ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

3 ತಿಂಗಳು ಕರು ಸಾಕಿ ನಂತರ ಗೋಶಾಲೆಗೆ ಬಿಡಿ: ಸಚಿವ ಪ್ರಭು ಚವಾಣ

mnd
Last Updated 15 ಫೆಬ್ರುವರಿ 2021, 12:52 IST
ಅಕ್ಷರ ಗಾತ್ರ

ಮಂಡ್ಯ: ‘ಹಸು, ಎಮ್ಮೆಯ ಕರುಗಳನ್ನು ಗೋಶಾಲೆ ಮುಂದೆ ಬಿಟ್ಟುಹೋಗುತ್ತಿರುವ ಮಾಹಿತಿ ಬಂದಿದೆ. ರೈತರು ಕಡ್ಡಾಯವಾಗಿ ಕರುಗಳನ್ನು 3 ತಿಂಗಳವರೆಗೆ ಸಾಕಿ, ನಂತರ ಗೋಶಾಲೆಗಳಿಗೆ ಬಿಡಬೇಕು’ ಎಂದು ಪಶುಸಂಗೋಪನಾ ಸಚಿವ ಪ್ರಭು ಚವಾಣ್‌ ಸೋಮವಾರ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ ಜಾರಿಯಾದ ನಂತರ ಕರುಗಳನ್ನು ಮಾರಾಟ ಮಾಡುವಂತಿಲ್ಲ. ಗಂಡು ಕರುವಾಗಿರಲಿ, ಹೆಣ್ಣು ಕರುವಾಗಿರಲಿ ರೈತರು ಅವುಗಳನ್ನು ನಿಗದಿತ ಅವಧಿವರೆಗೆ ತಾಯಿ ಹಸು, ಎಮ್ಮೆಯೊಂದಿಗೆ ಬೆಳೆಯಲು ಬಿಡಬೇಕು. ಈ ಬಗ್ಗೆ ಅಧಿಕಾರಿಗಳು ರೈತರ ಮನವೊಲಿಸಬೇಕು. ಹಳ್ಳಿಗಳಿಗೆ ತೆರಳಿ ಕಾಯ್ದೆಯವಿಷಯ ಕುರಿತು ಜನರಲ್ಲಿ ಅರಿವು ಮೂಡಿಸಬೇಕು’ ಎಂದರು.

‘ಇನ್ನು ಮುಂದೆ ಎಲ್ಲೆಡೆ ಗೋಶಾಲೆಗಳು ಹೆಚ್ಚಾಗಲಿದ್ದು ಮೇವಿನ ಕೊರತೆಯಾಗದಂತೆ ನೋಡಿಕೊಳ್ಳಬೇಕು. ಮೇವು ಬೆಳೆಯಲು ಗೋಮಾಳಗಳ ಅವಶ್ಯಕತೆ ಇದೆ. ಒತ್ತವರಿಯಾಗಿರುವ ಗೋಮಾಳಗಳನ್ನು ತಕ್ಷಣವೇ ಬಿಡಿಸಿಕೊಳ್ಳಬೇಕು. ಗೋಮಾಳಗಳಲ್ಲಿ ಕಲ್ಲು ಗಣಿಗಾರಿಕೆ ನಡೆಯುತ್ತಿರುವ ಮಾಹಿತಿ ಇದೆ. ಜಿಲ್ಲಾಧಿಕಾರಿಗಳು ತಹಶೀಲ್ದಾರ್‌ ಸಭೆ ಕರೆದು ಗೋಮಾಳ ಬಿಡಿಸಿಕೊಳ್ಳಲು ಸೂಚನೆ ನೀಡಬೇಕು’ ಎಂದರು.

‘ಗೋಹತ್ಯೆ ನಿಷೇಧ ಕಾಯ್ದೆ ಜಾರಿಯ ನಂತರ ಆಡು, ಕುರಿ, ಕೋಳಿ ಮಾಂಸಕ್ಕೆ ಅಪಾರ ಬೇಡಿಕೆ ಬಂದಿದೆ. ಆಡು,ಕುರಿ ಸಾಕಣೆಗೆ ಪ್ರೋತ್ಸಾಹ ನೀಡಬೇಕು. ಸಂಚಾರ ಮಾಂಸದಂಗಡಿ ನಡೆಸುವವರಿಗೆ ಸಹಾಯಧನ ಒದಗಿಸಬೇಕು. ಪ್ರಾಣಿ ಹಿಂಸೆ ತಡೆಯುವುದಕ್ಕಾಗಿ ರಾಜ್ಯದಲ್ಲೇ ಮೊದಲ ಬಾರಿಗೆ ಪ್ರಾಣಿ ಕಲ್ಯಾಣ ಮಂಡಳಿ ಸ್ಥಾಪಿಸಲಾಗುವುದು’ ಎಂದರು.

‘ತುಮಕೂರು ಜಿಲ್ಲೆ, ಶಿರಾ ತಾಲ್ಲೂಕಿನ ಚೀಲನಹಳ್ಳಿಯ 20 ಎಕರೆ ಭೂಮಿಯಲ್ಲಿ ನಬಾರ್ಡ್‌ ಮೂಲಕ ಕುರಿ, ಮೇಕೆ, ಮಾಂಸ ಸಂಸ್ಕರಣಾ ಘಟಕ (ವಧಾಗಾರ) ಸ್ಥಾಪನೆ ಮಾಡಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT