ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯ: ಚರ್ಚ್‌ಗಳಲ್ಲಿ ಕ್ರಿಸ್‌ಮಸ್ ಸಂಭ್ರಮ

ಬಾಲ ಏಸುವಿನ ಗೋದಲಿ ನಿರ್ಮಾಣ: ವಿದ್ಯುತ್‌ ದೀಪಗಳ ಅಲಂಕಾರ
Published 23 ಡಿಸೆಂಬರ್ 2023, 14:22 IST
Last Updated 23 ಡಿಸೆಂಬರ್ 2023, 14:22 IST
ಅಕ್ಷರ ಗಾತ್ರ

ಮಂಡ್ಯ: ಕ್ರಿಸ್‌ಮಸ್‌ ಆಚರಣೆಗೆ ಕ್ಷಣಗಣನೆ ಆರಂಭ ಆಗಿದ್ದು, ಜಿಲ್ಲೆಯಾದ್ಯಂತ ಇರುವ ಚರ್ಚುಗಳಲ್ಲಿ ಸಂಭ್ರಮ ಮನೆ ಮಾಡಿದೆ. ಮನೆಗಳಲ್ಲೂ ಹಬ್ಬದ ಖುಷಿ ಹೆಚ್ಚಿದೆ.

ಸೇಂಟ್‌ ಜೋಸೆಫ್‌ ಚರ್ಚ್‌, ಸಾಡೇ ಮೆಮೋರಿಯಲ್‌ ಚರ್ಚ್‌, ಎ.ಜಿ.ಕಲ್ವಾರಿ ಚರ್ಚ್‌, ಸೇವೆಂತ್‌ ಡೇ ಅಡ್ವೆಂಚರ್‌ ಚರ್ಚ್‌ ಸೇರಿ ನಗರದಲ್ಲಿ 15 ಚರ್ಚ್‌ಗಳಿವೆ. ಹಲವು ದಿನದಿಂದಲೇ ಎಲ್ಲೆಡೆ ಕ್ರಿಸ್‌ಮಸ್‌ಗಾಗಿ ಸಿದ್ಧತೆ ನಡೆಸಿದೆ. ನಗರದಲ್ಲಿ ಸುಮಾರು 10 ಸಾವಿರ ಕ್ರೈಸ್ತರು ಇದ್ದು, 1,500 ಕುಟುಂಬಗಳಿವೆ.ಎಲ್ಲರ ಮನೆಗಳನ್ನು ಹಬ್ಬಕ್ಕೆಂದೇ ಅಲಂಕರಿಸಲಾಗುತ್ತಿದೆ.ಚರ್ಚುಗಳ ಆವರಣದಲ್ಲಿ ಬಾಲ ಏಸುವಿನ ಲೀಲೆಗಳನ್ನು ಸಾರುವ ಗೋದಲಿಗಳ ನಿರ್ಮಾಣ ಕಾರ್ಯವೂ ನಡೆದಿದೆ.

ಶನಿವಾರ ಮಧ್ಯರಾತ್ರಿಯಿಂದಲೇ ಕ್ರಿಸ್‌ಮಸ್ ಆಚರಣೆಗೆ ಚಾಲನೆ ದೊರೆಯಲಿದ್ದು, ಭಾನುವಾರವೂ ವಿವಿಧ ವಿಶೇಷ ಪ್ರಾರ್ಥನೆ, ಧರ್ಮಗುರುಗಳ ಬೋಧನೆ ನಡೆಯಲಿದೆ. ಚರ್ಚ್‌ಗಳ ಮುಖ್ಯಸ್ಥರು ಅಂತಿಮ ಹಂತದ ಸಿದ್ಧತೆಯಲ್ಲಿ ತೊಡಗಿದ್ದಾರೆ. ಮನೆಯ ಸದಸ್ಯರೆಲ್ಲರೂ ಚರ್ಚ್‌ಗೆ ತೆರಳಿ ಸಾಮೂಹಿಕ ಪ್ರಾರ್ಥನೆಯಲ್ಲಿ ತೊಡಗಲಿದ್ದಾರೆ.

ಆರ್‌.ಪಿ.ರಸ್ತೆ ಬಳಿಯಿರುವ ಕ್ರಿಶ್ಚಿಯನ್‌ ಕಾಲೊನಿಯಲ್ಲಿನ ಮನೆಗಳಲ್ಲಿ ಬಣ್ಣಬಣ್ಣದ ದೀಪಗಳು ಬೆಳಗತೊಡಗಿವೆ. ಹಬ್ಬದ ಅಂಗವಾಗಿ ಅಂಗಡಿಗಳಲ್ಲಿ ಬಣ್ಣಬಣ್ಣದ ನಕ್ಷತ್ರಗಳು, ಸೆಂಟಾ ಕ್ಲಾಸ್‌‌ ಗೊಂಬೆಗಳು, ಟೊಪ್ಪಿಗೆಗಳು, ಕ್ರಿಸ್‌ಮಸ್‌ ಟ್ರೀಗಳನ್ನು ಮಾರಾಟಕ್ಕೆ ಇಡಲಾಗಿದೆ. ಇದರ ಜೊತೆಗೆ ಬಣ್ಣದ ಪತ್ರ, ಆಟಿಕೆಗಳು, ದೀಪಾಲಂಕಾರ ಸಾಮಗ್ರಿಗಳನ್ನೂ ಮಾರಾಟಕ್ಕೆ ಇಡಲಾಗಿದೆ. ಅಂಗಡಿಗಳಲ್ಲಿ ಸಾಲಾಗಿ ಜೋಡಿಸಿರುವ ನಕ್ಷತ್ರಾಕಾರದ ಆಕಾಶ ಬುಟ್ಟಿಗಳಿಗೆ ದೀಪಾಲಂಕಾರ ಮಾಡಲಾಗಿದ್ದು ರಾತ್ರಿಯಲ್ಲಿ ನೋಡಲು ಸುಂದರವಾಗಿ ಕಾಣುತ್ತಿವೆ.

ಹಬ್ಬದ ಅಂಗವಾಗಿ ವಿವಿಧ ಚರ್ಚ್‌ ವತಿಯಿಂದ ಹಲವು ಸ್ಪರ್ಧೆಗಳನ್ನು ಆಯೋಜನೆ ಮಾಡಲಾಗಿದೆ.

ಚರ್ಚ್‌ನ ಒಳ ಆವರಣವನ್ನು ಸಿಂಗರಿಸುವಲ್ಲಿ ನಿರತರಾದ ಮಂದಿ
ಚರ್ಚ್‌ನ ಒಳ ಆವರಣವನ್ನು ಸಿಂಗರಿಸುವಲ್ಲಿ ನಿರತರಾದ ಮಂದಿ

ವಿಶೇಷ ಔತಣ; ಕೇಕ್‌ ಆಕರ್ಷಣೆ:

ಕ್ರಿಸ್‌ಮಸ್ ಎಂದರೆ ಅದು ವಿಶೇಷ ಔತಣ ಹಾಗೂ ಕೇಕ್‌ಗಳ ಹಬ್ಬ. ಹಬ್ಬಕ್ಕೆ ತಿಂಗಳ ಮುಂಚೆಯೇ ನಾನಾ ಬಗೆಯ ಕೇಕ್‌ ತಯಾರಿ ಕಾರ್ಯಕ್ಕೆ ಚಾಲನೆ ನೀಡಲಾಗುತ್ತದೆ. ಅದರಲ್ಲೂ ಒಣಹಣ್ಣು ವೈನ್ ಮಿಶ್ರಿತ ಫ್ಲಮ್ ಕೇಕ್‌ ಈ ಹಬ್ಬದ ಪ್ರಮುಖ ಆಕರ್ಷಣೆ. ನಗರದ ವಿವಿಧ ಬೇಕರಿಗಳಲ್ಲೂ ಹಬ್ಬಕ್ಕೆಂದೇ ವಿಶೇಷವಾಗಿ ಕೇಕ್‌ಗಳನ್ನು ತಯಾರಿಸಲಾಗಿದೆ. ಕ್ರಿಸ್‌ಮಸ್‌ ಜೊತೆಗೆ ಹೊಸವರ್ಷಕ್ಕೂ ಅನುಕೂಲವಾಗುವ ರೀತಿಯಲ್ಲಿ ಕೇಕ್‌ ಮೇಳ ಆಚರಣೆ ಮಾಡಲಾಗುತ್ತದೆ. ಈಗಾಗಲೇ ಹಲವರು ಮುಂಗಡವಾಗಿ ಕೇಕ್‌ ಕಾಯ್ದಿರಿಸಿದ್ದು ಹಬ್ಬದ ದಿನ ಒಯ್ಯಲಿದ್ದಾರೆ. ಜೊತೆಗೆ ಹಬ್ಬದ ದಿನ ಕ್ರೈಸ್ತರ ಮನೆಯಲ್ಲಿ ಭರ್ಜರಿ ಭೋಜನದ ವ್ಯವಸ್ಥೆಯೂ ಇರಲಿದೆ. ಬಗೆಬಗೆಯ ಮಾಂಸಾಹಾರ ಖಾದ್ಯಗಳ ಜೊತೆಗೆ ಜೊತೆಗೆ ಮನೆಯಲ್ಲೇ ಕೇಕ್‌ ತಯಾರಿಸುವಲ್ಲಿ ಗಮನ ಹರಿಸಿದ್ದಾರೆ. ಕೇಕ್‌ನಿಂದ ಕ್ರಿಸ್‌ಮಸ್‌ ಟ್ರೀ ತಯಾರಿಕೆ ಕೆಲಸಗಳೂ ನಡೆಯುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT