ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯ ಜಿಲ್ಲೆಯಲ್ಲಿ ಕಮಿಷನ್‌ ರಾಜಕಾರಣ: ಸುಮಲತಾ ಆರೋಪಕ್ಕೆ ಜೆಡಿಎಸ್‌ ಶಾಸಕರ ಕಿಡಿ

‘ಕಮೀಷನ್‌’ ಆರೋಪಕ್ಕೆ ಸಾಕ್ಷಿ ನೀಡಲು ಆಗ್ರಹ, ‘ಹಿಟ್‌ ಅಂಡ್‌ ರನ್‌’ ಹೇಳಿಕೆ ಕೊಟ್ಟರೇ ಸಂಸದೆ?
Last Updated 3 ಸೆಪ್ಟೆಂಬರ್ 2022, 12:55 IST
ಅಕ್ಷರ ಗಾತ್ರ

ಮಂಡ್ಯ: ‘ಜಿಲ್ಲೆಯಲ್ಲಿ ಕಮಿಷನ್‌ರಾಜಕಾರಣ ಹೆಚ್ಚಾಗಿದೆ, ಕಾಮಗಾರಿಗಳಲ್ಲಿ ಸ್ಥಳೀಯ ಜನಪ್ರತಿನಿಧಿಗಳು ನೂರಲ್ಲ, ಐನೂರು ಪರ್ಸೆಂಟ್‌ ಕಮಿಷನ್‌ಪಡೆಯುತ್ತಿದ್ದಾರೆ’ ಎಂದು ಸಂಸದೆ ಸುಮಲತಾ ಆರೋಪಿಸಿರುವುದು ಜೆಡಿಎಸ್‌ ಶಾಸಕರನ್ನು ಕೆಂಡಾಮಂಡಲವಾಗಿಸಿದೆ.

ಈಚೆಗೆ ನಗರದಲ್ಲಿ ನಡೆದ ಮಳೆಹಾನಿ ಪರಿಶೀಲನಾ ಸಭೆಯಲ್ಲಿ ಪಾಲ್ಗೊಂಡು ಸುದ್ದಿಗಾರರ ಜೊತೆ ಮಾತನಾಡಿದ್ದ ಸಂಸದೆ ಸುಮಲತಾ ‘ಕಾಮಗಾರಿಗಳ ಟೆಂಡರ್‌ ಆಗುತ್ತಿದ್ದಂತೆಯೇ ಸ್ಥಳೀಯ ಶಾಸಕರು ಕಮಿಷನ್‌ಪಡೆಯುತ್ತಿದ್ದಾರೆ. ಗುತ್ತಿಗೆದಾರರು ಅದರ ಬಗ್ಗೆ ಮಾತನಾಡಲು ಹೆದರುತ್ತಿದ್ದಾರೆ’ ಎಂದು ಆರೋಪಿಸಿದ್ದರು.

ಸಂಸದೆಯ ಈ ಹೇಳಿಕೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಸ್ಥಳೀಯ ಜೆಡಿಎಸ್‌ ಶಾಸಕರು ಸುಮಲತಾ ವಿರುದ್ಧ ಬೆಂಕಿಯ ಉಂಡೆಯನ್ನೇ ಉಗುಳುತ್ತಿದ್ದಾರೆ. ‘ಸಂಸದರಿಗೆ ಹಿಟ್‌ ಅಂಡ್‌ ರನ್‌ ಹೇಳಿಕೆ ನೀಡುವುದು ಅಭ್ಯಾಸವಾಗಿ ಬಿಟ್ಟಿದೆ. ಅಭಿವೃದ್ಧಿ ಕೆಲಸ ಮಾಡುತ್ತಿರುವ ಸ್ಥಳೀಯ ಜನಪ್ರತಿನಿಧಿಗಳ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಆರೋಪ ಮಾಡುವುದೇ ಅವರಿಗೆ ರಾಜಕಾರಣವಾಗಿದೆ’ ಎಂದು ತಿರುಗೇಟು ನೀಡಿದ್ದಾರೆ.

‘ಸುಮಲತಾ ಅವರಿಗೆ ಜಿಲ್ಲೆಯ ಇತಿಹಾಸದ ಜ್ಞಾನವಿಲ್ಲ. ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರ ಕಾಲದಿಂದ ಜಿಲ್ಲೆಯಲ್ಲಿ ಅಭಿವೃದ್ಧಿ ಶೆಖೆ ಆರಂಭವಾಗಿದೆ. ಅಲ್ಲಿಂದ ಇಲ್ಲಿಯವರೆಗೆ ಹಲವು ಶಾಸಕರು, ಸಂಸದರು ಜಿಲ್ಲೆಯನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುತ್ತಿದ್ದಾರೆ. ಅದರ ಅರಿವಿಲ್ಲದ ಸುಮಲತಾ ಅವರು ಮನಸ್ಸಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಅವರ ಆರೋಪಗಳಿಗೆ ನಾವು ಉತ್ತರ ಕೊಡುವ ಅವಶ್ಯಕತೆ ಇಲ್ಲ’ ಎಂದು ಮಳವಳ್ಳಿ ಶಾಸಕ ಕೆ.ಅನ್ನದಾನಿ ಹೇಳಿದರು.

ಹಿಟ್‌ ಅಂಡ್‌ ರನ್‌: ಸಂಸದೆ ಸುಮಲತಾ ಅವರ ಆರೋಪಗಳನ್ನು ಜೆಡಿಎಸ್‌ ಶಾಸಕರು ‘ಹಿಟ್‌ ಅಂಡ್‌ ರನ್‌’ ಎಂದು ಹೇಳಿ ಕೈತೊಳೆದುಕೊಳ್ಳುತ್ತಿದ್ದಾರೆ. ಇಲ್ಲಿಯವರೆಗೆ ಸುಮಲತಾ ಅವರು ಹಲವು ಗಂಭೀರ ಆರೋಪಗಳನ್ನು ಮಾಡಿದ್ದು ಅದಕ್ಕೆ ಸಂಬಂಧಿಸಿದಂತೆ ಯಾವುದೇ ಸಾಕ್ಷ್ಯ ಒದಗಿಸಿಲ್ಲ. ಹೀಗಾಗಿ ಅವರ ಹೇಳಿಕೆಗಳನ್ನು ನಿರ್ಲಕ್ಷ್ಯ ಮಾಡುತ್ತಲೇ ಬಂದಿದ್ದಾರೆ.

ಕೆಆರ್‌ಎಸ್‌ ಜಲಾಶಯದ ವಿಚಾರದಲ್ಲೂ ಸಂಸದೆ ಸುಮಲತಾ ಅವರು ಇದೇ ರೀತಿ ಹೇಳಿಕೆ ನೀಡಿದ್ದರು. ‘ಕೆಆರ್‌ಎಸ್ ಜಲಾಶಯ ಬಿರುಕು ಬಿಟ್ಟಿದೆ’ ಎಂದು ಹೇಳಿ ವಿವಾದ ಸೃಷ್ಟಿಸಿದ್ದರು. ಆದರೆ ಅದಕ್ಕೆ ಸಂಬಂಧಿಸಿದ ಯಾವುದೇ ಪುರಾವೆಗಳನ್ನು ಅವರು ಒದಗಿಸಿರಲಿಲ್ಲ. ಈ ಕುರಿತು ಕಾವೇರಿ ನೀರಾವರಿ ನಿಗಮ ಸ್ಪಷ್ಟನೆ ನೀಡಿ ‘ಕೆಆರ್‌ಎಸ್‌ ಜಲಾಶಯ ಸುಭದ್ರವಾಗಿದ್ದು ಯಾವುದೇ ರೀತಿಯ ಬಿರುಕುಗಳಿಲ್ಲ’ ಎಂದು ತಿಳಿಸಿತ್ತು.

ಆಗಲೂ ಸುಮಲತಾ ಅವರ ವಿರುದ್ಧ ಸ್ಥಳೀಯ ಶಾಸಕರು ಆಕ್ರೋಶ ವ್ಯಕ್ತಪಡಿಸಿದ್ದರು. ಸುಖಾಸುಮ್ಮನೆ ಹೇಳಿಕೆ ನೀಡುವಲ್ಲಿ ಸಂಸದೆ ಪ್ರಸಿದ್ಧಿ ಪಡೆದಿದ್ಧಾರೆ. ಈಗ ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವಿಚಾರದಲ್ಲೂ ತಮ್ಮ ನಿರ್ಲಕ್ಷ್ಯದ ಹೇಳಿಕೆ ಮುಂದುವರಿಸಿದ್ದಾರೆ. ಇವರ ಆರೋಪಗಳನ್ನು ಜನರು ನಂಬುವುದಿಲ್ಲ ಎಂದು ಹೇಳಿದ್ದಾರೆ.

‘ಸುಮಲತಾ ಅವರನ್ನು ಗೆಲ್ಲಿಸಿದ್ದಕ್ಕೆ ಜನರು ಪಶ್ಚಾತ್ತಾಪ ಪಡುವಂತಾಗಿದೆ. ಜಿಲ್ಲೆಯ ಯಾವ ವಿಚಾರಗಳೂ ಅವರಿಗೆ ಗೊತ್ತಿಲ್ಲ. ತಿಂಗಳಿಗೊಮ್ಮೆ ಬರುವ ಸಂಸದರು ಬಾಯಿಗೆ ಬಂದಂತೆ ಮಾತನಾಡಿ ಹೋಗುತ್ತಿದ್ದಾರ, ಯಾವುದಕ್ಕೂ ಪುರಾವೆಗಳಿಲ್ಲ. ಜನರು ಅವರಿಗೆ ತಕ್ಕ ಪಾಠ ಕಲಿಸುತ್ತಾರೆ’ಎಂದು ಶಾಸಕ ಸಿ.ಎಸ್‌.ಪುಟ್ಟರಾಜು ಆಕ್ರೋಶ ವ್ಯಕ್ತಪಡಿಸಿದರು.

ಎಲ್ಲವನ್ನೂ ಬಹಿರಂಗಪಡಿಸುವೆ...

‘ಜಿಲ್ಲೆಯ ಪ್ರತಿ ಇಲಾಖೆಯಲ್ಲೂ ಕಮಿಷನ್‌ದಂಧೆ ತೀವ್ರವಾಗಿದೆ, ಅದೆಲ್ಲವನ್ನೂ ಬಹಿರಂಗವಾಗಿ ಬಿಚ್ಚಿಡುತ್ತೇನೆ. ಇಲಾಖೆಯಗಳಲ್ಲಿರುವ ಸಮಸ್ಯೆಗಳನ್ನು ಬಗೆಹರಿಸುವುದು ಸುಲಭದ ಮಾತಾಗಿಲ್ಲ. ಅಧಿಕಾರಿಗಳಿಂದ ಕೆಲಸ ಮಾಡಿಸುವುದು ಬೆಟ್ಟದಷ್ಟಿದೆ. ಕಮೀಷನ್‌ ದಂಧೆಯಿಂದ ಕೆಲಸಗಳು ನಡೆಯುತ್ತಿಲ್ಲ. ಮುಂದಿನ ದಿನಗಳಲ್ಲಿ ಎಲ್ಲವನ್ನೂ ತೆರದಿಡಲಾವುದುದು’ ಎಂದು ಸಂಸದೆ ಸುಮಲತಾ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT