಕ್ಕೆ ಬಂದಿದ್ದೇವೆ’ ಎಂದು ನಾಗತಿಹಳ್ಳಿ ಚಂದ್ರಶೇಖರ್‌ ಹೇಳಿದರು.

‘ಬದಲಾವಣೆಯ ಜಗತ್ತಿನಲ್ಲೂ ಪುಸ್ತಕಗಳಿಗೆ ಒಂದು ರೀತಿಯ ಅಮರತ್ವ ಇದೆ. ಅವು ಯಾವ ದಾಳಿಯಿಂದಲೂ ನಾಶವಾಗುವುದಿಲ್ಲ. ಸಹಸ್ರಾರು ತಾಂತ್ರಿಕ ಆವಿಷ್ಕಾರ ಬಂದರೂ ಸಾಹಿತ್ಯಕ್ಕೆ ಸಾವಿಲ್ಲ, ಓದುಗರ ಸಂಖ್ಯೆ ಕಡಿಮೆಯಾಗಬಹುದು, ಆದರೆ ಸಾಹಿತ್ಯಕ್ಕೆ ಅಳಿವಿಲ್ಲ. ಪುಸ್ತಕಗಳು ನಮ್ಮನ್ನು ಚಿಂತನೆಗೆ ಹಚ್ಚುತ್ತವೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು