ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸ್ವಾತಂತ್ರ್ಯ ದಿನವನ್ನು ಪವಿತ್ರ ಭಾವನೆಯಿಂದ ಸ್ಮರಿಸೋಣ: ಎನ್. ಚಲುವರಾಯಸ್ವಾಮಿ

Published : 15 ಆಗಸ್ಟ್ 2024, 4:58 IST
Last Updated : 15 ಆಗಸ್ಟ್ 2024, 4:58 IST
ಫಾಲೋ ಮಾಡಿ
Comments

ಮಂಡ್ಯ: ಬ್ರಿಟಿಷರ ದಾಸ್ಯದಿಂದ 1947 ಆಗಸ್ಟ್ 15 ರಂದು ಭಾರತ ಮಾತೆ ಸ್ವಾತಂತ್ರ‍್ಯಗೊಂಡ ಈ ಶುಭದಿನವನ್ನು ಪ್ರತಿಯೊಬ್ಬ ಭಾರತೀಯರು ತಮ್ಮ ಅಂತಃಕರಣದಿಂದ ಗೌರವಿಸಬೇಕಿರುತ್ತದೆ ಹಾಗೂ ಪವಿತ್ರಭಾವನೆಯೊಂದಿಗೆ ಸ್ಮರಿಸಬೇಕಿರುತ್ತದೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಅವರು ತಿಳಿಸಿದರು.

ನಗರದ ಸರ್. ಎಂ. ವಿ ಕ್ರೀಡಾಂಗಣದಲ್ಲಿ ಗುರುವಾರ ಆಯೋಜಿಸಿದ್ದ 78 ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ಈ ದೇಶವನ್ನು ಬ್ರಿಟೀಷರ ಕಪಿಮುಷ್ಠಿಯಿಂದ ಮುಕ್ತಿಗೊಳಿಸಲು ಸಹಸ್ರಾರು ಭಾರತೀಯರು ತಮ್ಮ ತನು-ಮನ-ಧನವನ್ನು ತ್ಯಾಗಮಾಡಿದ್ದಾರೆ ಎಂದರು.

ಮಹಾತ್ಮಗಾಂಧೀಜಿ, ಜವಾಹರ್ ಲಾಲ್ ನೆಹರು, ಬಾಲಗಂಗಾಧರ ತಿಲಕ್, ಸರ್ದಾರ್ ವಲ್ಲಭಬಾಯಿಪಟೇಲ್, ಭಗತ್ ಸಿಂಗ್, ಸುಭಾಷ್ ಚಂದ್ರಬೋಸ್, ಸರೋಜಿನಿನಾಯ್ಡು, ಕಿತ್ತೂರುರಾಣಿ ಚೆನ್ನಮ್ಮ, ಝಾನ್ಸಿರಾಣಿ ಲಕ್ಷ್ಮೀಭಾಯಿ ಮುಂತಾದ ಅನೇಕ ಹೋರಾಟಗಾರರ ಪರಿಶ್ರಮದಿಂದ ನಾವಿಂದು ಸ್ವಾತಂತ್ರ‍್ಯದ ಫಲವನ್ನು ಅನುಭವಿಸುತ್ತಿದ್ದೇವೆ. ಈ ಸುಸಂದರ್ಭದಲ್ಲಿ ದೇಶದ ಸ್ವಾತಂತ್ರ‍್ಯಕ್ಕಾಗಿ ತಮ್ಮ ಸರ್ವಸ್ವವನ್ನು ತ್ಯಾಗ ಮಾಡಿದ ಮಹನೀಯರನ್ನು ನೆನೆದು ಆತ್ಮಪೂರ್ವಕವಾಗಿ ಗೌರವ ಸಲ್ಲಿಸ ಬಯಸುತ್ತೇನೆ ಎಂದರು.

ಸ್ವಾತಂತ್ರ‍್ಯ ಹೋರಾಟಕ್ಕೆ ಮಂಡ್ಯ ಜಿಲ್ಲೆಯ ಕೊಡುಗೆಯೂ ಅಪಾರ. ಸಾಹುಕಾರ್ ಚನ್ನಯ್ಯ, ಟಿ.ಮರಿಯಪ್ಪ, ಮಳವಳ್ಳಿ ವೀರಪ್ಪ, ಕಾಂಗ್ರೆಸ್‌ಸುಬ್ಬಯ್ಯ, ಎ.ಸಿ.ಭೈರಪ್ಪ, ಎ.ಜಿ.ಬಂದೀಗೌಡ, ಹೆಚ್.ಕೆ.ವೀರಣ್ಣಗೌಡ, ಇಂಡುವಾಳು ಹೊನ್ನಯ್ಯ ಸೇರಿದಂತೆ ಸಾಕಷ್ಟು ಜನರು ಈ ಮಹತ್ತರ ಕಾರ್ಯದಲ್ಲಿ ತಮ್ಮನ್ನು ತಾವು ಆತ್ಮಾರ್ಪಣೆ ಮಾಡಿಕೊಂಡಿರುವುದನ್ನು ನಾವೆಲ್ಲರೂ ನೆನಪಿಸಿಕೊಳ್ಳಬೇಕಿದೆ ಎಂದರು.

ಭಾರತ ಸ್ವಾತಂತ್ರ‍್ಯ ಹೊರಾಟದ ಚರಿತ್ರೆಯಲ್ಲಿ ಶಿವಪುರದ ಧ್ವಜಸತ್ಯಾಗ್ರಹ ಅವಿಸ್ಮರಣಿಯ ಮೈಲಿಗಲ್ಲು. ಭಾರತದಲ್ಲಿ ಸ್ವಾತಂತ್ರ‍್ಯದ ಹೋರಾಟ ನಡೆಯುವಾಗ 1938ರ ಏಪ್ರಿಲ್ 9 ರಂದು ಶಿವಪುರದ ತಿರುಮಲೇಗೌಡ ಅವರ ಜಮೀನಿನಲ್ಲಿ ಧ್ವಜರೋಹಣ ಮಾಡಲು ಸಾವಿರಾರು ಸಂಖ್ಯೆಯಲ್ಲಿ ಹೋರಾಟಗಾರರು ಸೇರಿ, ಯಾವುದೇ ಬೆದರಿಕೆಗೂ ಬಗ್ಗದೆ, ಧೈರ್ಯವಾಗಿ ಭಾರತದ ತ್ರಿವರ್ಣಧ್ವಜವನ್ನು ಆರೋಹಣ ಮಾಡಿ ಪೊಲೀಸರ ಬಂಧನಕ್ಕೆ ಒಳಗಾದರು. ಇದರ ಸ್ಮರಣಾರ್ಥವಾಗಿ ಶಿವಪುರದಲ್ಲಿ ಸತ್ಯಾಗ್ರಹಸೌಧವನ್ನು ನಿರ್ಮಿಸಿರುವುದು ಶ್ಲಾಘನೀಯ. ಇದು ಮಂಡ್ಯ ಜಿಲ್ಲೆಯ ಹೆಮ್ಮೆ ಎಂದರು.

ಕನ್ನಡ ಸಾಹಿತ್ಯ ಸಮ್ಮೇಳನ

ಮಂಡ್ಯ ಜಿಲ್ಲೆಯು ಹಲವು ಸಾಹಿತಿಗಳ ತವರಾಗಿದ್ದು, ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡಿದೆ. ಈ ಹಿನ್ನೆಲೆಯಲ್ಲಿ ಈ ಹಿಂದೆ ಮೊದಲನೇ ಬಾರಿಗೆ ಕನ್ನಡ ಸಾಹಿತ್ಯ ಸಮ್ಮೇಳನವು 1973ರಲ್ಲಿ ಮತ್ತು ಎರಡನೇ ಬಾರಿಗೆ ಕನ್ನಡ ಸಾಹಿತ್ಯ ಸಮ್ಮೇಳನವು 1994ರಲ್ಲಿ ಜರುಗಿದ್ದು, ಹೆಮ್ಮೆಯ ಸಂಗತಿ. ಅದೇ ರೀತಿ ಮೂರನೇ ಬಾರಿಗೆ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಸಕ್ಕರೆ ನಾಡು ಮಂಡ್ಯದಲ್ಲಿ ಆತಿಥ್ಯ ವಹಿಸಲು ಅವಕಾಶ ಸಿಕ್ಕಿರುವುದು, ನಮ್ಮೆಲ್ಲರಿಗೂ ಸಂತೋಷದ ವಿಷಯವಾಗಿದೆ. ಈ ವರ್ಷ ಡಿಸೆಂಬರ್-20, 21 ಮತ್ತು 22 ರಂದು ಮೂರು ದಿನಗಳ ಕಾಲ ಅರ್ಥಪೂರ್ಣವಾಗಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಲು ತೀರ್ಮಾನಿಸಿದ್ದು, ನಾಡಿನಾದ್ಯಂತ ಕನ್ನಡಾಭಿಮಾನಿಗಳು ಸಾಹಿತ್ಯಾಸಕ್ತರು ಅಪಾರ ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ. ಹಾಗಾಗಿ ಇದನ್ನು ನಾವು ಹಬ್ಬದಂತೆ ಸಂಭ್ರಮಿಸಬೇಕು ಈ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲರೂ ಒಂದು ಕೂಡಿ ಸಹಕಾರ ಸಮನ್ವಯತೆಯಿಂದ ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಗೊಳಿಸಲು ವಿನಂತಿಸುತ್ತೇನೆ ಎಂದರು

ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರ ವನ್ನು ದುರಸ್ತಿಗೊಳಿಸಬೇಕೆಂಬ ಬೇಡಿಕೆಯನ್ನು ಕಲಾವಿದರು, ಸಾಹಿತ್ಯಾಸಕ್ತರು ಹಲವಾರು ದಿನಗಳಿಂದ ಒತ್ತಾಯಿಸಿದ್ದು, ಇದರಂತೆ ₹ 63 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ದುರಸ್ತಿ ಕಾರ್ಯ ಮುಕ್ತಾಗೊಂಡಿರುತ್ತದೆ. ಅಲ್ಲಿರುವ ಆಸನಗಳನ್ನೂ ಸಹ ಬದಲಾಯಿಸಬೇಕೆಂಬ ಕಲಾವಿದರು ಸಾಹಿತ್ಯಾಸಕ್ತರ ಮನವಿಯಂತೆ ಹೆಚ್ಚುವರಿಯಾಗಿ, ₹50 ಲಕ್ಷ ರೂಪಾಯಿ ಬಿಡುಗಡೆಗೊಳಿಸಲಾಗುತ್ತಿದೆ ಎಂದರು.

ಮಂಡ್ಯ ಮೈಷುಗರ್ ಕಾರ್ಖಾನೆ ಆವರಣದಲ್ಲಿ ಹೊಸಸಕ್ಕರೆ ಕಾರ್ಖಾನೆ ಸ್ಥಾಪನೆ ಮಾಡಲು ಘೋಷಣೆ ಮಾಡಲಾಗಿರುತ್ತದೆ. ಇದರಂತೆ ವಿಸ್ತೃತ ಯೋಜನಾ ವರದಿಯನ್ನು ತಯಾರಿಸಲಾಗುತ್ತಿದೆ. ಮಂಡ್ಯ ಜಿಲ್ಲೆಯ ರೈತ ಮುಖಂಡರ ಹಾಗೂ ಕಬ್ಬುಬೆಳಗಾರರ ಜೊತೆ ಸಮಾಲೋಚನೆ ನಡೆಸಿ, ಹೊಸ ಕಾರ್ಖಾನೆ ನಿರ್ಮಾಣ ಅಥವಾ ಪುನಃಶ್ಚೇತನಗೊಳಿಸುವ ಸಂಬಂಧ ತೀರ್ಮಾನಿಸಲಾಗುವುದು.

•ಮಂಡ್ಯ ಜಿಲ್ಲೆ ಕೃಷಿ ಪ್ರಧಾನ ಜಿಲ್ಲೆಯಾಗಿದ್ದು, ಕೃಷಿಗೆ ಪೂರಕವಾದ ಅನೇಕ ಚಟುವಟಿಕೆಗಳನ್ನು ನಡೆಸಲು ಸೂಕ್ತವಾದ ಜಿಲ್ಲೆಯಾಗಿದೆ. ಕೃಷಿಯಲ್ಲಿ ಹೊಸ ಹೊಸ ವಿಧಾನಗಳು ಅಳವಡಿಕೆ, ವೈಜ್ಞಾನಿಕ ಉಪಕರಣಗಳ ಬಳಕೆ, ಕೃಷಿಯಲ್ಲಿ ತಂತ್ರಜ್ಞಾನದ ಬಳಕೆಯ ಸಾಧ್ಯತೆಗಳನ್ನು ಉತ್ತೇಜಿಸಲು, ಅನೇಕ ಹೊಸ ವಿಷಯಗಳ ಅಧ್ಯಯನವನ್ನು ಉತ್ತೇಜಿಸುವ ಸಲುವಾಗಿ, ಜಿಲ್ಲೆಗೆ ಕೃಷಿ ವಿಶ್ವವಿದ್ಯಾಲಯವನ್ನು ಸ್ಥಾಪಿಸಲು ಘೋಷಣೆ ಮಾಡಲಾಗಿದೆ ಎಂದರು.

ಕೆ.ಆರ್.ಎಸ್. ಅಣೆಕಟ್ಟೆಯ ಬೃಂದಾವನ ಉದ್ಯಾನವನ್ನು ವಿಶ್ವ ದರ್ಜೆಯ ಪ್ರವಾಸೋದ್ಯಮ ಆಕರ್ಷಣೆಯ ಕೇಂದ್ರ ವನ್ನಾಗಿ ಉನ್ನತೀಕರಿಸುವ ಸಲುವಾಗಿ ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಿಸುವ ಮೂಲಕ ಜನಪ್ರಿಯ ಪ್ರವಾಸಿ ತಾಣವನ್ನಾಗಿ ಮಾಡಿ, ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸಲು ಉದ್ದೇಶಿಸಲಾಗಿದೆ ಎಂದರು.

ವಿಶ್ವೇಶ್ವರಯ್ಯ ನಾಲೆಯು 92 ವರ್ಷ ಹಳೆಯದಾಗಿದ್ದು, ಶಿಥಿಲಾವಸ್ಥೆಯಲ್ಲಿರುವ ಕಾರಣ ಸಮಗ್ರ ಅಚ್ಚುಕಟ್ಟು ಪ್ರದೇಶಕ್ಕೆ ಶೀಘ್ರವಾಗಿ, ಸಮರ್ಪಕವಾಗಿ ನೀರನ್ನು ಹಂಚಿಕೆ ಮಾಡುವ ದೃಷ್ಠಿಯಿಂದ ವಿಶ್ವೇಶ್ವರಯ್ಯ ನಾಲೆ ಆಧುನೀಕರಣ ಕಾಮಗಾರಿಯನ್ನು ಕೈಗೆತ್ತುಕೊಂಡಿದ್ದು, ಸುಮಾರು ₹300 ಕೋಟಿ ಅಂದಾಜು ವೆಚ್ಚದ ಕಾಮಗಾರಿಯ ಪೈಕಿ, ಶೇಕಡ 60 ರಷ್ಟು ಕಾಮಗಾರಿ ಮುಕ್ತಾಯಗೊಂಡಿರುತ್ತದೆ ಎಂದರು.

ಪ್ರವಾಹ ಮತ್ತು ಬರಗಾಲದಂತಹ ಹವಾಮಾನ ಸಂಬಂಧಿತ ಬೆಳೆನಷ್ಟಗಳಿಗೆ ಆರ್ಥಿಕ ರಕ್ಷಣೆ ಒದಗಿಸುವ ಉದ್ದೇಶದಿಂದ ಬೆಳೆ ವಿಮೆಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದ್ದು, ಕಳೆದ ವರ್ಷ 2023ನೇ ಸಾಲಿನಲ್ಲಿ ವಿಮಾ ಯೋಜನೆಯಡಿಯಲ್ಲಿ ಈವರೆಗೂ ರಾಜ್ಯದಲ್ಲಿ ₹1911 ಕೋಟಿ ವಿಮಾ ಪರಿಹಾರ ಧನವನ್ನು ರೈತರಿಗೆ ವಿತರಿಸಲಾಗಿದೆ. ಅದರಂತೆ, ಮಂಡ್ಯ ಜಿಲ್ಲೆಯಲ್ಲಿ ಒಟ್ಟು 85,960 ರೈತರು ನೋಂದಣಿ ಮಾಡಿಸಿಕೊಂಡಿದ್ದು, ₹38.92 ಕೋಟಿ ಪರಿಹಾರ ವಿಮಾ ಮೊತ್ತವನ್ನು ಪಾವತಿಸಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಮಂಡ್ಯ ಶಾಸಕ ಪಿ. ರವಿಕುಮಾರ್, ಮೈ ಶುಗರ್ ಅಧ್ಯಕ್ಷ ಸಿ.ಡಿ. ಗಂಗಾಧರ್, ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಯೀಮ್, ಜಿಲ್ಲಾಧಿಕಾರಿ ಕುಮಾರ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖ್ ತನ್ವೀರ್ ಆಸಿಫ್ ಸೇರಿದಂತೆ ಇನ್ನಿತರೆ ಗಣ್ಯರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT