ಸೋಮವಾರ, ಜುಲೈ 26, 2021
27 °C
ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಳವಳ್ಳಿ ತಾಲ್ಲೂಕಿನ ವ್ಯಕ್ತಿಗೆ ಸೋಂಕು ದೃಢ

ಐವರಿಗೆ ಕೋವಿಡ್‌: 343ಕ್ಕೆ ಏರಿಕೆಯಾದ ಸಂಖ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಡ್ಯ: ಹೊಸದಾಗಿ ಭಾನುವಾರ ಐವರಲ್ಲಿ ಕೋವಿಡ್‌–19 ಪತ್ತೆಯಾಗಿದ್ದು ಒಟ್ಟು ರೋಗಿಗಳ ಸಂಖ್ಯೆ 343ಕ್ಕೆ ಏರಿಕೆಯಾಗಿದೆ. ನಾಲ್ವರು ಮುಂಬೈ ವಲಸಿಗರು, ಮಳವಳ್ಳಿಯ ಒಬ್ಬ ವ್ಯಕ್ತಿಗೆ ಸೋಂಕು ಪತ್ತೆಯಾಗಿದೆ.

ನಾಗಮಂಗಲ ತಾಲ್ಲೂಕಿನ ಮೂವರು ಜೂನ್‌ ಮೊದಲ ವಾರದಲ್ಲಿ ಮುಂಬೈನಿಂದ ಬಂದಿದ್ದರು. ಬೆಳ್ಳೂರು ಕ್ರಾಸ್‌ ಚೆಕ್‌ಪೋಸ್ಟ್‌ಗೆ ಬಂದ ಅವರನ್ನು ಕ್ವಾರಂಟೈನ್‌ ಮಾಡಲಾಗಿತ್ತು. ಮುಂಬೈನಿಂದ ಕೆ.ಆರ್‌.ಪೇಟೆಗೆ ಬಂದ ಒಬ್ಬರಿಗೂ ಸೋಂಕು ಪತ್ತೆಯಾಗಿದೆ. ಈ ನಾಲ್ವರಿಗೆ ರೋಗ ಲಕ್ಷಣ ಕಂಡುಬಂದಿಲ್ಲ. ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದ್ದು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ.

ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಮಳವಳ್ಳಿ ತಾಲ್ಲೂಕಿನ ವ್ಯಕ್ತಿಯೊಬ್ಬರು ಬೆಂಗಳೂರಿನ ಕೆಂಪೇಗೌಡ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಡಯಾಲಿಸಿಸ್‌ ಚಿಕಿತ್ಸೆ ಪಡೆಯುತ್ತಿದ್ದರು. ಅವರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಿದಾಗ ಸೋಂಕು ಇರುವುದು ಪತ್ತೆಯಾಗಿದೆ. ನಂತರ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅವರು ಮಳವಳ್ಳಿ ವಿಳಾಸ ನೀಡಿದ್ದ ಪರಿಣಾಮ ಅವರನ್ನು ಮಂಡ್ಯ ಜಿಲ್ಲೆ ಸಂಖ್ಯೆಗೆ ಸೇರಿಸಲಾಗಿದೆ. ಸದ್ಯ ಜಿಲ್ಲೆಯಲ್ಲಿ 261 ಮಂದಿ ಗುಣಮುಖರಾಗಿದ್ದು 81 ಸಕ್ರಿಯ ಪ್ರಕರಣಗಳು ಇವೆ.

ವಲಸಿಗರಿಗೆ ಪರೀಕ್ಷೆ

ಅಂತರರಾಜ್ಯ ಪ್ರವಾಸಕ್ಕೆ ಯಾವುದೇ ಅಡೆತಡೆ ಇಲ್ಲದ ಕಾರಣ ಈಗಲೂ ಮುಂಬೈನಿಂದ ಜಿಲ್ಲೆಗೆ ಬರುತ್ತಿದ್ದಾರೆ. ಆದರೆ ಮೊದಲಿನಷ್ಟು ಹೆಚ್ಚಿನ ಸಂಖ್ಯೆ ಇಲ್ಲ. ಅಂತರರಾಜ್ಯದಿಂದ ಬಂದ ಎಲ್ಲರನ್ನೂ ಚೆಕ್‌ಪೋಸ್ಟ್‌ನಲ್ಲಿಯೇ ತಡೆದು ಕ್ವಾರಂಟೈನ್‌ಗೆ ಒಳಪಡಿಸಲಾಗುತ್ತಿದೆ.

‘ಸರ್ಕಾರದ ಸೂಚನೆಯಂತೆ 7ನೇ ದಿನಕ್ಕೆ ಕ್ವಾರಂಟೈನ್‌ ವಾಸಿಗಳನ್ನು ಮನೆಗೆ ಕಳುಹಿಸಬಹುದು. ಆದರೆ ಮುಂಜಾಗ್ರತಾ ಕ್ರಮವಾಗಿ ನಾವು 14 ದಿನಗಳವರೆಗೂ ಕಾದು ಬಿಡುಗಡೆ ಮಾಡುತ್ತಿದ್ದೇವೆ. ಶೀಘ್ರಗತಿಯಲ್ಲಿ ಕೋವಿಡ್ ಪರೀಕ್ಷೆ ನಡೆಸಲಾಗುತ್ತಿದ್ದು ನೆಗೆಟಿವ್‌ ಬರುವವರೆಗೂ ಕಾಯಲಾಗುತ್ತಿದೆ. ಎರಡು ಬಾರಿ ನೆಗೆಟಿವ್‌ ಬಂದ ನಂತರವಷ್ಟೇ ಬಿಡುಗಡೆ ಮಾಡುತ್ತಿದ್ದೇವೆ’ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌ ಹೇಳಿದರು.

‘ಕ್ವಾರಂಟೈನ್‌ ಕೇಂದ್ರಗಳಲ್ಲಿ ವಲಸಿಗರ ಸಂಖ್ಯೆ ಕಡಿಮೆಯಾಗಿದ್ದು ಸಿಬ್ಬಂದಿಯ ಒತ್ತಡ ಕಡಿಮೆಯಾಗಿದೆ. ಈಗ ಯಾವುದೇ ಗೊಂದಲಗಳು ಇಲ್ಲ. ಅವರಿಗೆ ಪೌಷ್ಟಿಕಾಂಶವುಳ್ಳ ಆಹಾರ ನೀಡಲಾಗುತ್ತಿದೆ. ವಲಸಿಗರು ಕೂಡ ನಮ್ಮ ಸೂಚನೆಗಳನ್ನು ಪಾಲನೆ ಮಾಡುತ್ತಾ ಸಹಕಾರ ನೀಡುತ್ತಿದ್ದಾರೆ. ಮುಂದೆ ಮುಂಬೈನಿಂದ ಎಷ್ಟು ಜನರು ಬಂದರೂ ಪರಿಸ್ಥಿತಿಯನ್ನು ನಿಭಾಯಿಸಲು ಸಜ್ಜಾಗಿದ್ದೇವೆ’ ಎಂದು ಹೇಳಿದರು.

‘ವಿಶೇಷವಾಗಿ ಮಂಡ್ಯ ಜಿಲ್ಲೆಯಲ್ಲಿ ಶೀಘ್ರವಾಗಿ ಗುಣಮುಖರಾಗುತ್ತಿದ್ಧಾರೆ. 60 ವರ್ಷಕ್ಕಿಂತಲೂ ಹೆಚ್ಚು ವಯಸ್ಸಾಗಿರುವ ವ್ಯಕ್ತಿಗಳೂ ಕೋವಿಡ್‌ನಿಂದ ಮುಕ್ತರಾಗುತ್ತಿರುವುದು ಸಂತಸದಾಯಕ ಬೆಳವಣಿಗೆಯಾಗಿದೆ. ಆದರೂ ಜನರು ಎಚ್ಚರಿಕೆಯಿಂದ ಇರಬೇಕು. ಎಲ್ಲೆಡೆ ಲಾಕ್‌ಡೌನ್‌ ಸಡಿಲಗೊಂಡಿದ್ದು ಜನರು ತಮ್ಮ ವೈಯಕ್ತಕ ಎಚ್ಚರಿಕೆಯಿಂದ ಇರಬೇಕು. ಎಲ್ಲೇ ಹೋದರೂ ಮಾಸ್ಕ್‌ ಜೊತೆಯಲ್ಲಿ ಇರಬೇಕು’ ಎಂದು ಸಲಹೆ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು