ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ವಲಸಿಗರಿಗೆ ಕೋವಿಡ್‌ ಪರೀಕ್ಷೆ ಕಡ್ಡಾಯ

ಹೊರಜಿಲ್ಲೆಯಿಂದ ಬಂದವರ ಕೈಗಳಿಗೆ ಸೀಲ್‌ ಇಂದಿನಿಂದ, ಹೋಂ ಕ್ವಾರಂಟೈನ್‌ಗೆ ಆದ್ಯತೆ
Last Updated 14 ಜುಲೈ 2020, 16:57 IST
ಅಕ್ಷರ ಗಾತ್ರ

ಮಂಡ್ಯ: ಬೆಂಗಳೂರು ಸೇರಿ ಹೊರ ಜಿಲ್ಲೆಗಳಿಂದ ಬರುವ ವಲಸಿಗರಿಗೆ ಕಡ್ಡಾಯವಾಗಿ ಕೋವಿಡ್ ಪರೀಕ್ಷೆ ನಡೆಸಲು ಜಿಲ್ಲಾಡಳಿತ ಯೋಜನೆ ರೂಪಿಸಿದೆ. ಅದಕ್ಕಾಗಿ ವಲಸಿಗರ ಕೈಗಳಿಗೆ ಸೀಲ್‌ ಹಾಕುವಂತೆ ಆರೋಗ್ಯ ಇಲಾಖೆ ಸಿಬ್ಬಂದಿಗೆ ಸೂಚಿಸಲಾಗಿದೆ.

ಗ್ರಾಮೀಣ ಪ್ರದೇಶಕ್ಕೆ ಹೆಚ್ಚಿನ ಸಂಖ್ಯೆಯ ಜನರು ಬರುತ್ತಿರುವ ಹಿನ್ನೆಲೆಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ಸೋಂಕು ಹೆಚ್ಚಾಗುತ್ತಿದೆ. ಸೋಂಕು ನಿಯಂತ್ರಣಕ್ಕಾಗಿ ಕೋವಿಡ್‌ ಪರೀಕ್ಷೆ ಪ್ರಮಾಣ ಮತ್ತಷ್ಟು ಹೆಚ್ಚಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಗ್ರಾಮ ಪಂಚಾಯಿತಿ ಪದಾಧಿಕಾರಿಗಳು, ಕಾರ್ಯಪಡೆ ಸದಸ್ಯರ ಸಹಾಯ ಪಡೆದು ಹೋಂ ಕ್ವಾರಂಟೈನ್‌ಗೆ ಆದ್ಯತೆ ನೀಡಲಾಗುತ್ತಿದೆ. ವಲಸಿಗರು ಅನವಶ್ಯಕವಾಗಿ ಹೊರಗೆ ಓಡಾಡದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸ್ಥಳೀಯ ಪೊಲೀಸರಿಗೂ ಸೂಚನೆ ನಿಡಲಾಗಿದೆ.

‘ಜ್ವರದಿಂದ ಬಳಲುವವರು, ತೀವ್ರ ಉಸಿರಾಟದ ಸಮಸ್ಯೆ ಇರುವವರಿಗೆ ಆದ್ಯತೆಯ ಮೇರೆಗೆ ಕೋವಿಡ್‌ ಪರೀಕ್ಷೆ ಮಾಡಲಾಗುತ್ತಿದೆ. ಸ್ವಯಂ ಪ್ರೇರಿತವಾಗಿ ಬಂದವರ ಗಂಟಲು ದ್ರವ ಪಡೆದು ಪರೀಕ್ಷೆಗೆ ಕಳುಹಿಸಲಾಗುತ್ತಿದೆ. ವಲಸಿಗರೆಲ್ಲರ ಪರೀಕ್ಷೆ ನಡೆಸುವ ನಿರ್ಧಾರ ಕೈಗೊಳ್ಳಲಾಗಿದ್ದು ಎಲ್ಲರನ್ನೂ ಗುರುತಿಸಲು ಬುಧವಾರದಿಂದ ಸೀಲ್‌ ಹಾಕಲಾಗುತ್ತಿದೆ’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಚ್‌.ಪಿ.ಮಂಚೇಗೌಡ ಹೇಳಿದರು.

‘ಮಿಮ್ಸ್‌ ಆಸ್ಪತ್ರೆಯಲ್ಲಿರುವ ಪ್ರಯೋಗಾಲಯದಲ್ಲಿ ನಿತ್ಯ 800 ಮಂದಿಯ ಗಂಟಲು ದ್ರವ ಸಂಗ್ರಹಿಸಿ ಪರೀಕ್ಷೆ ಮಾಡಲಾಗುತ್ತಿದೆ. ಇನ್ನೆರಡು ದಿನದಲ್ಲಿ ಇನ್ನೊಂದು ಯಂತ್ರ ಬರಲಿದ್ದು ಇನ್ನೂ 500 ಮಂದಿಯ ಪರೀಕ್ಷೆ ನಡೆಸಬಹುದಾಗಿದೆ. ಆದಿಚುಂಚನಗಿರಿ ವೈದ್ಯಕೀಯ ಕಾಲೇಜಿನ ಪ್ರಯೋಗಾಲಯ ಕಾರ್ಯಾರಂಭ ಮಾಡಿದ್ದು ಅಲ್ಲಿ ನಿತ್ಯ 300 ಮಂದಿಯ ಪರೀಕ್ಷೆ ಮಾಡಲಾಗುತ್ತಿದೆ’ ಎಂದು ಹೇಳಿದರು.

‘8 ತಿಂಗಳು ತಂಬಿದ ಎಲ್ಲಾ ಗರ್ಭಿಣಿಯರಿಗೆ ಕಡ್ಡಾಯವಾಗಿ ಕೋವಿಡ್‌ ಪರೀಕ್ಷೆ ನಡೆಸಲಾಗುತ್ತಿದೆ. ಹೆರಿಗೆ ಮಾಡುವುದಕ್ಕೂ ಮೊದಲು ಕೋವಿಡ್‌ ಪರೀಕ್ಷೆ ಮಾಡಬೇಕಾಗಿದೆ. ಹೆರಿಗೆಗೆ ಬರುವ ಮೊದಲು ಕೆಲವರು ಪರೀಕ್ಷೆ ಮಾಡಿಸಿಕೊಳ್ಳುತ್ತಿದ್ದಾರೆ. ಇನ್ನೂ ಕೆಲವರಿಗೆ ಹೆರಿಗೆ ಸಂದರ್ಭದಲ್ಲಿ ಪರೀಕ್ಷೆ ನಡೆಸಲಾಗುತ್ತಿದೆ’ ಎಂದು ಹೇಳಿದರು.

******

1000 ಆಂಟಿಜೆನ್‌ ಕಿಟ್‌

‘ತುರ್ತು ಅಗತ್ಯವಿರುವ ರೋಗಿಗಳಿಗೆ ಕೋವಿಡ್‌ ಪರೀಕ್ಷೆ ನಡೆಸಿ 20 ನಿಮಿಷದೊಳಗೆ ಫಲಿತಾಂಶ ಪಡೆಯಲು ಜಿಲ್ಲೆಗೆ 1 ಸಾವಿರ ಆಂಟಿಜೆನ್‌ ಕೋವಿಡ್‌ ಪರೀಕ್ಷಾ ಕಿಟ್‌ ಬಂದಿವೆ’ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌ ಹೇಳಿದರು.

‘ತೀವ್ರ ಉಸಿರಾಟದ ಸಮಸ್ಯೆಯುಳ್ಳವರಿಗೆ ಚಿಕಿತ್ಸೆ ನೀಡಲು ತಕ್ಷಣವೇ ಕೋವಿಡ್‌ ಪರೀಕ್ಷಾ ವರದಿಯ ಅವಶ್ಯಕತೆ ಇರುತ್ತದೆ. ಗರ್ಭಿಣಿಯರಿಗೆ ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಮಾಡಬೇಕಾದ ಸ್ಥಿತಿ ಎದುರಾದಾಗ ಈ ಕಿಟ್‌ಗಳು ಸಹಾಯಕ್ಕೆ ಬರುತ್ತವೆ’ ಎಂದು ಹೇಳಿದರು.

***********

ಒಂದೇ ದಿನ 38 ಮಂದಿಗೆ ಕೋವಿಡ್‌

ಮಂಗಳವಾರ ಒಂದೇ ದಿನ 38 ಮಂದಿಯಲ್ಲಿ ಕೋವಿಡ್‌–19 ಪತ್ತೆಯಾಗಿದ್ದು ಜಿಲ್ಲೆಯ ಒಟ್ಟು ರೋಗಿಗಳ ಸಂಖ್ಯೆ 756ಕ್ಕೆ ಏರಿಕೆಯಾಗಿದೆ.

ಬೆಂಗಳೂರು ಸೇರಿ ವಿವಿಧ ಜಿಲ್ಲೆಗಳಿಂದ ಬಂದವರು ಹಾಗೂ ಈಗಾಗಲೇ ರೋಗ ಪತ್ತೆಯಾಗಿರುವ ಪ್ರಥಮ ಸಂಪರ್ಕಿತರಲ್ಲಿ ಸೋಂಕು ಪತ್ತೆಯಾಗಿದೆ. ಎಲ್ಲರನ್ನೂ ಕೋವಿಡ್‌ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ.

ಕೋವಿಡ್‌ನಿಂದ ಗುಣಮುಖರಾದ 28 ಮಂದಿಯನ್ನು ಮಂಗಳವಾರ ಜಿಲ್ಲಾಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು. ಇಲ್ಲಿಯವರೆಗೂ 533 ಮಂದಿ ಕೋವಿಡ್‌ನಿಂದ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. 223 ಪ್ರಕರಣಗಳು ಸಕ್ರಿಯವಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT