ಶುಕ್ರವಾರ, ಫೆಬ್ರವರಿ 28, 2020
19 °C
ಮಧ್ಯಸ್ಥಿಕೆ ಕೇಂದ್ರದ ಕಟ್ಟಡ ಉದ್ಘಾಟನೆ; ಹೈಕೋರ್ಟ್‌ ನ್ಯಾಯಮೂರ್ತಿ ರವಿ ಮಳಿಮಠ ಅಭಿಮತ

ಜನರು ವಿನಾಕಾರಣ ಕೋರ್ಟ್‌ಗೆ ಅಲೆಯುವುದು ತಪ್ಪಲಿ

ಪ್ರಜಾವಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಡ್ಯ: ‘ರಾಜಿ–ಸಂಧಾನದ ಮೂಲಕ ಪ್ರಕರಣ ಇತ್ಯರ್ಥಪಡಿಸಿದರೆ ನ್ಯಾಯಾಲಯದ ಮೇಲೆ ಬೀಳುವ ಪ್ರಕರಣಗಳ ಹೊರೆ ಕಡಿಮೆಯಾಗುತ್ತದೆ. ಇದರಿಂದ ಬಡವರು, ಮುಗ್ಧರು ವಿನಾಕಾರಣ ಕೋರ್ಟ್‌ಗೆ ಅಲೆಯುವುದು ಕೂಡ ತಪ್ಪಿದಂತಾಗುತ್ತದೆ’ ಎಂದು ರಾಜ್ಯ ಹೈಕೋರ್ಟ್‌ ನ್ಯಾಯಮೂರ್ತಿ ರವಿ ಮಳಿಮಠ ಹೇಳಿದರು.

ಜಿಲ್ಲಾ ನ್ಯಾಯಾಲಯ ಸಂಕೀರ್ಣದಲ್ಲಿ ನೂತನವಾಗಿ ನಿರ್ಮಿಸಿರುವ ಜಿಲ್ಲಾ ಮಧ್ಯಸ್ಥಿಕೆ ಕೇಂದ್ರದ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು.

‘ನ್ಯಾಯದಾನ ಪ್ರಕ್ರಿಯೆ ಅತ್ಯಂತ ಮಹತ್ವದ ಜವಾಬ್ದಾರಿಯಾಗಿದೆ. ಕಾನೂನು ಕ್ಷೇತ್ರದಲ್ಲಿರುವ ಪ್ರತಿಯೊಬ್ಬರೂ ಅದನ್ನು ಸಮರ್ಥವಾಗಿ ನಿಭಾಯಿಸಬೇಕು. ಬಡವರು, ಅನಕ್ಷರಸ್ಥರು, ನೊಂದ ಜನರೊಂದಿಗೆ ಮಾನವೀಯತೆಯಿಂದ ವರ್ತಿಸಿ ಅವರಿಗೆ ನ್ಯಾಯ ನೀಡುವ ಕೆಲಸ ಮಾಡಬೇಕು. ನ್ಯಾಯಕ್ಕಾಗಿ ಹೋರಾಟ ಮಾಡಬೇಕು. ಸಮಾಜದಿಂದ ಪಡೆದದ್ದೆಲ್ಲವನ್ನೂ ಮರಳಿ ಸಮಾಜಕ್ಕೇ ನೀಡಬೇಕು’ ಎಂದು ಹೇಳಿದರು.

‘ಸಮಯ ಎನ್ನುವುದು ಅತ್ಯಮೂಲ್ಯವಾದುದು. ಜೀವನದಲ್ಲಿ ಸಿಗುವ ಪ್ರತಿ ಕ್ಷಣವನ್ನು ಸದುಪಯೋಗಪಡಿಸಿಕೊಳ್ಳಬೇಕು. ಪ್ರತಿಯೊಬ್ಬರೂ ಸಮಯಕ್ಕೆ ಹೆಚ್ಚಿನ ಮಹತ್ವ ನೀಡಬೇಕು. ಕಳೆದುಹೋದ ಸಮಯ ಮತ್ತೆ ಎಂದಿಗೂ ಸಿಗುವುದಿಲ್ಲ. ಸಮಯಕ್ಕೆ ಪ್ರಾಮುಖ್ಯತೆ ನೀಡಿದಾಗ ಮಾತ್ರ ಜೀವನದಲ್ಲಿ ಪ್ರಗತಿ ಸಾಧಿಸಲು ಸಾಧ್ಯ. ನ್ಯಾಯದಾನದಲ್ಲಿ ವಿಳಂಬ ಮಾಡದೆ ಶೀಘ್ರವಾಗಿ ನ್ಯಾಯ ದೊರಕಿಸಿಕೊಡುವುದಕ್ಕೆ ವಕೀಲರು ಹೆಚ್ಚು ಆಸಕ್ತಿ ವಹಿಸಬೇಕು’ ಎಂದರು.

‘ನ್ಯಾಯಾಂಗ ಇಲಾಖೆಗೆ ರಾಜ್ಯ ಸರ್ಕಾರ ಹೆಚ್ಚಿನ ಅನುದಾನ ನೀಡುತ್ತಿದೆ. ಅಂತೆಯೇ ಹೊಸ ಹೊಸ ಕಟ್ಟಡಗಳೂ ಮೇಲೇಳುತ್ತಿವೆ. ಇದರೊಂದಿಗೆ ನ್ಯಾಯಾಂಗ ಇಲಾಖೆ ಮೇಲಿನ ಜವಾಬ್ದಾರಿಗಳೂ ಹೆಚ್ಚಾಗುತ್ತಿವೆ. ಸರ್ಕಾರ ನೀಡುವ ಹಣ ವ್ಯರ್ಥವಾಗದಂತೆ ನೋಡಿಕೊಳ್ಳಬೇಕು. ನೂತನ ಕಟ್ಟಡಗಳನ್ನು ಉತ್ತಮವಾಗಿ ನ್ಯಾಯದಾನ ಮಾಡಲು ಸದುಪಯೋಗ ಮಾಡಿಕೊಳ್ಳಬೇಕು. ವಕೀಲರು, ನ್ಯಾಯಾಧೀಶರು ಬದ್ಧತೆಯಿಂದ ಕೆಲಸ ಮಾಡಬೇಕು’ ಎಂದು ಹೇಳಿದರು.

‘ನ್ಯಾಯಾಂಗ ವ್ಯವಸ್ಥೆಯಲ್ಲಿರುವವರೆಗೆ ವಿಶ್ರಾಂತಿಯ ಅಗತ್ಯವಿದೆ. ವಾರಪೂರ್ತಿ ಒತ್ತಡದಲ್ಲಿರುವ ಅವರಿಗೆ ಒಂದು ದಿನ ಕುಟುಂಬದೊಂದಿಗೆ ಸಮಯ ಕಳೆಯುವುದಕ್ಕೆ ಅವಕಾಶ ಮಾಡಿಕೊಡಬೇಕು. ನ್ಯಾಯಾಧೀಶರು, ವಕೀಲರು ಯಂತ್ರಗಳಲ್ಲ. ಅವರಿಗೂ ಕುಟುಂಬ ಇರುತ್ತದೆ. ಹೀಗಾಗಿ ಮುಂದಿನ ದಿನಗಳಲ್ಲಿ ಭಾನುವಾರ ಸಭೆ-ಸಮಾರಂಭಗಳನ್ನು ಆಯೋಜಿಸುವುದು ಬೇಡ. ಎಲ್ಲರೂ ಅಂದು ಸಂತೋಷದಿಂದ ಕಾಲ ಕಳೆಯುವುದಕ್ಕೆ ಅವಕಾಶ ನೀಡಬೇಕು’ ಎಂದು ಹೇಳಿದರು.

ನ್ಯಾಯಾಧೀಶ ಇಂದಿರೇಶ್ ಮಾತನಾಡಿ ‘ಮಂಡ್ಯದಲ್ಲಿ ನಿರ್ಮಾಣಗೊಂಡಿರುವ ಮಧ್ಯಸ್ಥಿಕೆ ಕೇಂದ್ರದ ಕಟ್ಟಡ ಉತ್ತಮವಾಗಿದೆ. ಜನರಿಗೆ ಉತ್ತಮ ನ್ಯಾಯ ನೀಡಲು ಈ ಕಟ್ಟಡ ಬಳಕೆಯಾಗಬೇಕು. ವಕೀಲಿ ವೃತ್ತಿ ಪವಿತ್ರವಾದುದು. ವೃತ್ತಿಗೆ ಯಾವುದೇ ಚ್ಯುತಿ ಬಾರದಂತೆ ಎಲ್ಲರೂ ಉತ್ತಮವಾಗಿ ಕಾರ್ಯ ನಿರ್ವಹಿಸಬೇಕು. ನ್ಯಾಯಾಂಗ ವ್ಯವಸ್ಥೆಯ ಮೇಲೆ ಜನರು ಇಟ್ಟಿರುವ ಗೌರವ, ನಂಬಿಕೆ, ವಿಶ್ವಾಸಗಳು ಮತ್ತಷ್ಟು ಹೆಚ್ಚಬೇಕು’ ಎಂದು ಹೇಳಿದರು.

ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಮಾತನಾಡಿ ‘ವಕೀಲರು ನ್ಯಾಯಾಲಯದ ಮೌಲ್ಯ ಎತ್ತಿಹಿಡಿಯಬೇಕು. ದಕ್ಷತೆ, ಪ್ರಾಮಾಣಿಕತೆ, ಬದ್ಧತೆ ಹಾಗೂ ಉತ್ಸಾಹದಿಂದ ಕೆಸಲ ಮಾಡಬೇಕು. ನ್ಯಾಯಾಂಗ ಬಹಳ ಗೌರವಾನ್ವಿತ ಸಂಸ್ಥೆ’ ಎಂದು ಹೇಳಿದರು.

ಜಿಲ್ಲಾ ಪ್ರಧಾನ ಸತ್ರ ನ್ಯಾಯಾಧೀಶೆ ಎಚ್.ಜಿ.ವಿಜಯಕುಮಾರಿ, ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಜಿ.ಬಸವರಾಜು, ನ್ಯಾಯಾಧೀಶೆ ಎನ್.ಡಿ.ಮಾಲಾ, ವಕೀಲರ ಸಂಘದ ಅಧ್ಯಕ್ಷ ಸಿ.ಎಲ್.ಬಸವರಾಜು, ವಿಶಾಲ್ ರಘು, ನವೀನ್, ವರದರಾಜು ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು